ಉಡುಪಿ ಜಲ್ಲೆಯ ಪಡುಬಿದ್ರಿಯ ಉಚ್ಚಿಲದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡಿದ್ದ ಹಿಂದೂ ಯುವಕನನ್ನು ಮುಸ್ಲಿಮ್ ಯುವಕರ ತಂಡ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಜತೆಗೆ ಶೀಘ್ರವೇ ಗುಣಮುಖವಾಗುವಂತೆ ಪ್ರಾರ್ಥನೆ ಮಾಡಲು ಸಾಮಾಜಿಕ ಜಾಲ ತಾಣಗಳ ಮೂಲಕ ಮನವಿ ಮಾಡಿದ್ದು ವೈರಲ್ ಆಗಿದೆ.

ಭಾನುವಾರ ರಾತ್ರಿ 10.30ರ ವೇಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕಾರೊಂದು ಪಾದಚಾರಿ ಮಿಥುನ್ ಎಂಬವರಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಬಡಾ ಗ್ರಾಮ ಪಂಚಾಯ್ತಿ ಸದಸ್ಯ ದೀವ್ ರಫೀಕ್ ಎಂಬುವರು ಕೂಡಲೇ ಅವರ ಕಾರಿನಲ್ಲಿ ಸ್ನೇಹಿತರ ಜತೆಗೆ ಕರೆದುಕೊಂಡು ಹೋಗಿ ಉಡುಪಿ ಆಸ್ಪತ್ರೆಗೆ ದಾಖಲಿಸಿದರು. ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಿಥುನ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಎಂದು ಉಚ್ಚಿಲದ ಮುಸ್ಲಿಂ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ.

ನಮ್ಮ ಕಡೆ ಯಾರಾದರೂ ಅಪಘಾತವಾದರೆ ಕೂಡಲೇ ನಾವು ಜಾತಿ ಮತ ಧರ್ಮ ಬೇಧ ಮರೆತು ಅವರ ಪ್ರಾಣವುಳಿಸಲು ಮುಂದಾಗುತ್ತೇವೆ ಎಂದು ಶಾಫಿ ಹೇಳಿದ್ದಾರೆ.

ಕೋಮು ದಳ್ಳುರಿಗೆ ತುತ್ತಾಗಿರುವ ಕರಾವಳಿಯಲ್ಲಿ ಮಾನವೀಯತೆ ಇನ್ನೂ ಜೀವಂತವಿದೆ ಎಂಬ ಸಂದೇಶ ಸಾರುವ ಇಂತಹಾ ಘಟನೆಗಳ ಆಗಾಗ ನಡೆಯುತ್ತಿದ್ದರೂ ವಾತಾವರಣ ಕೆಡಿಸುವವರು ಕೆಡಿಸುತ್ತಲೇ ಇದ್ದಾರೆ.

ದೀವ್ ರಫೀಕ್ ಅವರ ಕಾರ್ಯಕ್ಕೆ ಉಚ್ಚಿಲ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply