ನವದೆಹಲಿ: ಕೋರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಮೇ 3ಕ್ಕೆ ಅಂತ್ಯವಾಗುವಂತೆ ಘೋಷಿಸಿರುವ ಲಾಕ್‌ಡೌನ್ ನಿಯಮಗಳಲ್ಲಿ ಕೇಂದ್ರಸರ್ಕಾರ ಮತ್ತಷ್ಟು ಸಡಿಲಿಕೆ ಮಾಡಿದೆ. ಆದರೆ ಮದ್ಯ ಮಾರಾಟ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದು, ಸೆಲೂನ್ ಮತ್ತು ರೆಸ್ಟೋರೆಂಟ್‌ಗಳಿಗೆ ಅವಕಾಶ ನೀಡಿಲ್ಲ. ಶುಕ್ರವಾರ ತಡರಾತ್ರಿ ಕೇಂದ್ರ ಗೃಹಸಚಿವಾಲಯ ಸಡಿಲಿಕೆ ಮಾರ್ಗದರ್ಶಿ ಪ್ರಕಟಿಸಿದ್ದು, ಸಣ್ಣ ಉದ್ದಿಮೆಗಳ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಟ್ಟಿದೆ. ದಿನಕಳೆದಂತೆ ಕೆಲವೆಡೆ ಕೊರೊನಾ ಸೋಂಕು ನಿಯಂತ್ರಣ ಬರುತ್ತಿದೆ ಎನ್ನುವಾಗಲೇ ಮತ್ತೆ ಕೆಲವೆಡೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1778 ಹೊಸ ಸೋಂಕು ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ. ಭಾರತದಲ್ಲಿ ಒಟ್ಟು 24,942 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ 6817 ಸೋಂಕು ವರದಿಯಾಗಿದ್ದು ಒಂದೇ ದಿನ 387 ಪ್ರಕರಣ ಪತ್ತೆಯಾಗಿದೆ. ಮುಂಬೈ ಮಹಾನಗರದ ದಾರಾವಿ ಸ್ಲಮ್ ನಲ್ಲಿ ಅನಿಯಂತ್ರಿತ ಸೋಂಕು ಆತಂಕ ಸೃಷ್ಟಿಸಿದೆ. ಈವರೆಗೆ ರಾಜ್ಯದಲ್ಲಿ 301 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಗುಜರಾತ್‌ನಲ್ಲಿ 2815 ಸೋಂಕಿದ್ದು ಮೃತರ ಸಂಖ್ಯೆ 127ಕ್ಕೇರಿದೆ. ಜತೆಗೆ ಮುಂಬೈನಾದ್ಯಂತ ಎಲ್ಲ ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳನ್ನು ತೆರೆದು ಕೊರೊನಾ ಚಿಕಿತ್ಸೆಗೆ ಮೀಸಲಿಡುವಂತೆ ಆದೇಶಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೊರೊನಾ ಪರೀಕ್ಷೆ ಶುಲ್ಕವನ್ನು 2500ಕ್ಕೆ ನಿಗದಿಗೊಳಿಸಿದೆ. ಈ ಹಿಂದೆ 4500 ರೂಪಾಯಿ ಇತ್ತಾದರೂ ಎಲ್ಲರಿಗೂ ಆ ಮೊತ್ತ ಭರಿಸಲು ಕಷ್ಟ ಎಂದರಿತು ಈ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಇದೇ ದರ ಅನ್ವಯವಾಗಲಿದೆ. ಏತನ್ಮಧ್ಯೆ ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 27.92 ಲಕ್ಷಕ್ಕೇರಿದ್ದು 1.96 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಅತಿಹೆಚ್ಚು 9 ಲಕ್ಷ ಸೋಂಕಿತರು ಪತ್ತೆಯಾಗಿದ್ದು ದಾಖಲೆಯ 51,017 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 25,969 ಜನರು ಮೃತಪಟ್ಟಿದ್ದಾರೆ. ಸೇನ್‌ನಲ್ಲಿ 2.19 ಲಕ್ಷ ಸೋಂಕಿತರಿದ್ದು 22,524 ಮಂದಿ ಅಸುನೀಗಿದ್ದಾರೆ.

LEAVE A REPLY

Please enter your comment!
Please enter your name here