ಮಂಗಳೂರು:ಇತ್ತೀಚೆಗೆ ಕರಾವಳಿಯಲ್ಲಿ ಎರಡು ಅಮಾಯಕರ ಕೊಲೆ ನಡೆದಿದೆ. ಅದರಲ್ಲಿ ದೀಪಕ್ ರಾವ್ ಪರ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆದಿದೆ.

ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕುಟುಂಬಕ್ಕೆ ನೆರವು ನೀಡಲು ಸಾಮಾಜಿಕ ಜಾಲತಾಣಗಳ ಮೂಲಕ ನೆರವಿನ ಅಭಿಯಾನ ಆರಂಭಿಸಲಾಗಿತ್ತು ಈ ಹಿಂದೆ 17 ಲಕ್ಷ ಹಣ ಸಂಗ್ರಹವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಆ ಹಣ ಏರಿಕೆ ಯಾಗಿದ್ದು ಸೋಮವಾರದವರೆಗೆ ಒಟ್ಟು ₹43 ಲಕ್ಷ ಸಂಗ್ರಹವಾಗಿದೆ.

ಕಾಟಿಪಳ್ಳದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯಲ್ಲಿರುವ ದೀಪಕ್‌ ರಾವ್‌ ಅವರ ತಾಯಿ ಪ್ರೇಮಲತಾ ಅವರ ಖಾತೆಗೆ ಈ ಹಣ ಜಮೆಯಾಗಿದ್ದು, ಈ ಖಾತೆಗೆ ಆಧಾರ್‌ ಮತ್ತು ಪ್ಯಾನ್‌ ಸಂಖ್ಯೆಯ ಜೋಡಣೆ ಮಾಡಬೇಕಾಗಿದೆ. ಇದೀಗ ಪ್ರೇಮಲತಾ ಅವರ ಹೆಸರಿನಲ್ಲಿ ಪ್ಯಾನ್‌ ಕಾರ್ಡ್‌ ಮಾಡಿಸಲಾಗುತ್ತಿದೆ’ ಎಂದು ಬಿಜೆಪಿ ನಗರ ಉತ್ತರ ಘಟಕದ ಅಧ್ಯಕ್ಷ ಡಾ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ‘ಸಪೋರ್ಟ್‌ ದೀಪಕ್‌ ಫ್ಯಾಮಿಲಿ’ ಹ್ಯಾಶ್‌ಟ್ಯಾಗ್‌ನಿಂದ ಈ ಅಭಿಯಾನ ಆರಂಭಿಸಲಾಗಿತ್ತು. ಇದಕ್ಕೆ ಜನರಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ₹5 ಲಕ್ಷ ಪರಿಹಾರವನ್ನು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ವಿತರಿಸಲಿದ್ದಾರೆ. ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್‌ ಕೂಡ ವೈಯಕ್ತಿಕವಾಗಿ ₹5 ಲಕ್ಷ ನೆರವು ನೀಡುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ ₹10 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಡಾ. ಭರತ್‌ ಶೆಟ್ಟಿ ತಿಳಿಸಿದ್ದಾರೆ.

Leave a Reply