ಯುಎಇಯ ರಾಸ್ ಅಲ್ ಖೈಮಾದ ಖುಝಾಮಾ ಪ್ರದೇಶದ ಈಜುಕೊಳವೊಂದರಲ್ಲಿ ಇಬ್ಬರು ಅವಳಿ ಮಕ್ಕಳು ಮುಳುಗಿ ಜೀವ ಬಿಟ್ಟಿದ್ದಾರೆ. ಎರಡುವರೆ ವರ್ಷದವರಾದ ಈ ಇಬ್ಬರನ್ನು ಅಬ್ದುಲ್ಲ .ಎಂ ಹಾಗೂ ಝಾಯೆದ್ .ಎಂ ಎಂದು ಗುರುತಿಸಲಾಗಿದೆ.

ಎಮಿರಾತಿ ಪ್ರಜೆಗಳಾದ ಈ ಮಕ್ಕಳು ಗುರುವಾರ ರಾತ್ರಿ 10.10 ರಿಂದ ಈಜುಕೊಳದ ಸಮೀಪದಿಂದ ನಾಪತ್ತೆಯಾಗಿದ್ದರು. ರಾಸ್ ಅಲ್ ಖೈಮಾ ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕಾಗಮಿಸಿ ಕಾರ್ಯಪ್ರವೃತ್ತರಾದರೂ ಕೂಡ ಮಕ್ಕಳ ಬಗ್ಗೆ ಯಾವುದೇ ಪತ್ತೆ ಇರಲಿಲ್ಲ. ಈಜು ಕೊಳ ತುಂಬಾ ದೊಡ್ದದಿದ್ದ ಕಾರಣ ಕಾರ್ಯಾಚರಣೆಗೆ ಅಡಚಣೆಯಾಗಿತ್ತು.

ಅದಾಗ್ಯೂ ಸುಮಾರು 83 ನಿಮಿಷಗಳ ನಿರಂತರ ಕಾರ್ಯಾಚರಣೆಯ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರು ಮಕ್ಕಳ ದೇಹವನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮಕ್ಕಳು ಮೃತಪಟ್ಟಿರುವುದಾಗಿ ತಿಳಿಸಲಾಯಿತು.

ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ನಂತರ ರಾಸ್ ಅಲ್ ಖೈಮಾದ ಶೇಖ್ ಜಾಯೆದ್ ಮಸೀದಿಯಲ್ಲಿ ಅವಳಿಗಳಿಗಾಗಿ ಜನಾಝ ಪ್ರಾರ್ಥನೆಗಳನ್ನು ನೆರವೇರಿಸಿ, ಆ ಬಳಿಕ ಇಬ್ಬರನ್ನು ಹೂದಾಬಾ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

Leave a Reply