* ಮದುವೆಗೆ ಹಲವು ವಾರಗಳ ಮೊದಲೇ ಅಡುಗೆಗಾಗಿ ಟೊಮೇಟೊ ಅಥವಾ ಬಟಾಟೆ ತುಂಡರಿಸುವಾಗ ಸಣ್ಣ ತುಂಡನ್ನು ಮುಖ ಕೈಕಾಲುಗಳಿಗೆ ಹಚ್ಚಿರಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

* ಕಣ್ಣಿನ ಸುತ್ತು ಕಪ್ಪಾಗಿದ್ದರೆ ಮಲಗುವಾಗ ಬಟಾಟೆಯನ್ನು ತೊಳೆದು ಸಿಪ್ಪೆ ತೆಗೆದು ಅದೇ ಸಿಪ್ಪೆ ತೆಗೆಯುವ ಪೀಲರ್‍ನಿಂದ ತೆಳುವಾಗಿ ಕೆಲವು ಬಟಾಟೆ ಸ್ಲೈಸ್‍ಗಳನ್ನು ತೆಗೆದು ಕಣ್ಣಿನ ಮೇಲೆ ಇಡಿ. ಪೂರ್ತಿ ಮುಖದ ಮೇಲೂ ಇಟ್ಟುಕೊಳ್ಳಬಹುದು. 1 ಗಂಟೆ ಬಿಟ್ಟು ತೊಳೆಯುತ್ತಾ ತೆಗೆಯಿರಿ ಅಥವಾ ರಾತ್ರಿ ಇಡೀ ಇಟ್ಟುಕೊಂಡಿದ್ದರೆ ಬೆಳಿಗ್ಗೆ ಎದ್ದು ಮೊದಲು ಮುಖ, ಕುತ್ತಿಗೆಗೆ ಸರಿಯಾಗಿ ನೀರು ಹಾಕಿ 4-5 ನಿಮಿಷ ನೆನೆಯಲು ಬಿಡಿ. ಅಂಟಿದ ತೆಳು ಸಿಪ್ಪೆಗಳೆಲ್ಲಾ ನೆನೆದು ತೆಗೆಯಲು ಸುಲಭ. ನೀರಿಲ್ಲದೇ ಎಳೆದು ತೆಗೆಯುವ ಪ್ರಯತ್ನ ಬೇಡ.

* ಹಲವು ವಾರಗಳ ವರೆಗೆ ದಿನಂಪ್ರತಿ ಟೊಮೇಟೊ ಮತ್ತು ಮುಳ್ಳು ಸೌತೆಕಾಯಿಯನ್ನು ಮಿಕ್ಸಿಯ ಸಣ್ಣ ಜಾರ್‍ನಲ್ಲಿ ನೀರು ಹಾಕದೆ ಅರೆದು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ. ಬೇರೆ ಕೆಲಸದತ್ತ ಗಮನಕೊಡಿ 45ರಿಂದ 60 ನಿಮಿಷ ಬಿಟ್ಟು ತೊಳೆದು ತೆಗೆಯಿರಿ. ಮಧ್ಯೆ ಮಧ್ಯೆ ಬಟಾಟೆ ಪೇಸ್ಟನ್ನೂ ಹಚ್ಚಬಹುದು. ಇನ್ನು ಕೆಲವೊಮ್ಮೆ 1-2 ಚಮಚ ಹಸಿ ಹಾಲನ್ನು ಹಚ್ಚಿ ಅರ್ಧ ಗಂಟೆ ನಂತರ ತೊಳೆದು ತೆಗೆಯಿರಿ.

* ಮದುವೆಗೆ ಒಂದು ವಾರ ಮೊದಲು ಆಯುರ್ವೇದಿಕ್ ಅಂಗಡಿಯಲ್ಲಿ ದೊರೆಯುವ ಚಿಕ್ಸವನ್ನು ತನ್ನಿರಿ. ಅಥವಾ “ಮದು ಮಗಳ ಮೈಗೆ ಹಚ್ಚುವ…” ಎಂದು ಕೇಳಿ ಆಗ ಕೆಲವು ವಸ್ತುಗಳನ್ನು ಕೊಡ್ತಾರೆ. ಅದರಲ್ಲಿ ಸ್ವಲ್ಪ ಸ್ವಲ್ಪ ತೆಗೆದು ತೊಳೆದು ಗ್ರೈಂಡರ್‍ಗೆ ಹಾಕಿ. ಅದಕ್ಕೆ ಇಡೀ ಒಂದು ಮೊಟ್ಟೆ ಸಿಪ್ಪೆ ಸಮೇತ ಅರೆಯಲು ಹಾಕಿ ಮತ್ತು ಹಸಿ ಅರಶಿನದ ಒಂದು ತುಂಡು ಹಾಕಿ ಅರೆಯಿರಿ. ಮಿಕ್ಸಿಯಲ್ಲಿ ಮೊಟ್ಟೆಯ ಸಿಪ್ಪೆ ನುಣ್ಣಗೆ ಅರೆಯುವುದಿಲ್ಲ. ಆದ್ದರಿಂದ ಗ್ರೈಂಡರ್ ಅಥವಾ ಕೈಯಲ್ಲಿ ಕಡೆಯುವ ಕಲ್ಲಲ್ಲಿ ಅರೆಯಿರಿ. ಮೊಟ್ಟೆಯ ಸಿಪ್ಪೆಯಿಂದ ಚರ್ಮಕ್ಕೆ ಉತ್ತಮ ಹೊಳಪು ಬರ್ತದೆ. ಇದನ್ನು ದಿನಾಲೂ ಮೈಗೆ ಹಚ್ಚಲು ಬೇಕಾದಷ್ಟು ಅರೆದು ಮರುದಿನಕ್ಕೆ ಬೇರೆಯೇ ಅರೆಯಿರಿ. ಕಷ್ಟವಾಗುವುದಾದರೆ 2 ದಿನಕ್ಕೊಮ್ಮೆ ಅರೆದು ಉಳಿದದ್ದನ್ನು ಫ್ರಿಜ್‍ನಲ್ಲಿಡಿ. ಮರುದಿನ ಮುಖ, ಮೈಗೆ ಹಚ್ಚುವ 1-2 ಗಂಟೆ ಮೊದಲೇ ಫ್ರಿಜ್‍ನಿಂದ ಹೊರಗೆ ಇಡಿ. ಆ ಮೇಲೆ ಹಚ್ಚಿರಿ. ಈ ಪೇಸ್ಟ್ ಒಂದು ವಾರ ಹಚ್ಚಿದರೆ ಬ್ಯೂಟಿ ಪಾರ್ಲರ್‍ಗಳ ದುಬಾರಿ ಗೋಲ್ಡ್ ಫೇಶಿಯಲ್ ಮಾಡಿದ್ದಕ್ಕಿಂತಲೂ ಹೆಣ್ಣು ಕಾಂತಿಯುತವಾಗಿ ಕಂಗೊಳಿಸುವುದು ಖಂಡಿತ.

* ಮೊಟ್ಟೆಯ ಪೇಸ್ಟನ್ನು ಇಡೀ ಮೈಗೆ ಹಚ್ಚಿ 5 ನಿಮಿಷದ ನಂತರ ವೃತ್ತಾಕಾರದಲ್ಲಿ ಮೃದುವಾಗಿ ತಿಕ್ಕಿರಿ. 2 ಗಂಟೆಗಳ ನಂತರ ಸ್ನಾನ ಮಾಡಿ. ಮದುವೆ ಮೊದಲ ದಿನ ಕೇವಲ ಒಂದು ಗಂಟೆ ಹಚ್ಚಿದರೂ ಸಾಕು. ಮದುವೆ ದಿನ ಸ್ನಾನಕ್ಕೆ ಅರ್ಧ ಗಂಟೆ ಮೊದಲು ಹಸಿ ಹಾಲನ್ನು ತಲೆ ಕೂದಲು ಬಿಟ್ಟು ಇಡೀ ಮೈಗೆ ಹಚ್ಚಿ ಮೃದುವಾಗಿ ತಿಕ್ಕಿ ನಂತರ ಸ್ನಾನ ಮಾಡಿ.

* ತಲೆ ಕೂದಲಿಗೆ 2 ದಿನಕ್ಕೊಮ್ಮೆ ತೆಂಗಿನ ಎಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿ ಅಥವಾ ಎಣ್ಣೆ ಹಚ್ಚಿ ಕೂದಲನ್ನು ಸಾಮಾನ್ಯವಾಗಿ ಬಾಚುವಂತೆ ಮುಂದಿನಿಂದ ಹಿಂದಕ್ಕೆ ಬಾಚಿರಿ ಮತ್ತು ಹಾಗೆಯೇ ವಿರುದ್ಧ ದಿಕ್ಕಿನಲ್ಲೂ ಬಾಚಿ ದಾಗ ರಕ್ತ ಸಂಚಾರವೂ ವೃದ್ಧಿಸುವುದು, ವಿರುದ್ಧ ಬಾಚುವುದರಿಂದ ಕೂದಲ ಬುಡ ತೆರೆದು ಶೀಘ್ರ ಬೆಳವಣಿಗೆಗೆ ಸಹಕಾರಿ. ಹಾಗೂ ತಲೆ ಹೊಟ್ಟು ಕಡಿಮೆಯಾಗುವುದು.

* ಕೂದಲಿಗೆ ಹಚ್ಚಿದ ಎಣ್ಣೆಯನ್ನು ತೆಗೆಯಲು ಸಾಬೂನು ಉಪಯೋಗಿಸದೆ ಉತ್ತಮ ಶ್ಯಾಂಪೂ ಬಳಸಿ ಕೂದಲು ಮೃದು ವಾಗುವುದು. ಸ್ನಾನದ ನಂತರ ದಪ್ಪ ಟರ್ಕಿ ಟವೆಲ್‍ನಿಂದ ತಿಕ್ಕದೆ ಮೃದುವಾದ ಹತ್ತಿ ಬಟ್ಟೆಯಿಂದ ಮೆಲ್ಲಗೆ ಒರೆಸಿ. ಇನ್ನೊಂದು ಒಣ ಹತ್ತಿ ಬಟ್ಟೆಯನ್ನು ತಲೆಗೆ ಸುತ್ತಿ. ಕಡಿಮೆ ಎಂದರೂ 4 ಗಂಟೆ ವರೆಗೂ ಕೂದಲು ಒಣಗದೆ ಬಾಚಬೇಡಿರಿ.

* ಪಾದದಲ್ಲಿ ಬಿರುಕುಗಳಿದ್ದರೆ ಬಹಳ ಕೆಟ್ಟದಾಗಿ ಕಾಣುವುದು. ಆದ್ದರಿಂದ ಪ್ಲಾಸ್ಟಿಕ್ ಬಕೆಟ್‍ಗೆ ಉಗುರು ಬಿಸಿ ನೀರು ಹಾಕಿ. ಆ ನೀರಿಗೆ ಲಿಂಬೆ, ಒಂದು ಚಮಚ ಶ್ಯಾಂಪೂ, ಒಂದು ಚಮಚ ಉಪ್ಪು ಹಾಕಿ. ಆ ನೀರಿಗೆ ಕಾಲು ಹಾಕುವ ಮೊದಲು ಉಗುರಿಗೆ ಕ್ಲಿನ್ಸರ್ ಇದ್ದರೆ ಹಚ್ಚಿ ಕಾಲುಗಳನ್ನು ಬಕೆಟಲ್ಲಿ ಅರ್ಧ ಗಂಟೆ ನೆನೆಹಾಕಿ. ನಂತರ ಹಳೆಯ ಟೂತ್‍ಬ್ರಶ್‍ನಿಂದ ಉಗುರುಗಳನ್ನು ಸರಿಯಾಗಿ ತಿಕ್ಕಿ ತೊಳೆಯಿರಿ, ಉಗುರುಗಳನ್ನು ಉತ್ತಮ ಆಕಾರದಲ್ಲಿ ಕತ್ತರಿಸಿ. ಉಗುರು ಬೆಳೆಸುವ ಪ್ರಯತ್ನ ಬೇಡ ಎಷ್ಟೇ ಶುದ್ಧಗೊಳಿಸಿದರೂ ಶುದ್ಧವಾಗದು. ಹಿಮ್ಮಡಿಯೂ ನೆನೆದು ಮೃದುವಾಗಿದ್ದರಿಂದ pumic stone ನಿಂದ ತಿಕ್ಕಿರಿ. ಅದಿಲ್ಲದಿದ್ದರೆ ಬಟ್ಟೆ ಒಗೆಯುವ ಕಲ್ಲಿಗೆ ತಿಕ್ಕಿರಿ. 2 ಪಾದಗಳೂ ಸುಂದರವಾಗಿ ಸ್ವಚ್ಛವಾದ ನಂತರ ಹೆಚ್ಚಾಗಿ ಕಾಲು ಚೀಲ ಧರಿಸಲು ಪ್ರಯತ್ನಿಸಿ ಅಥವಾ ಮನೆ ಒಳಗೂ ಬೇರೆಯೇ ಪಾದರಕ್ಷೆ ಧರಿಸುತ್ತಾ ಪುನಃ ಪಾದಗಳು ಬಿರುಕು ಬಿಡದಂತೆ ಜಾಗ್ರತೆ ವಹಿಸಿರಿ.

Leave a Reply