- ರಾಜಕೀಯ ಅಪರಾಧೀಕರಣಕ್ಕೆ ಕಡಿವಾಣ ಹಾಕಲು ಮತ್ತು ನಿಯಂತ್ರಣ
- ಭ್ರಷ್ಟಾಚಾರ ಮತ್ತು ಅಪರಾಧ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟು ಕಳವಳ
- ಅಭ್ಯರ್ಥಿಗಳ ಅಪರಾಧ ಹಿನ್ನೆಲೆಗಳ ಎಲ್ಲ ಮಾಹಿತಿಗಳನ್ನು ವೆಬ್ಸೈಟ್ ನಲ್ಲಿ
ನವದೆಹಲಿ ; ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿ ತನ್ನ ಅಪರಾಧ ಹಿನ್ನೆಲೆಯನ್ನು ಘೋಷಿಸಬೇಕೆಂದು ಸುಪ್ರೀಂ ಕೋರ್ಟು ಆದೇಶ ನೀಡಿದೆ. ಮಾತ್ರವಲ್ಲ ರಾಜಕೀಯ ಅಪರಾಧೀಕರಣಕ್ಕೆ ಕಡಿವಾಣ ಹಾಕಲು ಮತ್ತು ನಿಯಂತ್ರಣ ಹೇರಲು ಸೂಕ್ತ ಶಾಸನ ರಚಿಸುವಂತೆ ಸಂಸತ್ತಿಗೆ ಸುಪ್ರೀಂ ಸಲಹೆ ನೀಡಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ರಾಜಕೀಯ ರಂಗದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟು ಕಳವಳ ವ್ಯಕ್ತ ಪಡಿಸಿದ್ದು, ಈ ಕಳಂಕ ನಿವಾರಣೆಗೆ ಸೂಕತ ಶಾಸನ ಅಗತ್ಯ ಎಂದು ಪ್ರತಿಪಾದಿಸಿದೆ.
ಗುರುತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಶಾಸನ ಸಭೆ ಪ್ರವೇಶಿಸಿ ಕಾನೂನು ರಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಸಂಸತ್ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಅಭಿಪ್ರಾಯ ಪಟ್ಟಿದೆ.
ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಮಾಹಿತಿ ದಪ್ಪ ಅಕ್ಷರಗಳಲ್ಲಿ ನಮೂದಿಸಿದ ಅರ್ಜಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಮತ್ತು ಅವರ ಅಪರಾಧಗಳ ಕುರಿತು ತಿಳಿಯುವ ಹಕ್ಕು ಮತದಾರರಿಗಿದೆ. ಮಾತ್ರವಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಅಪರಾಧ ಹಿನ್ನೆಲೆಗಳ ಎಲ್ಲ ಮಾಹಿತಿಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಬೇಕೆಂದು ಹೇಳಿದೆ.
ಸದ್ಯ ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಶಿಕ್ಷೆಗೆ ಗುರಿಯಾದವರನ್ನು ಮಾತ್ರ ಸ್ಪರ್ಧೆಗೆ ಅನರ್ಹಗೊಳಿಸುವ ಅವಕಾಶ ಇದೆ. ಆ ನಿರ್ಬಂಧವನ್ನು ದೋಷಾರೋಪಕ್ಕೂ ಅನ್ವಯಿಸಬೇಕೆಂದು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೇರೆಗೆ ಸುಪ್ರೀಂ ಕೋರ್ಟು ಈ ಮಹತ್ವದ ತೀರ್ಪು ಪ್ರಕಟಿಸಿದೆ.