ಮಡ್ಡು ರೋಡು ಹೇಳುತ್ತೆ. ಡಾಂಬರು ರಸ್ತೆಗೆ
ನಾನಲ್ಲ ನೀನು ಸೋತದ್ದು.
ಈ ಜನ ನನ್ನನ್ನು
ಮೆಟ್ಟಿ ಅಡ್ಡಾಡಿರೋದು, ಜಟಕಾ ಬಂಡಿ,
ಎತ್ತಿನ ಗಾಡಿ ಓಡಿಡಾಡಿರೋದು
ನನ್ನ ಎದೆ ಮೇಲೆ
ನಿನ್ನ ಎದೆ ಮೇಲೆ
ರೋಡ್‍ರೋಲರ್
ಹರಿಸುತ್ತಾರೆ
ನಿನ್ನ ಮೇಲೆ ಲಾರಿ ಕಾರುಗಳೇ
ಹೆಚ್ಚು ಓಡಾಡೋದು
ನನ್ನ ಮೇಲೆ ಓಡಾಡಿದ್ದು ದನಕರುಗಳು
ಕೆಲವೊಮ್ಮೆ ನನ್ನ ಮೇಲೆ
ಆಫಿಸರನ ಫೋರ್ಡ್, ಜಮಿನ್ದಾರನ ಫಿಯೆಟ್ಟು
ಓಡಾಡಿದ್ದು ನಿಜ.
ಆದರೂ ನನ್ನ ಮೇಲೆ ಹೆಚ್ಚು ಓಡಾಡಿದ್ದೇ
ಕುರಿಮೇಕೆಗಳು ದನಕರುಗಳು
ಅದಕ್ಕೆ ಹೊಟ್ಟೆ ತುಂಬಿಸುವ ಜರೂರತ್ತಿದೆ.
ಈಗಲೂ.
ನೀನೆಲ್ಲಿಗೆದ್ದೆ? ನಿನಗಿದೆಯಾ ಈ ತಾಕತ್ತು
ನಾನು ಸೋತದ್ದು ಎಲ್ಲಿ?
ನಾನು
ಗೊಲ್ಲರ ಕೊಳಲು ನಾದಕ್ಕೆ
ಪುಳಕಗೊಳ್ಳೋನು
ಕುರಿಗಾಹಿಗಳು ಹೊಯ್ಯೆಯ್ಯೆನ್ನುತ್ತಾ ಬಂದಾಗ
ಮುದಗೊಂಡವನು
ಹಾಗಿದ್ದರೆ ನಾನು ಸೋತಿಲ್ಲ ನೀನು ಸೋತದ್ದು.
ನಿನಗೆ ಜೀವವಿಲ್ಲ
ನೀನು
ಜಲ್ಲಿಕಲ್ಲುಗಳ ರಾಶಿ
ಡಾಂಬರಿನ ರಸಾಯನ
ನಾನು
ಮಳೆಯ ಹನಿ ಬಿಡದೆ ಹೀರುವ
ನಳ ಪಾಕ. ಮಡ್ಡು ರೋಡು
ಮೇಯೋರು ಈಯೋರು
ನನ್ನನ್ನೆ ಈಗಲೂ ಮೆಚ್ಚೋದು.
ಆದ್ದರಿಂದ ನಾನೇ ಶ್ರೀಮಂತ

– ಅರಫಾ ಮಂಚಿ

Leave a Reply