ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯ ದುರಾಡಳಿತ ವಿರುದ್ಧ ಬಿಜೆಪಿ ಪರಿವರ್ತನಾ ಯಾತ್ರೆ ಕೈಗೊಂಡಿದೆ. ಆದರೆ ಈ ಯಾತ್ರೆಗೆ ರಾಜ್ಯದ ಯಾವ ನಾಯಕರೂ ಪರಿಪೂರ್ಣ ಬೆಂಬಲ ನೀಡಿ ಪಾಲ್ಗೊಳ್ಳುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಭಾನುವಾರ ನಡೆದ ರಾಜ್ಯ ಪ್ರಮುಖರ ಸಮಿತಿ ಸಭೆಯಲ್ಲಿ, ‘ಪರಿವರ್ತನಾ ಯಾತ್ರೆಯಲ್ಲಿ ಎಲ್ಲ ನಾಯಕರೂ ಒಗ್ಗಟ್ಟು ಪ್ರದರ್ಶಿಸದೆ ಇರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ’ ಎಂದು ಅವರು ರಾಷ್ಟ್ರೀಯ ಅಧ್ಯಕ್ಷರಲ್ಲಿ ದೂರಿದ್ದಾರೆ.
ಪರಿವರ್ತನಾ ಯಾತ್ರೆಯಲ್ಲಿ ಎಲ್ಲ ನಾಯಕರೂ ತಪ್ಪದೆ ಪಾಲ್ಗೊಳ್ಳಬೇಕು. ನೀವೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಅಮಿತ್ ಶಾ ಆದೇಶ ನೀಡಿದ್ದಾಗಿ ವರದಿಯಾಗಿದೆ.
ಸಿದ್ದರಾಮಯ್ಯ ಸರಕಾರದ ವೈಫಲ್ಯಗಳ ಪಟ್ಡಿ ತಯಾರಿಸಿ ರಾಜ್ಯದ ಜನತೆಯ ಮುಂದಿಡಬೇಕು ಮತ್ತು ಮನೆ ಮನೆಗೆ ತಲಪಿಸಬೇಕು. ಕಾಂಗ್ರೆಸ್ ಸರಕಾರದ ಈಡೇರದ ಭರವಸೆಗಳನ್ನು ಜನರಿಗೆ ಮನವರಿಕೆ ಮಾಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಾಕೀತು ಮಾಡಿದ್ದಾರೆ.