ರಂಸೀನ ಎಂಬ ಹದಿನೆಂಟರ ಹರೆಯದ ಯುವತಿಯನ್ನು ಕುಟುಂಬದ ಜೊತೆ ಕಳುಹಿಸಿ ಕೊಡಬೇಕೋ ಅಥವಾ ಪ್ರಿಯಕರ ರಘುವಿನ ಜೊತೆ ಕಳುಹಿಸಿಕೊಡಬೇಕೋ ಎಂಬ ವಿಷಯವು ನಿನ್ನೆ ಹಾಸನದ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿ (CWC )ಯ ಕಚೇರಿಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕೊನೆಗೆ ರಂಸೀನಾಳನ್ನು ಇನ್ನೂ ಕೆಲವು ದಿನಗಳ ಕಾಲ CWC ಯಲ್ಲೇ ಉಳಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಯಿತು.

ಈ ಪ್ರಕರಣ ನಡೆದಿರುವುದು 2017 ನವೆಂಬರ್ ನಲ್ಲಿ. ದ್ವೀತಿಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಈಕೆ ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಅವಳ ಅಪ್ಪ ಮುಹಮ್ಮದ್ ಅಲಿಯವರು ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮಾತ್ರವಲ್ಲ, ತನ್ನ ಊರಿನವನೇ ಆದ ರಘು ಎಂಬವ ಮಗಳನ್ನು ಅಪಹರಿಸಿರುವ ಶಂಕೆಯನ್ನೂ ದೂರಿನಲ್ಲಿ ವ್ಯಕ್ತಪಡಿಸಿದ್ದರು. ಆದರೆ, ದೂರಿಗೆ ಸಂಬಂಧಿಸಿ ಯಾವ ಪತ್ತೆ ಕಾರ್ಯವೂ ನಡೆಯದಿದ್ದಾಗ, 2018 ಏಪ್ರಿಲ್ ನಲ್ಲಿ ಅವರು ರಾಜ್ಯ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಬಳಿಕ ಪೊಲೀಸರು ಆಕೆಯನ್ನು ಪತ್ತೆಹಚ್ಚಿದರಲ್ಲದೆ ಹೈಕೋರ್ಟ್ ನಲ್ಲಿ ಹಾಜರುಪಡಿಸಿದರು.

ಆದರೆ, ರಂಸೀನಾ ತಂದೆಯ ಆರೋಪವನ್ನು ನಿರಾಕರಿಸಿದಳು. ತನ್ನನ್ನು ಅಪಹರಿಸಲಾಗಿಲ್ಲ ಮತ್ತು ತಾನು ರಘುವನ್ನು ಪ್ರೀತಿಸುತ್ತಿದ್ದು, ಸ್ವ ಇಚ್ಛೆಯಿಂದಲೇ ಮನೆ ತೊರೆದಿರುವುದಾಗಿ ಕೋರ್ಟ್ ಮುಂದೆ ಹೇಳಿಕೆ ಕೊಟ್ಟಳು. ಕೋರ್ಟ್ ಇದನ್ನು ಪರಿಗಣಿಸಿತಲ್ಲದೆ, ಆಕೆ ಇನ್ನೂ ಅಪ್ರಾಪ್ತಳಾಗಿರುವುದರಿಂದ ಆಕೆಗೆ ಹದಿನೆಂಟು ವರ್ಷ ತುಂಬುವವರೆಗೆ ಸರಕಾರೀ ಮಕ್ಕಳ ಕ್ಷೇಮಾಭಿವೃದ್ಧಿ ನಿಲಯದಲ್ಲಿ ಇಟ್ಟುಕೊಳ್ಳುವಂತೆ ಆದೇಶಿಸಿತು.

ಇದೇ ಸೆಪ್ಟೆಂಬರ್ 13 ಕ್ಕೆ ಆಕೆಗೆ ಹದಿನೆಂಟು ವರ್ಷ ತುಂಬಿದುದರಿಂದ ಆಕೆಯನ್ನು ಆಕೆಯ ಹೆತ್ತವರ ಬಯಕೆಯಂತೆ ಅವರ ಜೊತೆ ಬಿಟ್ಟು ಕಳುಹಿಸಲು CWC ತೀರ್ಮಾನಿಸಿತು. ಆದರೆ, ಮಗಳ ಜೊತೆ CWC ಕಚೇರಿಯಿಂದ ಕಾರಿನಲ್ಲಿ ಆಕೆಯ ಹೆತ್ತವರು ಹೊರ ಬರುತ್ತಿರುವಂತೆಯೇ ರಘುವಿನ ಸಂಬಂಧಿಗಳು ಕಾರನ್ನು ತಡೆದರಲ್ಲದೆ ಉದ್ವಿಘ್ನ ವಾತಾವರಣ ನಿರ್ಮಿಸಿದರು. ರಂಸೀನಳನ್ನು ತಮ್ಮ ಜೊತೆ ಕಳುಹಿಸಿಕೊಡುವಂತೆ ಆಗ್ರಹಿಸಿದರು. ತಾನು ರಘುವಿನ ಜೊತೆ ಹೋಗುವೆ, ಹೆತ್ತವರ ಜೊತೆ ತನ್ನನ್ನು ಕಳುಹಿಸಿಕೊಡಬೇಡಿ ಎಂದು ಆಕೆ ಹೇಳಿರುವುದಾಗಿಯೂ CWC ಹೇಳಿಕೊಂಡಿದೆ.
ಈ ಎಲ್ಲ ಗದ್ದಲಗಳ ಕಾರಣದಿಂದ ಆಕೆಯನ್ನು ಪುನಃ ಕೆಲವು ದಿನಗಳ ಕಾಲ CWC ಯಲ್ಲೇ ಉಳಿಸಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ.

Leave a Reply