ನವದೆಹಲಿ: ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹಾಗೂ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಪರಸ್ಪರ ಭೇಟಿ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಮೊದಲು ಉಮಾ ಭಾರತಿ ನಿವಾಸಕ್ಕೆ ಭೇಟಿ ನೀಡಿದ ಪ್ರಗ್ಯಾಸಿಂಗ್ ಠಾಕೂರ್ ಕೆಲಕಾಲ ಚರ್ಚೆ ನಡೆಸಿದರು.

ಬಳಿಕ ಅಲ್ಲಿಂದ ಹೊರಡುವ ಸಂದರ್ಭದಲ್ಲಿ ಪ್ರಗ್ಯಾ ಅವರನ್ನು ಕಳುಹಿಸಲು ಬಂದ ಉಮಾ ಭಾರತಿ ಅವರನ್ನು ಅಪ್ಪಿಕೊಂಡ ಪ್ರಗ್ಯಾ ಭಾವುಕರಾಗಿ ಕಣ್ಣೀರಿಟ್ಟರು.ಪ್ರತಿಯಾಗಿ ಉಮಾ ಕಣ್ಣಂಚಿನಲ್ಲೂ ನೀರು ತುಂಬಿತ್ತು. ಬಳಿಕ ಮಾತನಾಡಿದ ಉಮಾಭಾರತಿ, ನಾನು ಪ್ರಗ್ಯಾ ಸಿಂಗ್ ಅವರನ್ನು ಗೌರವಿಸುತ್ತೇನೆ. ಈ ಹಿಂದೆ ಅವರ ವಿರುದ್ದ ನಡೆದಿರುವ ದುಷ್ಕೃತ್ಯಗಳನ್ನು ನಾನು ಕಂಡಿದ್ದೇನೆ.

ಈ ವಿಚಾರದಲ್ಲಿ ಆಕೆ ಪೂಜನೀಯಳು. ಲೋಕಸಭಾ ಚುನಾವಣೆಗೆ ಪ್ರಗ್ಯಾ ಪರವಾಗಿ ಪ್ರಚಾರ ಮಾಡುತ್ತೇನೆ ಎಂದರಲ್ಲದೆ ಇದೊಂದು ಭಾವನಾತ್ಮಕ ಕ್ಷಣ ಎಂದರು. ಪ್ರಗ್ಯಾ ಸಿಂಗ್ ಠಾಕೂರ್ ಮಾತನಾಡಿ, ಸಾಧು-ಸಂತರ ನಡುವೆ ಎಂದಿಗೂ ವೈಷಮ್ಯ ಬೆಳೆಯುವುದಿಲ್ಲ. ನಾನು ಅವರಿಗೋಸ್ಕರ ಬಂದಿದ್ದೇನೆ. ಹಾಗೆಯೇ ನಮ್ಮಿಬ್ಬರ ನಡುವೆ ಸದಾ ಆತ್ಮೀಯವಾದ ಸಂಬಂಧ ಇರಲಿದೆ ಎಂದರು.

ಮಹಾರಾಷ್ಟ್ರದಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದು,  ಅವರಿಗೆ  ಲೋಕಸಭೆ ಚುನಾವಣೆಗೆ ಭೋಪಾಲ್ ನಿಂದ ಬಿಜೆಪಿ ಟಿಕೆಟ್ ನೀಡಿದೆ.

ಈ ಹಿಂದೆ ಭೂಪಾಲ್​ನಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಹೇಮಂತ್​ ಕರ್ಕರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಮಾಲೇಗಾಂವ್​ ಬಾಂಬ್​ ಸ್ಫೋಟ ಪ್ರಕರಣದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲದಿದ್ದರೂ ಹೇಮಂತ್​ ಕರ್ಕರೆ ನನ್ನನ್ನು ವಿನಾಕಾರಣ ಬಂಧಿಸಿ ಮಾನಸಿಕ ಹಿಂಸೆ ನೀಡಿದ್ದರು. ಜೈಲಿನಲ್ಲಿ ನನಗೆ ನೀಡಿದ್ದ ಕಿರುಕುಳವನ್ನು ಮರೆಯಲು ಸಾಧ್ಯವಿಲ್ಲ. ಆಗಲೇ ಅವರಿಗೆ ನಾನು ಶಾಪ ನೀಡಿದ್ದೆ. ಆ ಶಾಪದ ಕಾರಣದಿಂದಲೇ ಮುಂಬೈ ಬಾಂಬ್​ ದಾಳಿ ವೇಳೆ ಅವರು ಸಾವನ್ನಪ್ಪಿದರು. ನನ್ನ ಶಾಪ ಮತ್ತು ಅವರು ಮಾಡಿದ ಕರ್ಮಗಳಿಂದಲೇ ಅವರು ಅಂತ್ಯ ಕಂಡರು ಎಂದು ಹೇಳಿ ಹಲವರ ಟೀಕೆಗೆ ಕಾರಣರಾಗಿದ್ದರು.

Leave a Reply