ತಿರುವನಂತಪುರಂ: ಕೇರಳ ಪೊಲೀಸರು ಸೆರೆ ಹಿಡಿದಿದ್ದ ಮತ್ತು ಕೇರಳಕ್ಕೆ ಕೆಲಸ ಹುಡುಕಿ ಬಂದಿದ್ದ ರೋಹಿಂಗ್ಯನ್ ಕುಟುಂಬವನ್ನು ಅವರು ಬಂದಿದ್ದ ಹೈದರಾಬಾದ್‍ಗೆ ಪುನಃ ಕಳುಹಿಸಿ ಕೊಡಲಾಗಿದೆ. ರೋಹಿಂಗ್ಯನ್ ಕುಟುಂಬವೊಂದು ಇತ್ತೀಚೆಗೆ ಕೇರಳದ ವೀಂಞ ಎಂಬಲ್ಲಿಗೆ ಬಂದಿತ್ತು. ಕುಟುಂಬದಲ್ಲಿ ಐದು ಮಂದಿ ಇದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ ಅವರನ್ನು ಪೊಲೀಸರು ಬಿಗು ಭದ್ರತೆಯಲ್ಲಿ ತಿರುವನಂತಪುರಂನಿಂದ ಹೈದರಾಬಾದಿಗೆ ಕಳುಹಿಸಿದ್ದಾರೆ.

ಗುರುವಾರ ಪೊಲೀಸರು ಕಸ್ಟಡಿಗೆ ಪಡೆದಿದ್ದ ರೋಹಿಂಗ್ಯನ್ ಕುಟುಂಬವನ್ನು ಉನ್ನತ ಪೊಲೀಸಧಿಕಾರಿಗಳು ವಿಚಾರಣೆ ನಡೆಸಿದ್ದು ಇವರು ಹೈದರಾಬಾದ್ ಮತ್ತು ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ನಾವು ಕೆಲಸ ಹುಡುಕುತ್ತಾ ಇಲ್ಲಿಗೆ ಬಂದೆವು ಎಂದು ರೋಹಿಂಗ್ಯನ್ ಕುಟುಂಬ ತಿಳಿಸಿದೆ.

ಮಹಾರಾಷ್ಟ್ರ ಮತ್ತು ಹೈದರಾಬಾದಿನಲ್ಲಿ ಇವರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ನಂತರ ಹೈದರಾಬಾದಿಗೆ ಕಳುಹಿಸಲು ಪೊಲೀಸರು ನಿರ್ಧರಿಸಿದರು. ಇವರ ಬಳಿ ವಿಶ್ವಸಂಸ್ಥೆಯ ಗುರುತಿನ ಚೀಟಿ ಇದ್ದು ಇವರೆಲ್ಲ ಅಧಿಕೃತ ನಿರಾಶ್ರಿತರು ಎಂದು ತಿಳಿದು ಬಂದಿದೆ. ಆದ್ದರಿಂದ ಅವರ ವಿರುದ್ಧ ಕೇಸು ದಾಖಲುಗೊಂಡಿಲ್ಲ. .

Leave a Reply