ಸಾಂದರ್ಭಿಕ ಚಿತ್ರ

ತಮ್ಮಷ್ಟೇ ಎತ್ತರಕ್ಕೆ ಬೆಳೆದು ನಿಂತ ಮಗನ ಕುರಿತು ಎಲ್ಲ ತಂದೆಯಂದಿರಿಗೆ ವಿಶೇಷ ನಿರೀಕ್ಷೆಗಳಿರುತ್ತವೆ. ವಿಶೇಷ ವಾಗಿ ವಿದೇಶದಲ್ಲಿ ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಊರಿಗೆ ಬಂದು ಹೆಂಡತಿ ಮಕ್ಕಳನ್ನು ಸೇರುವ ಸಹೋದರರಿಗಂತೂ ಮಕ್ಕಳು ಅದೆಷ್ಟು ಬೇಗ ಬೆಳೆದು ದೊಡ್ಡವರಾಗಿ ಬಿಟ್ಟಿದ್ದಾರೆ ಎಂದು ಅನಿಸುವುದು ಸುಳ್ಳಲ್ಲ. ಮಕ್ಕಳಾದ ಮೇಲೆ ಹೆತ್ತವರಿಗೆ ಸರ್ವಸ್ವವೂ ಮಕ್ಕಳೇ. ಎಲ್ಲವನ್ನೂ ಮಾಡುವುದು ಮಕ್ಕಳಿಗಾಗಿ.

ಮಕ್ಕಳಿಗೂ ತಮ್ಮದೇ ಆದ ಬೇಡಿಕೆ ಗಳಿರುತ್ತವೆ. ವಾಚು, ಹೊಸಬಟ್ಟೆ, ಸೈಕಲ್, ಗೆಳೆಯನ ಬಳಿ ಇರುವಂತಹ ಅಥವಾ ಅದಕ್ಕಿಂತಲೂ ಹೊಸ ಮಾಡೆಲಿನ ಶೂಸ್ ಇತ್ಯಾದಿ ಇತ್ಯಾದಿ. ಇವೆಲ್ಲ ಬಯಕೆಗಳೂ ಸಹಜ. ಸಾಧ್ಯವಾದರೆ ನಮ್ಮ ಮಿತಿಯೊಳಗೆ ಈಡೇರಿಸುವುದಿದ್ದರೂ ಚೆನ್ನ. ಆದರೆ ಇಂದಿನ ಯುವ ಪ್ರಾಯ ತಲುಪುತ್ತಿರುವ ಮಕ್ಕಳ ಬೇಡಿಕೆಗಳೋ ಹೊಸ ಬೈಕ್, ಹೊಸ ಕಾರು.

ಊರಿಗೆ ಬಂದ ತಂದೆ ಮಕ್ಕಳನ್ನು ಶಾಲೆಯಿಂದ ಮರಳಿ ತರುವ, ಕರೆದು ಕೊಂಡು ಹೋಗುವ ಕೆಲಸವನ್ನು ಮಾಡುತ್ತಾರೆ. ಆಗೆಲ್ಲ ಸಹಜವಾದ ಸಲಿಗೆಯಿಂದ ತಂದೆಯ ಜೊತೆ ನಾನು ಬೈಕನ್ನು ಬಿಡುತ್ತೇನೆ ಎಂದು ಬೇಡಿಕೆ ಇಡುವ ಹತ್ತು ವರ್ಷದ ಮಗನನ್ನು ಎದುರು ಕುಳ್ಳಿರಿಸಿ ಬೈಕಿನ ಹ್ಯಾಂಡಲ್ ಗಳನ್ನು ಅವನ ಕೈಗೆ ಕೊಟ್ಟು ಹಿಂದೆ ಕುಳಿತು ಗಮನಿಸಿ ಆನಂದಿಸುವ ತಂದೆ ಯಂದಿರ ಸಂಖ್ಯೆ ಹೆಚ್ಚಿದೆ. ಮಕ್ಕಳಿಗೆ ಬೈಕ್ ಬಿಡಲು ಕಲಿಯುವ ತುಡಿತ. ಸ್ವತಂತ್ರವಾಗಿ ಬೈಕ್ ಬಿಡುವುದಕ್ಕೆ ಒಂದು ರೀತಿಯ ಹುಚ್ಚು ಆವೇಶ. ಹತ್ತು ವರ್ಷ ಪ್ರಾಯವಾಗುವಾಗಲೇ ಈ ಬಗ್ಗೆ ಕುತೂಹಲ ಆರಂಭವಾಗಿ 13 ವರ್ಷ ವಯಸ್ಸಿಗೆಲ್ಲ ನಿಲ್ಲಿಸಿದ ಬೈಕನ್ನೋ ಸ್ಕೂಟರನ್ನೋ ಹೇಳದೆ ಕೇಳದೆ ತೆಗೆದು ಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.

ವಿದೇಶದ ಮರಳುಗಾಡಿನಲ್ಲಿ ದುಡಿಯುವುದು ಮಕ್ಕಳಿಗಾಗಿ ಅಲ್ಲವೇ? ಅವರಿಗೆ ಸಂತೋಷವಾಗುವುದಿದ್ದರೆ ಬೈಕ್ ಕೊಡಿಸಿದರೆ ತಪ್ಪೇನು? ಎಂಬುದು ಕೆಲವು ಹೆತ್ತವರ ಉದಾರ ನೀತಿ. ಮಕ್ಕಳ ಸಂತೋಷಕ್ಕೆ ಅಡ್ಡಿ ಬಂದರೆ ಅವರಿಗೆ ಸಹಿಸಲಾಗದ ವೇದನೆ. ಆದರೆ ಇದು ಏಕೆ? ಎಂಬುದು ಪ್ರಶ್ನೆ. ಕಳೆದ ಕೆಲವು ದಿನಗಳಲ್ಲಿ ಮೇಲಿಂದ ಮೇಲೆ ವರದಿ ಯಾಗುತ್ತಿರುವ ಅಪಘಾತಗಳಲ್ಲಿ ತಮ್ಮ ಹದಿಹರೆಯದ ಮಕ್ಕಳನ್ನು ಕಳೆದು ಕೊಂಡ ಹೆತ್ತವರ ಮುಂದಿನ ಜೀವನ ಆ ಮಕ್ಕಳ ನೆನಪಿನಲ್ಲಿ ಹೇಗಿರಬಹುದು ಊಹಿಸಿ ನೋಡಿ. ಆಗ ಅವರಿಗನ್ನಿಸು ವುದು ನಾವಿನ್ನು ದುಡಿಯುವುದು ಯಾರಿಗಾಗಿ? ಯಾಕಾಗಿ?

ಇತ್ತೀಚೆಗೆ ಮದುವೆ ಮನೆಯಲ್ಲಿ ಸಂಭ್ರಮದಲ್ಲಿ ಮದುಮಕ್ಕಳಿಗೆ ಮದರಂಗಿ ಇಡುತ್ತಿದ್ದಲ್ಲಿಗೆ ಬಂದ ಮಗ ತಾಯಿಯೊಂದಿಗೆ ಒತ್ತಾಯಪೂರ್ವಕ ಬೈಕಿನ ಚಾವಿಯನ್ನು ಕೇಳಿಕೊಂಡು ಬೈಕ್ ಚಲಾಯಿಸಿ ಹೊರಟ ಮಗ ಮನೆಗೆ ಮರಳಿದ್ದು ಹೆಣವಾಗಿ. ಆ ತಾಯಿಯ ಪರಿಸ್ಥಿತಿ ಹೇಗಿರಬಹುದು ಊಹಿಸಿ ನೋಡಿ. ಈ ರೀತಿಯ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ.
ವಿದೇಶದಲ್ಲೇ ಉದ್ಯೋಗ ಮಾಡಿ ಕುಟುಂಬ ಸಲಹುತ್ತಿದ್ದ ವ್ಯಕ್ತಿ ಇತ್ತೀಚೆಗೆ ಎಂಬಂತೆ ಹೆಂಡತಿ ಮಕ್ಕಳನ್ನು ಊರಿಗೆ ಕಳುಹಿಸಿದ್ದರು. ದೊಡ್ಡ ಮಗ ತಂದೆಯ ಕೆಲಸದಲ್ಲಿ ಕೈಜೋಡಿಸಿ ಅಲ್ಲೇ ಉಳಿದಿದ್ದ. ಊರಿಗೆ ಬಂದ ಮಕ್ಕಳು ಸಣ್ಣ ವಯಸ್ಸಿನವರು. ಆದರೂ ತಂದೆ ಉಪಯೋಗಿಸು ತ್ತಿದ್ದ ಬೈಕಿನ ಕೀಯನ್ನು ಪಡೆದುಕೊಂಡು ಚಲಾಯಿಸಿ ದುರ್ಮರಣಕ್ಕೀಡಾದರು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆಂದು ಊರಿಗೆ ಕಳುಹಿಸಿದ್ದರೆ ಮಕ್ಕಳು ಇಲ್ಲಿ ಹೆಣವಾಗಿದ್ದರು. ಇವೆಲ್ಲವನ್ನೂ ಓದುವಾಗ ಸೂಕ್ತ ಪ್ರಾಯ ತಲುಪದ ಮಕ್ಕಳಿಗೆ ಚಲಾಯಿಸಲು ಕಲಿಸುವ ಅಗತ್ಯವಿದೆಯೇ ಅನ್ನಿಸುತ್ತದೆ.

ಬೈಕ್ ಇದು ಒಂದೆರಡು ಕುಟುಂಬದ ಕಥೆಯಲ್ಲ. ಹುಟ್ಟು ಹಬ್ಬಕ್ಕೋ ಉತ್ತಮ ಫಲಿತಾಂಶ ಸಿಕ್ಕಿದೆಯೆಂದೋ ದೊರೆತ ಬೈಕು ಕಾರುಗಳು ಮಕ್ಕಳ ಮರಣಕ್ಕೆ ಕಾರಣವಾಗಿ ಇಡೀ ಕುಟುಂಬವನ್ನು ಶಾಶ್ವತ ದುಃಖಕ್ಕೀಡು ಮಾಡಿದ ವಾರ್ತೆಗಳು ಹಳ್ಳಿಗಲ್ಲಿಗಳಲ್ಲಿ ನಮಗೆ ಕೇಳಲು ಸಿಗುತ್ತದೆ.

ಬೈಕುಗಳಲ್ಲಿ ರೇಸ್ ಮಾಡುವುದು. ಬೈಕಿನಲ್ಲಿ ಕುಳಿತೇ ಸರ್ಕಸ್ ಮಾಡುವುದು ಕೌಮಾರ್ಯ ಪ್ರಾಯದ ಮಕ್ಕಳ ಅಭ್ಯಾಸ. ಹೆಲ್ಮೆಟ್ ಧರಿಸಿದ್ದಾರೆಯೇ ಎಂದು ಕಾದು ಕುಳಿತು ಫೈನ್ ಹಾಕುವ ಟ್ರಾಫಿಕ್ ಪೋಲೀಸರ ಕೈಗಳಿಗೆ ಇವರು ಸುಲಭದಲ್ಲಿ ಸಿಗುವುದಿಲ್ಲ. ಏಕೆಂದರೆ ಇವರು ಪೊಲೀಸರಿಗಾಗಿ ಹೆಲ್ಮೆಟ್ ಧರಿಸಿರುತ್ತಾರೆ. ಆದರೆ ಕಡ್ಡಾಯವಾಗಿ ಇರಬೇಕಾದ ಚಾಲನಾ ಪತ್ರ (ಲೈಸನ್ಸ್) ಅವರಲ್ಲಿ ಇರುವುದೇ ಇಲ್ಲ. ಏಕೆಂದರೆ ಅವರಿಗೆ 18 ವರ್ಷ ತುಂಬಿರುವುದಿಲ್ಲ. ಎಂಟು ಒಂಭತ್ತನೇ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳನ್ನು ಬೈಕು ಕೊಟ್ಟು ನಗರಕ್ಕೆ ಕಳುಹಿಸುವ ಹೆತ್ತವರಿಗೆ ಸನ್ಮಾನ!? ಮಾಡಬೇಕು.

ಸಣ್ಣ ವಯಸ್ಸಿನಲ್ಲೇ ಮಗ ಬೈಕು, ಕಾರು ಓಡಿಸುವು ದನ್ನು ಕಲಿತಿದ್ದಾನೆ ಎಂಬುದನ್ನು ಹೆಮ್ಮೆಯಿಂದ ಕೊಚ್ಚಿಕೊಳ್ಳುವ ಹೆತ್ತವರಿದ್ದಾರೆ. ಇವರು ತಿಳಿದಿರಬೇಕಾದ ವಿಷಯವೇನೆಂದರೆ ಈ ರೀತಿ ಅಪರ ವೇಳೆಯಲ್ಲಿ ನಿಮ್ಮೊಂದಿಗೆ ಅನುಮತಿ ಕೇಳದೆ ಅವರಿಷ್ಟದ ವೇಗದಲ್ಲಿ ವಾಹನ ಓಡಿಸುತ್ತಾರೆ. ಟ್ರಾಫಿಕ್ ಮುಖ್ಯ ಅಧಿಕಾರಿಯೊಬ್ಬರ ಪ್ರಕಾರ ಈ ರೀತಿಯ ಮಕ್ಕಳಲ್ಲಿ ಹೆಚ್ಚಿನವರು ಸಣ್ಣ ಪ್ರಾಯದಲ್ಲೇ ಅಪಘಾತಕ್ಕೀಡಾಗಿ ಮರಣವನ್ನಪ್ಪುತ್ತಾರೆ.

ಬಸ್ಸುಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸುವ ರೀತಿ ಯಲ್ಲೇ ಈ ಯುವ ಸಮೂಹದ ಬೈಕಿನ ವೇಗಕ್ಕೆ ನಿಯಂತ್ರಣ ವನ್ನು ಅಳವಡಿಸಬೇಕಿದೆ. ಅಡ್ಡಾದಿಡ್ಡಿಯಾಗಿ, ಶೋಕಿಗಾಗಿ, ಬೈಕನ್ನು ಚಲಾಯಿಸುವವರನ್ನು ಹಿಡಿದು ಒಂದೆರಡು ದಿನ ಲಾಕಪ್ಪಿನಲ್ಲಿಡಬೇಕು. ಹಣ, ಹೊಸ ರೀತಿಯ ಮೊಬೈಲ್ ಮತ್ತು ಆಧುನಿಕ ಬೈಕ್ ಇವಿಷ್ಟಿದ್ದರೆ ಮಕ್ಕಳಿಗೆ ಸ್ವರ್ಗಕ್ಕೆ ಮೂರೇ ಗೇಣು. ಹೆತ್ತವರಿಗೆ ಮಕ್ಕಳೊಂದಿಗೆ ಪ್ರೀತಿ ಇರಬೇಕು. ಆದರೆ ಆ ಪ್ರೀತಿ ಕುರುಡಾಗಿರಬಾರದು. ಮಕ್ಕಳ ಭವಿಷ್ಯವನ್ನು ರೂಪಿಸು ವವರು ಮಕ್ಕಳಿಗೆ ಏನು? ಯಾವಾಗ? ಏಕೆ? ಕೊಡಿಸಬೇಕು ಎಂಬುದರ ಪ್ರಾಥಮಿಕ ಜ್ಞಾನ ಹೊಂದಿರಬೇಕು.

ಲೇಖಕರು : ಎಂ.ಮುರ್ಸಿ

Leave a Reply