ಪಾರ್ಟ್ ಟೈಂ ಮಾಡಿ ಕಲಿಯುವುದುದ್ ಅಷ್ಟು ಸುಲಭ ಅಲ್ಲ. ಹಾಲು ಮಾರಿ, ಪೇಪರ್ ಹಾಕಿ ಕಲಿತು ದೊಡ್ಡ ವ್ಯಕ್ತಿಗಳಾದವರನ್ನು ನಾವು ಅದೆಷ್ಟೋ ನೋಡಿದ್ದೇವೆ. ರಾತ್ರಿ ನಿದ್ದೆ ಬಿಟ್ಟು ಹಗಲು ಕಲಿತು ಚಿನ್ನದ ಪದಕ ಗಳಿಸಿದ ಯುವಕನ ಸ್ಟೋರಿ ಅಚ್ಚರಿದಾಯಕವಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಗೂಂಡೂರು ಗ್ರಾಮದ ರಮೇಶ ಮನೆಯಲ್ಲಿ ಬಡತನ ಮತ್ತು ಆರ್ಥಿಕ ಸಮಸ್ಯೆ ಇದೆಯೆಂದು ಮನಗಂಡು ರಾತ್ರಿ ಎಟಿಎಂ ಮೆಷಿನ್ ಕಾಯುವ ಕೆಲಸಕ್ಕೆ ಸೇರುತ್ತಾನೆ. ಆದರೆ ತನ್ನ ಓದಿನ ಛಲವನ್ನು ಬಿಡದ ರಮೇಶ ಎಲ್ಲರೂ ಅಚ್ಚರಿ ಮಾಡುವಂತಹ ಸಾಧನೆ ಮಾಡುತ್ತಾನೆ.

ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ (ಎಂ.ಎ,) ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಎಲ್ಲರಿಗೂ ಮಾದರಿ ಮತ್ತು ಸ್ಪೂರ್ತಿಯಾಗಿದ್ದಾನೆ. ಚಿನ್ನದ ಪದಕ ಬಾಚಿಕೊಂಡಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕಾಲು ಚಾಚಿ ಮಲಗಲು ಆಗದಷ್ಟುಜೋಪಡಿ ಇದ್ದರೂ ಓದುವ ಛಲ ಬಿಡದ ಯುವಕ ಇಂದು ಸ್ಫೂರ್ತಿದಾಯಕ ಸಾಧನೆ ಮಾಡಿದ್ದಾನೆ.

ಮನೆಯಲ್ಲಿ ಬಡತನ ಇದೆಯೆಂದು ಹೆತ್ತವರು ಕೆಲಸಕ್ಕೆ ಹೋಗು ಎನ್ನುತ್ತಿದ್ದರು. ಅದಕ್ಕಾಗಿ ಕೂಲಿ, ಇನ್ನಿತರ ಕೆಲಸಗಳನ್ನು ಮಾಡುತ್ತಲೇ ತನ್ನ ಕಲಿಕೆಯನ್ನು ಮುಂದುವರೆಸುತ್ತಾ ಬಂದ. ಗಂಗಾವತಿಯ ಸಿಂಡಿಕೇಟ್‌ ಬ್ಯಾಂಕ್‌ನ ಎಟಿಎಂನಲ್ಲಿ ರಾತ್ರಿ ವೇಳೆ ಸೆಕ್ಯುರಿಟಿ ಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಾ, ಗಂಗಾವತಿ ಕೊಲ್ಲಿ ನಾಗೇಶ್ವರರಾವ್‌ ಪದವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ.

2017-18ನೇ ಸಾಲಿನ ಕನ್ನಡ ಎಂಎ ಅಂತಿಮ ಫಲಿತಾಂಶದಲ್ಲಿ ಈತನಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಬಂತು. ಸ್ನಾತಕೋತ್ತರ ಪದವಿಯ ಕನ್ನಡ ವಿಭಾಗದಲ್ಲಿ 2200 ಅಂಕಗಳಿಗೆ 1734 ಅಂಕ ಪಡೆಯುವ ಮೂಲಕ ಶೇ.78.08ರಷ್ಟುಸಾಧನೆ ಮಾಡಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಜನನಾಗುತ್ತಾನೆ.

ಎಎಂ ಮಾಡುವುದಕ್ಕಿಂತ ಮುಂಚೆ ಕೂಲಿ ಕೆಲಸ ಮಾಡಿ ಬಿಎಡ್ ಕೋರ್ಸನ್ನೂ ಮುಗಿಸಿದ್ದಾನೆ. ಐವರು ಮಕ್ಕಳಲ್ಲಿ ರಮೇಶ್ ದೊಡ್ಡವನು. ದೊಡ್ಡ ಮಕ್ಕಳಿಗೆ ಜವಾಬ್ದಾರಿ ಹೆಚ್ಚು ಇರುತ್ತದೆ. ಆದರೆ ರಮೇಶ್ ಚಿಕ್ಕಂದಿನಲ್ಲೇ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿ ಸ್ಪೂರ್ತಿಯಾಗಿದ್ದಾನೆ.

Leave a Reply