ಪೆಪ್ಸಿ, ಕೋಕೋಕೋಲಾ, ಸೆವೆನ್ ಅಪ್, ಫಾಂಟಾ ಮುಂತಾದ ತಂಪು ಪಾನೀಯಗಳ ತಯಾರಿಕಾ ಘಟಕವೊಂದರ ಕಾರ್ಮಿಕನಿಗೆ ಎಬೋಲ ವೈರಸ್ ತಗಲಿದೆ ಮತ್ತು ಆತ ತನ್ನ ದೇಹಕ್ಕೆ ಇರಿದು ಅದರಿಂದ ಒಸರಿದ ರಕ್ತವನ್ನು ತಂಪು ಪಾನೀಯಗಳನ್ನು ತಯಾರಿಸಲು ಬಳಸುವ ನೀರಿನ ಬೃಹತ್ ತೊಟ್ಟಿಗೆ ಹರಿಯಬಿಟ್ಟಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿಯೊಂದನ್ನು ಯಾರೋ ಹರಿಯಬಿಟ್ಟಿದ್ದಾರೆ. ಆ ಸುದ್ದಿ ವೈರಲ್ ಆಗಿದೆ ಕೂಡಾ.

ವಿಚಿತ್ರವೇನೆಂದರೆ ಅಂತಹ ತಂಪು ಪಾನೀಯಗಳೇ ಮಾರಕ ವಿಷ, ನಿಧಾನವಾಗಿ ಅದು ಪ್ರಾಣಾಂತಿಕವಾಗುತ್ತದೆ…. ಎಲ್ಲಕ್ಕಿಂತ ಹೆಚ್ಚಾಗಿ ಅದು ಎಬೋಲ ವೈರಸ್ ಗಿಂತಲೂ ಅಪಾಯಕಾರಿ ಎಂಬ ಸಂಶೋಧನಾಧಾರಿತ ವಾಸ್ತವವನ್ನು ಅರಿತೂ ಜನ ಅವುಗಳನ್ನು ಸೇವಿಸುವುದನ್ನು ನಿಲ್ಲಿಸಿಲ್ಲ. ಅದೇ ಜನ ಇದೀಗ ಈ‌ ವದಂತಿಯನ್ನು ಇನ್ನಿಲ್ಲದಂತೆ ಪ್ರಚಾರ ಮಾಡುತ್ತಿದ್ದಾರೆ.

ನನ್ನ ಬರಹದ ಭಾಷೆ ಓದಿ ಅರ್ಥೈಸಬಲ್ಲ ಎಲ್ಲಾ ನನ್ನ ಸಹೋದರ ಸಹೋದರಿಯರಲ್ಲಿ ನನ್ನದೊಂದು ವಿನೀತ ವಿನಂತಿ.ನೀವು ಆ ತಂಪು ಪಾನೀಯಗಳ ಸೇವನೆಯನ್ನು ಶಾಶ್ವತವಾಗಿ ಬಿಟ್ಟು ಬಿಡಿ.

ಅದಕ್ಕೆ ವ್ಯಯಿಸುವ ದುಡ್ಡಿನಿಂದ ಎಳನೀರು ಕುಡಿಯಿರಿ,ಮಜ್ಜಿಗೆ ಕುಡಿಯಿರಿ,ನಿಂಬೂ ಶರ್ಬತ್ ಕುಡಿಯಿರಿ, ತಾಜಾ ಹಣ್ಣುಗಳ ರಸ ಸೇವಿಸಿರಿ. ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.. ಪ್ರತಿ ನಿತ್ಯ ಸಾಯುತ್ತಾ ಬದುಕುತ್ತಿರುವ ನಮ್ಮ ಅನ್ನದಾತರಿಗೂ ತುಸು ಸಹಾಯವಾದೀತು. ನಮ್ಮ ದುಡ್ಡು ನಮ್ಮ ಆರೋಗ್ಯಕ್ಕೂ ಹಿತಕಾರಿಯಾಗಲಿ, ಯಾರೋ ಬಹುರಾಷ್ಟ್ರೀಯ ಬಂಡವಾಳಶಾಹಿಗೆ ತಿನ್ನಿಸುವ ದುಡ್ಡನ್ನು ನಮ್ಮ ಅನ್ನದಾತರಿಗೆ ಉಣ್ಣಿಸಿ.. ಇದರಿಂದ ನಮ್ಮ ದೇಶಕ್ಕೂ ದೇಹಕ್ಕೂ ಹಿತವಾಗಬಲ್ಲುದು..

ಲೇಖಕರು : ಇಸ್ಮತ್ ಪಜೀರ್

ಸೂಚನೆ : ಎಬೋಲಾ ಎಂಬ ವೈರಸ್ ತಂಪು ಪಾನೀಯದಲ್ಲಿ ಮಿಶ್ರಿತ ವಾಗಿರುವುದು ಫೇಕ್ ಮೆಸೇಜ್ ಆಗಿದ್ದು, ಈ ಹಿಂದೆಯೂ ಇಂತಹ ಸಂದೇಶಗಳು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಏನ್ಡಿ ಟಿವಿ ಈ ಸುದ್ದಿ ಪ್ರಸಾರ ಮಾಡಿತು ಎಂಬ ಫೇಕ್ ಸಂದೇಶವೂ ಈ ಹಿಂದೆ ಹರಿದಾಡುತ್ತಿತ್ತು.

Leave a Reply