ಬೆಂಗಳೂರು : ಕೊರೊನಾ ಸೋಂಕಿಗೆ ಒಳಗಾಗಿ ಕ್ಲಿಷ್ಟಕರ ಸನ್ನಿವೇಶ ಎದುರಿಸುತ್ತಿರುವ ರೋಗಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ.

ಐಸಿಎಂಆರ್ ನೀಡಿರುವ ಅನುಮತಿ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂತಹ ಚಿಕಿತ್ಸೆಗೆ ಚಾಲನೆ ನೀಡಲಾಗಿದ್ದು, ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಎಸ್ ಸಿಜಿ ಆಸ್ಪತ್ರೆ ಪ್ಲಾಸ್ಮಾ ಥೆರಪಿಯ ಪ್ರಯೋಗವನ್ನು ಕೊರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡುತ್ತಿದೆ. ಕೊರೊನಾದಿಂದ ಗುಣಮುಖರಾದವರೊಬ್ಬರು ತಮ್ಮ ರಕ್ತದ ಪ್ರತಿರೋಧಕ ಕಣಗಳನ್ನು ದಾನ ಮಾಡುತ್ತಾರೆ. ಅವರಿಂದ ಪ್ರತಿರೋಧಕ ಕಣಗಳನ್ನು ಪಡೆದು ಕೊರೊನಾ ಸೋಂಕಿತ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಚಿಕಿತ್ಸೆಯೇ ಪ್ಲಾಸ್ಮಾ ಥೆರಪಿಯಾಗಿದೆ.

ಈ ಹಿಂದೆ ದೆಹಲಿಯಲ್ಲಿ 49 ವರ್ಷದ ಕೊರೊನಾ ರೋಗಿಯನ್ನು ಪ್ಲಾಸ್ಮಾ ಚಿಕಿತ್ಸೆ ಮೂಲಕ ಗುಣಪಡಿಸಲಾಗಿದೆ. ಅಮೆರಿಕ, ಚೀನಾದಲ್ಲಿ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗಿದ್ದು, ಸಮಾಧಾನಕಾರಿ ಫಲಿತಾಂಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕೇರಳ, ಗುಜರಾತ್, ಪಂಜಾಬ್‌ನಲ್ಲೂ ಪ್ಲಾಸ್ಮಾ ಥೆರಪಿಗೆ ಅನುಮತಿ ಸಿಕ್ಕಿದೆ.
ಈ ನಿಟ್ಟಿನಲ್ಲಿ ಸೋಂಕಿತ ರೋಗಿಗಳ ಜೀವ ಉಳಿಸಲು ತಬ್ಲಿಘಿ ಜಮಾಅತ್ ಸದಸ್ಯರು ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ 1,000 ಕ್ಕೂ ಹೆಚ್ಚು ಜನರು ಸ್ವಯಂಪ್ರೇರಣೆಯಿಂದ ಕೊರೊನಾವೈರಸ್ ಪರೀಕ್ಷೆಗೆ ತಮ್ಮ ಒಪ್ಪಿಗೆ ನೀಡಿದ್ದು, ತಮ್ಮ ಮೇಲೆ ಹರಡಲಾದ ತಪ್ಪು ಕಲ್ಪನೆಯನ್ನು ದೂರಮಾಡಲು, ಅಧಿಕಾರಿಗಳೊಂದಿಗೆ ಸಹಕರಿಸಿಲ್ಲ ಎಂಬ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಅವರು ಬಯಸುತ್ತಾರೆ. ಮುಸ್ಲಿಮರಲ್ಲಿ ರಕ್ತದಾನ ಬಹಳ ಸಾಮಾನ್ಯವಾಗಿದೆ. ನಮಗೆ ಅವಕಾಶ ಸಿಕ್ಕರೆ, ಧರ್ಮ ಅಥವಾ ಇತರ ಭಿನ್ನತೆಗಳನ್ನು ಲೆಕ್ಕಿಸದೆ ಮಾನವೀಯತೆಗೆ ಸಹಾಯ ಮಾಡಲು ನಾವು ಮುಂದೆ ಬರುತ್ತೇವೆ” ಎಂದು ತಬ್ಲೀಗಿಗಳು ಹೇಳಿದ್ದಾರೆ.

ಪ್ಲಾಸ್ಮಾ ಥೆರಪಿ ಎಂದರೇನು?

ಪ್ಲಾಸ್ಮಾ ಎಂದರೆ ರಕ್ತದ ಕಣ (ಹಳದಿ ದ್ರವಾಂಶ). ರಕ್ತದಲ್ಲಿರುವ ರೋಗ ನಿರೋಧಕ ಅಂಶ ಇರುವುದುಪ್ಲಾಸ್ಮಾದಲ್ಲಿ. ಪ್ಲಾಸ್ಮಾ ಥೆರಪಿ ಎಂದರೆ ಗುಣಮುಖರಾಗಿರುವ ವ್ಯಕ್ತಿಯ ರಕ್ತದಲ್ಲಿರುವ ಪ್ಲಾಸ್ಮಾವನ್ನು ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯ ರಕ್ತಕ್ಕೆ ಇಂಜೆಕ್ಸ್ ಮಾಡುವುದು. ಗುಣಮುಖರಾದವರ ರಕ್ತದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇದೇ ರಕ್ತದಲ್ಲಿರುವ ಪ್ಲಾಸ್ಮಾವನ್ನು ರೋಗಿಗೆ ನೀಡಿದರೆ ಆಗ ಆ ರೋಗಿಯ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ. ಕೊರೋನಾದಿಂದ ಗುಣಮುಖರಾಗಿರುವ ವ್ಯಕ್ತಿಯ ಪ್ಲಾಸ್ಮಾವನ್ನು ಕೊರೊನಾದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗೆ ಇಂಜೆಕ್ಟ್ ಮಾಡಿದರೆ ಆ ರೋಗಿಯ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ. ಈ ಚಿಕಿತ್ಸೆಯಿಂದ ರೋಗಿಗಳು 3 ರಿಂದ 7 ದಿನದೊಳಗೆ ಗುಣಮುಖರಾಗುವ ನಿರೀಕ್ಷೆ ಇದೆ. ಗುಣಮುಖರಾದ ವ್ಯಕ್ತಿ 28 ದಿನಗಳ ನಂತರ ಪ್ಲಾಸ್ಮಾ ದಾನ ಮಾಡಬಹುದು. ಒಬ್ಬ ರೋಗಿಗೆ 200ರಿಂದ 250 ಮಿಲಿ ಲೀಟರ್ ಅಗತ್ಯ ಇದೆ. ದಾನಿ 5 ಮಂದಿಗೆ ನೀಡಬಹುದು.

LEAVE A REPLY

Please enter your comment!
Please enter your name here