ಕಣ್ಣೂರ್: ಜಿಲ್ಲೆಯ ತಲಶ್ಶೇರಿಯಲ್ಲಿ ನಡೆದ ಈಜುಸ್ಪರ್ಧೆಯ ವೇಳೆ ಬಾಲಕನೊಬ್ಬ ಮುಳುಗಿ ಮೃತನಾದ ಘಟನೆಯಲ್ಲಿ ಎಇಒ, ಅಧ್ಯಾಪಕನ ಸಹಿತ ಒಂಬತ್ತು ಮಂದಿಯನ್ನು ತಲಶ್ಶೇರಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಇವರ ವಿರುದ್ಧ ಅಚಾತುರ್ಯದ ನರಹತ್ಯೆ ಎಂದು ಕೇಸು ದಾಖಲಿಸಲಾಗಿದೆ.
ಕಳೆದ ತಿಂಗಳು 14ನೆ ತಾರೀಕಿಗೆ ಘಟನೆ ನಡೆದಿತ್ತು. ತಲಶ್ಶೇರಿ ರೆವನ್ಯೂ ಜಿಲ್ಲಾ ಸ್ಕೂಲ್ ಈಜುಸ್ಪರ್ಧೆಯಲ್ಲಿ ನ್ಯೂ ಮಾಹಿ ಎಂಎಂ ಹೈಸ್ಕೂಲಿನ ಒಂಬತ್ತನೆ ತರಗತಿ ವಿದ್ಯಾರ್ಥಿ ಋತ್ವಿಕ್ ರಾಜ್ ಕೊಳದಲ್ಲಿಮುಳಗಿ ಮೃತಪಟ್ಟಿದ್ದನು. ಭಾರೀ ಮಳೆಯು ಕೇರಳಾದ್ಯಂತ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗೃತೆ ವಹಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದ ವೇಳೆಯೇ ಈಜು ಸ್ಪರ್ಧೆಯನ್ನು ಸಂಘಟಿಸಲಾಗಿತ್ತು.
ಯಾವುದೇ ಸುರಕ್ಷಾ ಕ್ರಮೀಕರಣಗಳಿಲ್ಲದೆ ಈಜು ಸ್ಪರ್ಧೆ ಏರ್ಪಡಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳ ಕ್ರಮದ ವಿರುದ್ಧ ಮಕ್ಕಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ನಂತರ ತಲಶ್ಶೇರಿ ಸೌತ್ ಎ.ಇ.ಒಪಿ.ಪಿ. ಸನಕನ್ ,ಸ್ಪರ್ಧಾ ಸಮಿತಿ ಸದಸ್ಯರಾದ ಅಬ್ದುಲ್ ನಸೀರ್, ಮುಹಮ್ಮದ್ ಝಕರಿಯ,ಮನೊಹರ್, ಕರುಣ್, ಜಯ್‍ಮೋನ್ , ಪಿ.ಶೀನಾ, ಸೊಫಿನ್ ಜಾನ್, ಸುಧಾಕರನ್ ಪಿಳ್ಳೆ ಎಂಬವರು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದರು. ಭಾರತದ ದಂಡ ಸಂಹಿತೆಯ 304 ಎ ಕಲಂಪ್ರಕಾರ ಉದ್ದೇಶಪೂರ್ವಕವಲ್ಲದ ಕೊಲೆ ಎಂದು ಕೇಸು ದಾಖಲಿಸಿಕೊಳ್ಳಲಾಗಿದೆ.
ಬಂಧನವನ್ನು ದಾಖಲಿಸಿಕೊಂಡು ಠಾಣೆಯಲ್ಲಿ ಜಾಮೀನಿನ ಮೇಲೆ ಇವರನ್ನು ಬಿಟ್ಟು ಕಳುಹಿಸಲಾಗಿದೆ. ಘಟನೆಯಲ್ಲಿ ವಿದ್ಯಾಭ್ಯಾಸ ಸಚಿವರ ಆದೇಶದ ಪ್ರಕಾರ ಇಲಾಖ ಮಟ್ಟದ ತನಿಖೆ ಮುಂದುವರಿಯುತ್ತಿದೆ. ಇದೇ ವೇಳೆ ಪೊಲೀಸರು ಕ್ರಮ ಜರಗಿಸಿದ್ದಾರೆ.