ಈ ಕೆಳಗಿನ‌ ಚಿತ್ರಗಳು ನಾನು ಕಳೆದೆರಡು ತಿಂಗಳ ಹಿಂದೆ ‘ಘಿಸಾಡಿ’ ಸಮುದಾಯವನ್ನು ಹುಡುಕಿ ಹೊರಟಾಗ ಕಂಡಂತವು.. ಈ ಚಿತ್ರಗಳು ಇವರ ಪರಿಸ್ಥಿತಿ ಯನ್ನು ಅನಾವರಣ ಮಾಡುತ್ತವೆ, ಗುಲ್ಬರ್ಗ, ಬಾಗಿಲಕೋಟೆಯೇ ಮುಂತಾದ ಗ್ರಾಮಾಂತರ ಪ್ರದೇಶದಲ್ಲಿ ಗುಡಾರ, ಟೆಂಟ್ ಹಾಕಿಕೊಂಡು ಸಣ್ಣ ಕುಲುಮೆ ಇಟ್ಟುಕೊಂಡು ರೈತಾಪಿ ಜನಕ್ಕೆ ಕುಡಗೋಲು, ಸನಿಖೆ, ಗುದ್ದಲಿ, ಪಿಕಾಸಿ ತಟ್ಟಿಕೊಡುವ ಕಾಯಕ ಈ ‘ಘಿಸಾಡಿ’ ಎನ್ನುವ ಅಲೆಮಾರಿಗಳದು.

ಇವರು ದಿನನಿತ್ಯ ಅಲೆದಾಡುತ್ತಾ ಹಾಸಿ,ಉಂಡು ಮಲಗುವುದು ಬಡತನವನ್ನೇ..! ಸರ್ಕಾರದಿಂದ ಈ ಸಮುದಾಯಕ್ಕೆ ಚಿಕ್ಕಾಸಿನ‌ ಸಹಾಯ ಕೂಡ ಆಗಿಲ್ಲ..! ಸರ್ಕಾರಕ್ಕೆ ಇಂತದ್ದೊಂದು ಸಮುದಾಯ ಇದೆ ಎಂಬ ಪರಿವೇ ಇದ್ದಂತಿಲ್ಲ.!! ರಸ್ತೆಬದಿಯ ಸರ್ಕಾರದ ಜಾಹೀರಾತಿನ ಪ್ಲೆಕ್ಸ್ ಗಳನ್ನು ಮತ್ತು ಮಾದ್ಯಮಗಳಲ್ಲಿ ಸದಾ ವಿಜೃಂಬಿಸುವ ಸರ್ಕಾರದ ಜನಪರ ಯೋಜನೆಗಳ ಜಾಹೀರಾತನ್ನು ಕಂಡು ಆಸೆಯಿಂದ ಸಾಲಕ್ಕೆ ಅರ್ಜಿ ಹಾಕಿದ ಈ ಜನ ರೈಲು ಹತ್ತಿ ಬೆಂಗಳೂರಿಗೆ ಬಂದಿದ್ದಾರೆ.

‘ನಮಗೆ ನಾಲ್ಕು ಕಾಸು ಸಾಲ ಕೊಡಿಸಿ ಸಾ.. ನಾವು ರಾತ್ರಿಹಗಲು ದುಡಿದು ತೀರಿಸುತ್ತೇವೆ..’ ಎಂದು ನನ್ನ ಕಛೇರಿಯಲ್ಲಿ ಕುಂತು ಅಂಗಲಾಚುತಿದ್ದಾರೆ. ನಾನೇನು ಮಾಡಲಿ? ನಾನು ಅಸಹಾಯಕ.. ಇವರದು ಸಂಘಟಿತ ಓಟಿಲ್ಲದ ಕಾರಣ ಸ್ಥಳೀಯ ಶಾಸಕರು ಇವರನ್ನು ಕ್ಯಾರೆ ಎನ್ನಲ್ಲ.. ಅಧಿಕಾರಿಗಳ ಕಣ್ಣಿಗಂತೂ ಇವರು ಕಾಣಲ್ಲ..!

ಸರಿ, ಇದ್ದಬದ್ದ ಮಂತ್ರಿ, ಅಧಿಕಾರಿಗಳನ್ನು ಎಡತಾಕಲು ಯತ್ನಿಸುತಿದ್ದೇನೆ.. ಯಾರೂ ಸಿಗುತ್ತಿಲ್ಲ.. ಇವರನ್ನು ಬರಿಗೈಯಲ್ಲಿ ಕಳಿಸುವ ಮನಸ್ಸಿಲ್ಲ.. ಏನು ಮಾಡುವುದು..?

ಸಿ ಎಸ್ ದ್ವಾರಾಕ್ ನಾಥ್

Leave a Reply