ಮಿಝೊರಾಮಿನ ಈ ಪುಟ್ಟ ಕಂದ ಡೆರಿಕ್ ಸಿ. ಲಾಲ್ಚನ್ಹಿಮಾ ತನ್ನ ಸೈಕಲ್ಲಿಗೆ ಸಿಕ್ಕು ಅಪಘಾತಕ್ಕೀಡಾದ ಕೋಳಿಮರಿಯನ್ನು ಹೊತ್ತು ಇನ್ನೊಂದು ಕೈಲಿ 10ರೂಪಾಯಿ ಹಿಡಿದು ಆಸ್ಪತ್ರೆಗೆ ಹೋಗಿ ಕೋಳಿಮರಿಯನ್ನು ಹೇಗಾದರೂ ಮಾಡಿ ಬದುಕಿಸಿಕೊಡುವಂತೆ ದೈನ್ಯದಿಂದ ವಿನಂತಿಸುವ ಫೋಟೋ ವೈರಲ್ ಆಯ್ತು. ಈ ಸಂದರ್ಭದಲ್ಲಿ ಹಳೆಯದೊಂದು ನೆನಪು.

ನಾವು ಚಿಕ್ಕವರಿದ್ದಾಗ ನಮ್ಮ ಕೋಳಿಮರಿಗಳಿಗೆ ಹೀಗೆಯೇ ಏನಾದರೂ ಆದಾಗ ನನ್ನ ಮತ್ತು ನನ್ನ ತಮ್ಮನ ಬೊಬ್ಬೆ ಕೇಳಬೇಕಿತ್ತು. ಆಗ ಅಂಥ ಕೋಳಿಮರಿಯನ್ನು ಬದುಕಿಸಲು ನಾವು ಒಂದು ಮಣ್ಣಿನ ಗಡಿಗೆಯನ್ನು ಕೋಳಿಪಿಳ್ಳೆಯ ಮೇಲೆ ಬೋರಲಾಗಿ ಕವುಚಿ, ಒಂದು ಗೆರಟೆ ಚಿಪ್ಪನ್ನು ಬೋರಲು ಗಡಿಗೆಯ ಮೇಲೆ ಕವುಚಿ ಅದನ್ನು ಕೈಯಲ್ಲಿ ಹಿಡಿದು ವೃತ್ತಾಕಾರವಾಗಿ ಏಕತಾನತೆಯಿಂದ ಗಂಟೆಗಟ್ಟಲೆ ಗರಾಗರಾಗರಾ ತಿರುಗಿಸುತ್ತಿದ್ದೆವು. ಹೀಗೆ ಮಾಡಿದರೆ ಅಸ್ವಸ್ಥವಾಗಿ ಧಾತು ತಪ್ಪಿದ ಕೋಳಿಮರಿ ಮತ್ತೆ ಮೊದಲಿನಂತಾಗುವುದು ಎಂದು ನಮಗೆ ಯಾರೋ ಹೇಳಿದ್ದರು. ಹೀಗೆ ಮಾಡಿ ಒಂದಾದರೂ ಕೋಳಿಮರಿ ಬದುಕಿದ ಉದಾಹರಣೆ ಇರಲಿಲ್ಲವಾದರೂ ಬೇರೆ ದಾರಿ ಕಾಣದೆ ಅಳುತ್ತಾ ಗಡಿಗೆಯ ಮೇಲೆ ಗರಾಗರಾಗರಾ ಮಾಡುತ್ತಿದ್ದೆವು.

ಒಂದೆರಡು ವರ್ಷದ ಕೆಳಗೆ ಮನೆ ಪೇಂಟ್ ಮಾಡಿಸುತ್ತಿದ್ದೆ. ನನ್ನ ಬೆಕ್ಕು ವಿಷಕಾರಿಯಾದ ಏನನ್ನೋ ತಿಂದು ಮನೆಗೆ ಬಂದು ಒದ್ದಾಡತೊಡಗಿತು. ಏನುಮಾಡುವುದೆಂದೇ ಕೈಕಾಲು ಆಡುತ್ತಿಲ್ಲ. ಅಂಥ ಹೊತ್ತಲ್ಲಿ ನಮ್ಮ ಪೇಂಟ್ ಹುಡುಗ, “ಒಂದ್ ಮಣ್ಣಿನ್ ಗಡಿಗೆ ತಂದು ಬೆಕ್ಕಿನ ಮೇಲೆ ಕವುಚಿ ಗೆರಟೆ ಚಿಪ್ಪಿಂದ ಗರಾಗರಾ ತಿರುಗಿಸ್ರೀ ಮೇಡಮ್. ನಿಮ್ ಬೆಕ್ಕು ಎದ್ದು ಓಡಲ್ಲ ಅಂದ್ರೆ ಕೇಳಿ!” ಎಂದ.

ತಲೆಕೆಟ್ಟ ನಾನು ಹಾಗೆಯೇ ಮಾಡಲೂ ಹಿಂದೆಗೆಯುತ್ತಿರಲಿಲ್ಲವೇನೋ. ಅಷ್ಟರಲ್ಲಿ ಬೆಕ್ಕಿನ ಪ್ರಾಣ ಹೋಗಿಯೇಬಿಟ್ಟಿತು!

ಮೂಕ ಪ್ರಾಣಿ ಪಕ್ಷಿಗಳ ಸಾವು ನೋವು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಬೀರುವ ಪ್ರಭಾವ ಬಹಳ ದೊಡ್ಡದು. ಅದಕ್ಕೇ ನಾನನ್ನುವುದು, ಮಕ್ಕಳನ್ನು ನಿರ್ಜೀವ ಗೊಂಬೆಗಳ ಜೊತೆಗೆ ಬೆಳೆಸದೆ, ಪ್ರಾಣಿ ಪಕ್ಷಿಗಳ ಜೊತೆ ಬೆಳೆಸಿ. ಅಂಥ ಮಕ್ಕಳು ಸಂವೇದನಾಶೀಲರಾಗುತ್ತಾರೆ ಎಂದು.

ಲೇಖನ – ಕಾದಂಬಿನಿ

Leave a Reply