ಹೈದರಾಬಾದ್ ಘೋಷಾಮಹಲ್ ಶಾಸಕ ರಾಜಾ ಸಿಂಗ್ ಅವರ ಸಹೊದರಿ ಮಾಯಾದೇವಿ ತಮ್ಮ ಇಚ್ಛೆಯಿಂದ ಇಸ್ಲಾಮ್ ಸ್ವೀಕಾರ ಮಾಡಿದ್ದಾರೆ ಎಂಬ ಸುದ್ದಿಯೊಂದು ನಿನ್ನೆಯಿಂದ ಫೇಸ್ಬುಕ್‌ನಲ್ಲಿ ವೈರಲ್ ಆಗುತ್ತಿದ್ದು, ಆಂಗ್ಲ ವೆಬ್ ಪೋರ್ಟಲ್ ‘ದ ನ್ಯೂಸ್ ಮಿನಿಟ್’ ಹೆಸರಿನಲ್ಲಿ ಈ ಸುದ್ದಿ ವೈರಲ್ ಆಗಿತ್ತು. ಸದಾ ತನ್ನ ಮುಸ್ಲಿಮ್ ವಿರೋಧಿ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಬಿಜೆಪಿ ಮುಖಂಡ ರಾಜಾಸಿಂಗ್ ಅವರ ಸಹೋದರಿಯು ಇಸ್ಲಾಮ್ ಸ್ವೀಕಾರ ಮಾಡಿದ್ದಾಗಿ ಕೆಲವು ಪೇಸ್ಬುಕ್ ಪೇಜ್ ಗಳೂ ಸುದ್ದಿ ಮಾಡಿತ್ತು. ‘ಭಾರತವು ಒಂದು ಪ್ರಜಾಪ್ರಭುತ್ವದ ರಾಷ್ಟ್ರವಾಗಿದ್ದು, ನಮ್ಮ ಧರ್ಮವು ನಮ್ಮ ವೈಯಕ್ತಿಕ ಹಕ್ಕಾಗಿದೆ, ಯಾರೂ ಒತ್ತಾಯಿಸಬಾರದು. ನಾನು ಯಾವುದೇ ಧರ್ಮಗಳನ್ನು ದ್ವೇಷಿಸುವುದಿಲ್ಲ ಅಥವಾ ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ನನ್ನ ತಂದೆತಾಯಿಗಳು ಯಾವಾಗಲೂ ಎಲ್ಲ ನಿರ್ಧಾರಗಳಲ್ಲಿಯೂ ನನ್ನನ್ನು ಬೆಂಬಲಿಸಿದ್ದಾರೆ. ಈ ಕಾರಣಗಳಿಗಾಗಿ ನನ್ನ ಸಹೋದರ ನಮ್ಮಿಂದ ಬೇರ್ಪಟ್ಟರು; ಎಂದು ರಾಜಾಸಿಂಗ್ ಸಹೋದರಿ ಹೇಳಿದ್ದಾಗಿ ಫೇಸ್ಬುಕ್‌ನಲ್ಲಿ ವೈರಲ್ ಆದ ಈ ಫೋಟೋದಲ್ಲಿ ಬರೆಯಲಾಗಿತ್ತು. ಆದರೆ ಈ ಸುದ್ದಿಯ ಫ್ಯಾಕ್ಟ್ ಚೆಕ್‌ಗೆ ಇಳಿದಾಗ ಇದೊಂದು ಗಾಳಿಸುದ್ದಿ ಎಂದು ತಿಳಿದು ಬಂದಿದೆ.

ಆದರೆ ತಾನು ಇಂತಹ ವರದಿ ಮಾಡಿಲ್ಲ ಎಂದು ನ್ಯೂಸ್ ಮಿನಟ್ ಸ್ಪಷ್ಟಪಡಿಸಿದೆ. ಇದೊಂದು ಫೋಟೋ ಶಾಪ್ ಇಮೇಜ್ ಆಗಿದ್ದು, 2017 ರಲ್ಲಿ ಕೇರಳದ ಕಾಸರಗೋಡಿನಲ್ಲಿ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿ ಆಯಿಷಾ ಆಗಿದ್ದಾಳೆ ಎಂದು ಆರೋಪಿಸಲಾಗಿದ್ದ ಹಿಂದೂ ಹುಡುಗಿ ಆದಿರಾಳ ಪೋಟೋ ಬಳಸಿ ಫೋಟೋ ಶಾಪ್ ಮಾಡಲಾಗಿದೆ.

Leave a Reply