ರೇವಡಿ: ಹರ್ಯಾಣದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮುಖ್ಯ ಆರೋಪಿಯೆಂದು ಗುರುತಿಸಲಾಗಿರುವ ಸೈನಿಕ ಪಂಕಜ್ ಎಂಬಾತನ ಪತ್ನಿ ಜ್ಯೋತಿ ಅತ್ಯಾಚಾರಿ ಪತಿ ವಿರುದ್ಧ ಕೆಂಡ ಕಾರಿದ್ದಾರೆ. ಇನ್ನುಮುಂದೆ ಆತನಿಗೂ ತನಗೂ ಸಂಬಂಧವಿಲ್ಲ. ಪಂಕಜ್ಗೆ ಗಲ್ಲುಶಿಕ್ಷೆ ಕೊಡಿ ಅಥವಾ ಗುಂಡಿಟ್ಟು ಕೊಂದು ಹಾಕಿ ಎಂದು ಜ್ಯೋತಿ ಹೇಳಿದರು. ಇದೇವೇಳೆ ಪಂಕಜ್ನ ದೆಸೆಯಿಂದಾಗಿ ತನ್ನ ತವರು ಕುಟಂಬಕ್ಕೆ ಪೊಲೀಸ್ ಕಿರುಕಳ ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ. 19 ವರ್ಷದ ವಿದ್ಯಾರ್ಥಿನಿಯನ್ನು ಪಂಕಜ್ ಮತ್ತು ಅತನ ಸಹಚರರು ಕ್ರೂರವಾಗಿ ಅತ್ಯಾಚಾರಕ್ಕೊಳ ಪಡಿಸಿದ್ದರು.
ತನ್ನ ತವರು ಮನೆಯವರಿಗೆ ಪೊಲೀಸರು ಪಂಕಜ್ ವಿಚಾರದಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಪೊಲೀಸರು ಅಲ್ಲಿಗೆ ಪದೇ ಪದೇ ದಾಳಿ ಮಾಡುತ್ತಿದ್ದಾರೆ. ಕಳೆದ ವಾರ ತನ್ನ ಎಳೆಯ ವಯಸ್ಸಿನ ತಮ್ಮನನ್ನು ಪೊಲೀಸರು ಬಂಧಿಸಿ ಒಂದು ವಾರ ಕಸ್ಟಡಿಯಲ್ಲಿಟ್ಟು ಕೊಂಡರು. ತಂದೆಯನ್ನು ಕೂಡ ಪೊಲೀಸರು ಕಸ್ಟಡಿಯಲ್ಲಿರಿಸಿದ್ದಾರೆ ಎಂದು ಜ್ಯೋತಿ ನಾಹಡ್ ಪೊಲೀಸ್ ಠಾಣೆಗೆ ಬಂದು ಠಾಣಾಧಿಕಾರಿಯ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಜ್ಯೋತಿ ಹರ್ಯಾಣದ ನಾಹಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹೇಂದ್ರಗಡದ ಎಂಬಲ್ಲಿನ ನಿವಾಸಿಯಾಗಿದ್ದು, ಪತಿಯ ದುಷ್ಕೃತ್ಯದ ನಂತರ ಜ್ಯೋತಿ ತೀವ್ರ ಒತ್ತಡಕ್ಕೊಳಗಾಗಿದ್ದಾರೆ. ಮಾತ್ರವಲ್ಲ ತೀರಾ ಅವಮಾನಿತಳಾಗಿದ್ದಾರೆ. ಜ್ಯೋತಿ ಮತ್ತು ಪಂಕಜ್ರ ವಿವಾಹ 2017 ನವೆಂಬರ್ 15ರಂದು ನಡೆದಿತ್ತು ಆಗ ಆತನ ಬಗ್ಗೆ ಇಂತಹ ಯಾವುದೇ ದೂರುಗಳು ಇರಲಿಲ್ಲ. ಆತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ ಎನ್ನುವ ಕಾರಣದಿಂದಾಗಿ ಅವನೊಡನೆ ವಿವಾಹ ಸಂಬಂಧ ಬೆಳೆಸಲಾಯಿತು. ಈಗ ತಾನು ಏಳು ತಿಂಗಳ ಗರ್ಭಿಣಿ ಎಂದು ಜ್ಯೋತಿ ಪೊಲೀಸರಿಗೆ ತಿಳಿಸಿದ್ದಾರೆ.