ಹೊಸದಿಲ್ಲಿ: ಹನ್ನೆರಡು ವರ್ಷದ ಪೋರನೊಬ್ಬ ತರಗತಿಯಲ್ಲಿ ಕಬ್ಬಿಣದ ಸಲಾಕೆಯಿಂದ ಶಿಕ್ಷಕರಿಗೆ ಹೊಡೆದು ಗಾಯಗೊಳಿಸಿ ಓಡಿಹೋಗಿದ್ದಾನೆ.
ಅಧ್ಯಾಪಕರು ಗಂಭೀರ ಗಾಯಗೊಂಡಿದ್ದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕೃತ್ಯ ಎಸಗಿದ ದಿಲ್ಲಿಯ ಸಾಕೇತದ ಸರಕಾರಿ ಶಾಲೆಯಲ್ಲಿ ಎಂಟನೆ ತರಗತಿ ವಿದ್ಯಾರ್ಥಿವಿರುದ್ಧ ಐಪಿಸಿ 308ರ ಪ್ರಕಾರ ಕೊಲೆ ಯತ್ನ ಕೇಸುದಾಖಲಿಸಲಾಗಿದೆ.
ತರಗತಿಯಲ್ಲಿ ಆತನ ಬ್ಯಾಗಿನಲ್ಲಿ ಕಬ್ಬಿಣದ ಸಲಾಕೆ ಇರುವುದನ್ನು ಅಧ್ಯಾಪಕರು ನೋಡಿದ್ದರು. ಈವಿಷಯವನ್ನು ಹೆತ್ತವರಿಗೆ ತಿಳಿಸುವೆ ಎಂದು ಅಧ್ಯಾಪಕರು ಹೇಳಿದ್ದರು. ಇದು ಬಾಲಕನಲ್ಲಿ ಕೋಪವುಂಟಾಗಲು ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸರಿಗೆ ದೂರು ನೀಡಲಾಯಿತು. ತಕ್ಷಣ ಅಲ್ಲಿಗೆ ಧಾವಿಸಿದಾಗ ಅಧ್ಯಾಪಕರ ಮೈಯಿಡೀ ರಕ್ತದಿಂದ ಒದ್ದೆಯಾಗಿತ್ತು. ಕೂಡಲೇ ಪೊಲೀಸರು ಅಧ್ಯಾಪಕನನ್ನು ಏಮ್ಸ್‍ಗೆ ದಾಖಲಿಸಿದರು.
ಬ್ಯಾಗಿನಲ್ಲಿ ಕಬ್ಬಿಣದ ಸಲಾಕೆ ನೋಡಿದ್ದ ಅಧ್ಯಾಪಕರು ಆತನಿಗೆ ಬೈದಿದ್ದಾರೆ. ಈವಿಷಯವನ್ನು ಫೋನ್ ಕರೆ ಮಾಡಿ ಬಾಲಕನ ಮಾವನಿಗೆ ತಿಳಿಸಿದ್ದಾರೆ. ನಂತರ ಇದೇ ಕಬ್ಬಿಣದಂಡದಿಂದ ಅಧ್ಯಾಪಕನ ತಲೆ ಮುಖಕ್ಕೆ ಹೊಡೆದು ಓಡಿಹೋಗಿದ್ದಾನೆ. ಆಗಾಗ ಶಾಲೆಗೆ ತಪ್ಪಿಸುತ್ತಿರುವುದನ್ನು ಕೂಡ ಅಧ್ಯಾಪಕರು ಅವನಲ್ಲಿ ಪ್ರಶ್ನಿಸಿದ್ದರು.