ಆತ ನಗರದ ದೊಡ್ಡ ಹೋಟೆಲ್ ಗೆ ಹೋದ. ಆತನ ದಿರಿಸು ಕೊಳೆಯಾಗಿತ್ತು. ಮುಖದ ತುಂಬಾ ಬೆವರಿಳಿಯುತ್ತಿತ್ತು. ಕೈ -ಮುಖ ತೊಳೆದು ಹೋಗಿ ಕೂತು ವೈಟರ್ ಗಾಗಿ ಕಾಯುತ್ತಿದ್ದ. ಬಹಳ ಹೊತ್ತಿನ ವರೆಗೂ ವೈಟರ್ ಗಳ್ಯಾರೂ ಈತನ ಟೇಬಲ್ ಬಳಿ ಸುಳಿಯಲಿಲ್ಲ.
ವೈಟರ್ ಗಳು ಅಲ್ಲಿದ್ದ ಶ್ರೀಮಂತ ಗಿರಾಕಿಗಳ ಟೇಬಲ್ ಸುತ್ತವೇ ಗಿರಕಿ ಹೊಡೆಯುತ್ತಿದ್ದರು. ಈತ ನಾಲ್ಕೈದು ಬಾರಿ ಕರೆದ ಬಳಿಕ ಸಿಡುಕುತ್ತಾ ಬಂದ ವೈಟರನೊಬ್ಬ ಹ್ಂ…. ಏನು ಬೇಕು…? ಏನಿದೆ…?

ಮೆನು ನೋಡಿ….. ನನಗದು ಓದಲು ಬಾರದು… ವೈಟರ್ ಗೇಲಿ ಮಾಡುವಂತೆ ನಗುತ್ತಾ ನಾಲ್ಕಾರು ತಿಂಡಿಗಳ ಹೆಸರು ಹೇಳಿದ… ಮೊದಲು ನೀರು ಕೊಡಿ.. ಅಲ್ಲೇ ಇದ್ದ ಜಗ್ ಗೆ ಕೈ ತೋರಿಸಿದ… ಬಿಸಿ ನೀರು ಕೊಡಿ… ಬಿಸಿ ನೀರು ಕೊಡವಷ್ಟು ಟೈಮಿಲ್ಲ… ಸರಿ.. ದೋಸೆ ಮತ್ತು ಚಾ ಕೊಡಿ… ಕಾಲು ಗಂಟೆಯ ಬಳಿಕ ದೋಸೆ ಮತ್ತು ಚಾ ತಂದಿಟ್ಟ ಈತ ಉಪಹಾರ ಸೇವಿಸಿದ ಬಳಿಕ ಬಿಲ್ ಟ್ರೇಯಲ್ಲಿ ಬಿಲ್ ಇಟ್ಟು ಟೇಬಲ್ ಮೇಲೆ ಕುಕ್ಕಿದ. ಮೂವತ್ತೈದು ರೂಪಾಯಿ ಬಿಲ್ ಆಗಿತ್ತು.
ಐವತ್ತು ರೂಪಾಯಿ ಇಟ್ಟ. ಬಿಲ್ ತೆಗೆದು ಚಿಲ್ಲರೆ ಹಿಡಕೊಂಡು ಬಂದವನ ಕೈಗೆ ಆತ ಕೊಟ್ಟ ಹದಿನೈದು ರೂಪಾಯಿ ಚಿಲ್ಲರೆ ಮತ್ತು ಐವತ್ತರ ನೋಟೊಂದನ್ನೂ ಇಟ್ಟ.. ವೈಟರ್ ಆಶ್ಚರ್ಯದಿಂದ ಆತನನ್ನು ಗರಬಡಿದವನಂತೆ ನೋಡಿದ..

ಈತ ಮರುದಿನ ಪುನಃ ಅದೇ ಹೋಟೆಲ್ ಗೆ ಹೋದ. ವೈಟರ್ ಇತರ ಗಿರಾಕಿಗಳನ್ನು ಲೆಕ್ಕಿಸದೇ ಓಡೋಡಿ ಬಂದು ಬಿಸಿ ನೀರು ತಂದಿಟ್ಟು..
ಸಾರ್ ಏನು ಕೊಡಲಿ ಎಂದು ಸಾವಧಾನವಾಗಿ ತಿಂಡಿಗಳ ಪಟ್ಟಿ ಹೇಳಿದ.

ಒಟ್ಟಿನಲ್ಲಿ ರಾಜಮರ್ಯಾದೆ.. ಉಪಹಾರ ಮುಗಿಸಿದ ಬಳಿಕ ಈತ ಒಂದು ರೂಪಾಯಿ ಟಿಪ್ಸ್ ವೈಟರನ ಕೈಗಿತ್ತು…
ಇದು ನಿನ್ನೆಯದ್ದು… ನಿನ್ನೆ ಕೊಟ್ಟದ್ದು ಇಂದಿನದ್ದು…. ಎನ್ನುತ್ತಾ ಹೊರಟು ಹೋದ…

#ಕಿರುಗತೆ ಲೇಖಕರು : ಇಸ್ಮತ್ ಪಜೀರ್

LEAVE A REPLY

Please enter your comment!
Please enter your name here