ಒಣ ಹಣ್ಣುಗಳೊಂದಿಗೆ ಚಿಪ್ಪಿನಂತಿರುವ ಎರಡು ದಳಗಳ ನಡುವಲ್ಲಿ ಕಂದು ಬಣ್ಣದ ತಿನಿಸನ್ನು ನೋಡಿರಬಹುದು. ಒಳಗೆ ತಿಳಿ ಹಸಿರ ಬಣ್ಣವನ್ನು ಹೊಂದಿರುವ ಇದನ್ನು ಉಪ್ಪಿನೊಂದಿಗೆ ಹುರಿದು ಒಣಹಣ್ಣುಗಳೊಂದಿಗೆ ಸೇರಿಸಲಾಗುತ್ತದೆ. ತಿನ್ನುತ್ತಿದ್ದಂತೆ ರುಚಿ ಹೆಚ್ಚುತ್ತಲೇ ಹೋಗುವಂತೆ ಕಾಣುವ ಪಿಸ್ತಾ ರುಚಿಗಷ್ಟೇ ಸೀಮಿತವಾಗಿರದೆ ದೇಹದ ಆರೋಗ್ಯದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ.

ಪಿಸ್ತಾ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ. ಪಿಸ್ತಾದಲ್ಲಿರುವ ಬಿ6 ವಿಟಾಮಿನ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಲ್ಲದೆ ಇದು ಆರೋಗ್ಯಕರ ರಕ್ತಕಣಗಳು ಹೆಚ್ಚುವುದಕ್ಕೆ ಸಹಕಾರಿಯಾಗಿದೆ. ರಕ್ತದಲ್ಲಿನ ಹಿಮೋಗ್ಲೊಬಿನ್ ಪ್ರಮಾಣವನ್ನು ಹೆಚ್ಚಿಸುವ ಜೊತೆಗೆ ಆಮ್ಲಜನಕದ ಪ್ರಮಾಣ ಹೆಚ್ಚಿರುವ ರಕ್ತ ದೇಹದ ಇತರ ಅಂಗಗಳಿಗೆ ರವಾನೆಯಾಗುವಂತೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಅಮೈನೋ ಆಮ್ಲ ಹೆಚ್ಚಲು ಮತ್ತು ದೇಹದ ನರವ್ಯೆಹ ಸರಿಯಾಗಿ ಕೆಲಸ ನಿರ್ವಹಿಸಲು ಪಿಸ್ತಾ ಸಹಕಾರಿಯಾಗಿದೆ. ಒಂದು ಹಿಡಿಯಷ್ಟು ಪಿಸ್ತಾಕ್ಕೆ ಸ್ವಲ್ಪ ಜೇನನ್ನು ಸೇರಿಸಿ ದಿನವೂ ಬೆಳಗ್ಗೆ ತಿನ್ನುತ್ತಿದ್ದರೆ ನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ.

ಹಸಿ ತರಕಾರಿ ಅಥವಾ ಸೊಪ್ಪಿನೊಂದಿಗೆ ಪಿಸ್ತಾ ಸೇವಿಸಿದರೆ ದೇಹವನ್ನು ಸದೃಢಗೊಳಿಸಲು ನೆರವಾಗುತ್ತದೆ. ಹಣ್ಣು, ಐಸ್‌ಕ್ರೀಮ್‌ಗಳೊಂದಿಗೂ ಪಿಸ್ತಾ ಮಿಶ್ರಣಮಾಡಿ ಸೇವಿಸಿದರೆ ರುಚಿಯೊಂದಿಗೆ ದೇಹದ ಆರೋಗ್ಯವನ್ನೂ ಸ್ವಾಸ್ಥ್ಯಪೂರ್ಣವಾಗುವಂತೆ ಮಾಡುತ್ತದೆ. ಬಿಳಿ ರಕ್ತಕಣಗಳನ್ನು ಹೆಚ್ಚಿಸುವಲ್ಲಿಯೂ ಇದು ಸಹಕಾರಿ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಪಿಸ್ತಾ ಸೇವಿಸುವುದರಿಂದ ರೋಗ ಹತೋಟಿಯಲ್ಲಿರುತ್ತದೆ. ಹೃದಯ ಸಂಬಂಧಿಕಾಯಿಲೆಯಿರುವವರು ಸಹ ಆಗಾಗ ಪಿಸ್ತಾ ಸೇವಿಸುತ್ತಿದ್ದರೆ ಸಮಸ್ಯೆ ನಿಯಂತ್ರಣದಲ್ಲಿರುವುದು. ಬೊಜ್ಜು ನಿಯಂತ್ರಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುವುದು. ಪಿಸ್ತದಲ್ಲಿ ವಿಟಾಮಿನ್ ಇ ಹೇರಳವಾಗಿರುವುದರಿಂದ ಚರ್ಮದ ಆರೋಗ್ಯವನ್ನು ಇದು ಕಾಪಾಡುತ್ತದೆ. ಶುಷ್ಕ ಚರ್ಮವನ್ನು ಹೊಂದಿರುವವರು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ಕಣ್ಣಿನ ಆರೋಗ್ಯದಲ್ಲೂ ಪಿಸ್ತಾ ಪ್ರಮುಖ ಪಾತ್ರ ವಹಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದಕ್ಕೂ ಇದು ನೆರವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಅಧರಕ್ಕಷ್ಟೇ ಅಲ್ಲದೆ, ಉದರಕ್ಕೂ ಪಿಸ್ತಾ ರುಚಿ ಎನ್ನಿಸಿದೆ.

LEAVE A REPLY

Please enter your comment!
Please enter your name here