ಬೆಂಗಳೂರು: ರಾಜ್ಯದಾದ್ಯಂತ ಕುಡಿವ ನೀರಿಗಾಗಿ ಹಾಹಾಕಾರ ಆರಂಭಗೊಂಡಿರುವುದರಿಂದ ತಾಲೂಕು ಹಂತದಲ್ಲಿ ಕಾಲ್ ಸೆಂಟರ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಅಂತರ್ಜಲದ ಸಮಸ್ಯೆ ತೀವ್ರವಾಗಿದ್ದು ಮಲೆನಾಡಿನ ಜಿಲ್ಲೆಗಳಲ್ಲೂ ಕುಡಿವ ನೀರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಈಗಾಗಲೇ 1112 ಗ್ರಾಮಗಳಲ್ಲಿನ ಬೋರ್‌ವೆಲ್‌ಗಳು ತೀವ್ರವಾಗಿ ಬತ್ತಿ ಹೋಗಿರುವುದರಿಂದ ಟ್ಯಾಂಕರ್ ಮೂಲಕ ನೀರು ಪೊರೈಸಲಾಗುತ್ತಿದ್ದು, ಜನರಿಗೆ ಟ್ಯಾಂಕರ್ ನೀರೇ ಗತಿಯಾದಂತಾಗಿದೆ. ಕುಡಿವ ನೀರಿಗಾಗಿ ರಾಜ್ಯದಾದ್ಯಂತ ಶೇ.86ರಷ್ಟು ಜನ ಅಂತರ್ಜಲದ ಮೇಲೆಯೇ ಅವಲಂಬನೆ ಆಗಿದ್ದಾರೆ. ಪ್ರಸ್ತುತ ಜಲಾಶಯದ ನೀರು ಸೇರಿದಂತೆ ಅಂತರ್ಜಲ ಬತ್ತುತ್ತಿರುವುದು ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದೆ.

ಚಿಕ್ಕಮಗಳೂರು ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿದ್ದು ನೀರಿಗಾಗಿ ಪರದಾಡುವಂತಾಗಿದೆ. ಹೀಗಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಕೊಂಡು ನೀರು ಸರಬರಾಜು ಮಾಡಲು ಕ್ರಮ ಜರುಗಿಸಲಾಗಿದೆ. ನೀರಿನ ಅವಶ್ಯಕತೆ ಇರುವಡೆ ಟ್ಯಾಂಕರ್ ಮೂಲಕ ತಕ್ಷಣ ಪೂರೈಸಲು ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಕಾಲ್‌ಸೆಂಟರ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಕಾಲ್ ಸೆಂಟರ್‌ಗಳ ನಂಬರ್‌ಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ವೆಬ್ಸೈಟ್ ಮೂಲಕ ಪಡೆದುಕೊಳ್ಳಬಹುದಾಗಿದೆ.

Leave a Reply