ಚಿಕ್ಕಮಗಳೂರು: ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಕೆ.ಅಣ್ಣಾಮಲೈ ಸುದ್ದಿಗೋಷ್ಠಿ ನಡೆಸಿ ಸ್ಪೋಟಕ ಮಾಹಿತಿ ನೀಡಿದ್ದಾರೆ.

ಸಂತೋಷ ಸೇರಿದಂತೆ ನಾಲ್ಕೈದು ಜನ ಧಮ್ಕಿ ಹಾಕಿದ ಹಿನ್ನೆಲೆ ಸಾಯುವ ಮುನ್ನ ಎರಡು ದಿನ ಊಟ ಮಾಡದ ಧನ್ಯಶ್ರೀ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಲ್ಲದೆ ಧನ್ಯಶ್ರೀ ತಂದೆಯವರ ಹಾದಿ ತಪ್ಪಿಸಿ ಸುಳ್ಳು ದೂರು ನೀಡಿದ ಹಿನ್ನೆಲೆ ಕೆಲವರ ವಿರುದ್ಧ ಇಂದು ರಾತ್ರಿಯೊಳಗೆ ಎರಡನೇ ಎಫ್‌ಐಆರ್ ದಾಖಲು ಮಾಡಲಾಗುವು ಎಂದು ಹೇಳಿದರು.

ಮಾಧ್ಯಮದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಂಘಟನೆ ಕಾರ್ಯಕರ್ತರ ವಿರುದ್ಧ ಮೂರನೇ ಎಫ್ಐಆರ್ ದಾಖಲು ಮಾಡುತ್ತೇವೆ. ವಾಟ್ಸಾಪ್‌ನಲ್ಲಿ ವಾರ್ನಿಂಗ್ ಮಸೇಜ್ ಹಾಕಿದ ಹಿನ್ನೆಲೆ ನಾಲ್ಕು ಜನರ ಮೇಲೆ ಎಫ್‌ಐಆರ್ ಕೂಡ ದಾಖಲು ಮಾಡುತ್ತೇವೆ ಎಂದು ತಿಳಿಸಿದರು.

ಪ್ರಕರಣದಲ್ಲಿ ಒಟ್ಟು ನಾಲ್ಕು ಎಫ್‌ಐಆರ್ ದಾಖಲಿಸಿತ್ತೇವೆ. ವಾಟ್ಸಾಪ್‌ನಲ್ಲಿ ಧನ್ಯಶ್ರೀ ಜೊತೆ ಚಾಟ್ ಮಾಡಿರುವುದು ಸಂತೋಷ್‌ ಎಂಬುವವನಲ್ಲ. ಆತ ಈ ಹೆಸರನ್ನು ಇಟ್ಟುಕೊಂಡು ಚಾಟ್ ಮಾಡಿದ್ದಾನೆ.

ಅವನು ಯಾರು ಅನ್ನೋದು ಕೂಡ ಈಗಾಗಲೇ ಗೊತ್ತಾಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಾವು ಹಿಂದೂ, ಮುಸ್ಲಿಂ ಸಂಘಟನೆ ಅಂತಾ ನೋಡುವುದಿಲ್ಲ. ನಮಗೆ ಎಲ್ಲರೂ ಒಂದೇ ಎಂದ ಅವರು,

ನಿನ್ನೆ ಧನ್ಯಶ್ರೀ ತಾಯಿಯೊಂದಿಗೆ ಮಾತುಕತೆ ನಡೆಸಿದ ನಯನಗೆ ಕೂಡ ನೋಟಿಸ್‌ ನೀಡುತ್ತೇವೆ. ಯಾರ ಜೊತೆಗಾದರೂ ಮಾತಾನಾಡುವಾಗ ರೆಕಾರ್ಡ್‌ ಮಾಡೋದು ಒಂದು ಅಪರಾಧ. ಈ ಹಿನ್ನೆಲೆ ನೋಟಿಸ್‌ ನೀಡುತ್ತೇವೆ ಎಂದರು.

ಸಂಘಟನೆಗಳ ವಿರುದ್ಧ ಸಿಡಿದೆದ್ದ ಸಿಂಗಂ:

ಶಾಂತಿಯುತವಾಗಿರುವ ಜಿಲ್ಲೆಯಲ್ಲಿ ಸುಮ್ಮನೆ ಏನೇನೋ ಮಾತಾಡಿ ಶಾಂತಿ ಭಂಗ ಮಾಡಬೇಡಿ. ಲೀಡರ್ ಅಂತಾ ಹೇಳ್ಕೊಂಡು ನಾವು ಆ ಸಂಘಟನೆಯರು, ಈ ಸಂಘಟನೆಯವರು ಅಂತಾ ಏನೇನೋ ಮಾತಾಡ್ಬೇಡಿ ಎಂದು ವಾರ್ನಿಂಗ್‌ ಮಾಡಿದ್ದಾರೆ.

ನೀವು ಹಾವಿನ ಜೊತೆ ಆಟವಾಡ್ತಾ ಇದ್ದೀರಾ. ನೀವು ಬಾಲ ಹಿಡಿದ್ರೂ ಸರಿ, ಏನೇ ಹಿಡಿದ್ರೂ ಸರಿ ಕಚ್ಚೇ ಕಚ್ಚುತ್ತೆ. ನಿಮಗೆಲ್ಲಾ ಡೈರೆಕ್ಟ್ ವಾರ್ನಿಂಗ್ ಕೊಡ್ತಾ ಇದ್ದೇನೆ. ನಾವು ಡ್ರಾಮಾ ಮಾಡೋದಕ್ಕೆ ಚಿಕ್ಕಮಗಳೂರಿಗೆ ಬಂದಿಲ್ಲ ಎಂದು ಖಡಕ್‌ ಮಾತಿನಲ್ಲೇ ಕೋಮುಗಲಭೆ ಮಾಡುತ್ತಿರೋರ ವಿರುದ್ಧ ಹರಿಹಾಯ್ದರು.

ನಾನು ಎಸ್‌ಎಸ್‌ಎಲ್‌ಸಿ ಪಾಸ್ ಮಾಡ್ಕೊಂಡು ಬಂದಿಲ್ಲ. ಐಪಿಎಸ್‌ ಮಾಡ್ಕೊಂಡು ಪೊಲೀಸ್ ಇಲಾಖೆಗೆ ಬಂದಿದ್ದೇನೆ. ಇದು ಕಡೇ ಅವಕಾಶ. ಇನ್ನೊಮ್ಮೆ ಏನಾದ್ರೂ ಈ ರೀತಿಯಾಗಿ ಮಾತಾಡಿದ್ರೆ ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕೃಪೆ ಸೋಷಿಯಲ್ ಮೀಡಿಯಾ ವರ್ಡ್ ಪ್ರೆಸ್

Leave a Reply