ಚಿಕ್ಕಮಗಳೂರು : ಇಲ್ಲಿನ ಕಳಸ ಸಮೀಪದ ಹೊರನಾಡು ಅನ್ನ ಪೂರ್ಣೇಶ್ವರಿ ದೇವಸ್ಥಾನದ ಶರನ್ನವರಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿ ಕೊಳ್ಳಲಾಗಿದ್ದ ಜೀವ -ಭಾವ ಕಾರ್ಯಕ್ರಮ, ಸರ್ವ ಧರ್ಮ ಸಮ್ಮೇಳನ ಹಾಗೂ ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಡಿನ ಹಿರಿಯ ಚೇತನ ಮೈಸೂರಿನ ಸುತ್ತೂರು ಶ್ರೀಕ್ಷೇತ್ರದ ದೇಶೀಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀಕ್ಷೇತ್ರ ಹೊರನಾಡು ಇದರ ಧರ್ಮ ಕರ್ತರಾದ ಡಾ!ಜಿ.ಭೀಮೇಶ್ವರ ಜೋಷಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿಂದೂ ಧರ್ಮದ ಬಗ್ಗೆ ಶ್ರೀ ಮೇಲುಕೋಟೆ ಉಮಾಕಾಂತ ಭಟ್ ವಿವರವಾಗಿ ಮಾತನಾಡಿ ” ವಿವಿಧ ದಾರ್ಮಿಕ ವಿಚಾರಗಳು ಪರಸ್ಪರ ತಮ್ಮಲ್ಲಿ ಘರ್ಷಣೆಗೆ ಆಸ್ಪದ ನೀಡದೆ ವಸುದೈವ ಕುಟುಂಬಕಂ ಎಂಬ ಹಿಂದೂ ಧರ್ಮದ ಸಿದ್ದಾಂತದಂತೆ ಸರ್ವರಿಗೂ ಒಳಿತನ್ನು ಬಯಸುವುದೇ ನಿಜವಾದ ಹಿಂದೂ ಧರ್ಮ ” ಎಂದು ಹೇಳಿದರು.

ಕ್ರೈಸ್ತ ಧರ್ಮದ ಬಗ್ಗೆ ಉಡುಪಿ ಕ್ರೈಸ್ತ ಧರ್ಮ ಕ್ಷೇತ್ರದ ಮುಖ್ಯ ಗುರು ಫಾದರ್ ಚೇತನ್ ಲೋಬೋ ಮಾತನಾಡಿ ” ಒಂದು ಕೆನ್ನೆಗೆ ಬಾರಿಸಿದರೆ ಇನ್ನೊಂದು ಕೆನ್ನೆ ತೋರಿಸ ಬೇಕೆಂಬ ಕ್ರೈಸ್ತನ ಸಂದೇಶ ವನ್ನು ಗಾಂಧೀಜಿಯವರು ಭಾರತಕ್ಕೆ ಅಹಿಂಸಾ ತತ್ವದ ಮೂಲಕ ಕ್ರಿಯಾತ್ಮಕವಾಗಿ ಪರಿಚಯಿಸಿದ್ದಾರೆ “ಎಂದರು.

ಇಸ್ಲಾಂ ಧರ್ಮದ ಬಗ್ಗೆ ಪರಿಚಯ ಭಾಷಣ ಮಾಡಿದ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ, ಮುಲ್ಕಿ ಮಸೀದಿಯ ಧರ್ಮಗುರು ಎಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ ” ಇಡೀ ಮಾನವ ಕುಲಕ್ಕೆ ಒಬ್ಬನೇ ಸೃಷ್ಟಿಕರ್ತ ನಿದ್ದು ಅವನಿಗೆ ಹಲವು ನಾಮಗಳಿವೆ. ಸೌಹಾರ್ದತೆ ಎಂಬುವುದು ಪ್ರಕೃತಿಯಲ್ಲೇ ರೂಢಮೂಲವಾಗಿದ್ದು ಅದನ್ನು ಯಾರು ಕೆಡಿಸಲು ಪ್ರಯತ್ನಿಸಿದರೂ ಇನ್ನೊಂದು ಕಡೆ ಸೌಹಾರ್ದ ಪರಂಪರೆ ಹುಟ್ಟುತ್ತದೆ.ಇದಕ್ಕೆ ಶ್ರೀ ಕ್ಷೇತ್ರ ಹೊರನಾಡು ಸಾಕ್ಷಿಯಾಗಿದೆಇಸ್ಲಾಂ ಧರ್ಮ ಮೂರ್ತಿ ಪೂಜೆಯನ್ನು ಒಪ್ಪದಿದ್ದರೂ ಅವುಗಳನ್ನು ಅವಹೇಳನ ಮಾಡ ಬಾರದೆಂದು ತಾಕೀತು ನೀಡಿದೆ. ಇಸ್ಲಾಂ ಧರ್ಮದ ಬಗ್ಗೆ ಹಲವಾರು ತಪ್ಪು ಗ್ರಹಿಕೆಗಳು ಇತರ ಧರ್ಮೀಯರೆಡೆಯಲ್ಲಿ ಮನೆಮಾಡಿದ್ದು ಅದನ್ನು ನೀಗಿಸುವ ಕೆಲಸ ಮುಸ್ಲಿಮರಿಂದಲೇ ಆಗ ಬೇಕಾಗಿದೆ ” ಎಂದರು.

ಸುತ್ತೂರು ಮಠದ ಸ್ವಾಮೀಜಿಗಳು ಮಾತನಾಡಿ ” ಭಾರತದ ಶ್ರೇಷ್ಟತೆ ಏನೆಂದರೆ ಅದು ವೈವಿಧ್ಯತೆಯಿಂದ ಕೂಡಿದ ರಾಷ್ಟವಾಗಿರುವುದು.
ಇದು ಭಾರತದ ಶಕ್ತಿಯೂ ಹೌದು ಎಂದರು.
ಸಾವಿರಾರು ಜನರು ಸೇರಿದ ಕಾರ್ಯಕ್ರಮ ಸುಸ್ರೂತವಾಗಿ ಅಚ್ಚುಕಟ್ಟಿನಿಂದ ನಡೆದು ಎಲ್ಲರ ಗಮನ ಸೆಳೆಯಿತು.

Leave a Reply