ಗೋ ರಕ್ಷಣೆ ಎಂಬುದು ಭಾರತದಲ್ಲಿ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಬಹಳ ಚರ್ಚೆಗೆ ಗ್ರಾಸವಾದ ವಿಷಯ. ಬ್ರಿಜಿಲ್ ಮತ್ತು ಆಸ್ಟ್ರೇಲಿಯಾದಂತೆ ಭಾರತವೂ ಲಕ್ಷ ಲಕ್ಷ ಟನ್ ಗಟ್ಟಲೆ ಬೀಫ್ ರಫ್ತು ಮಾಡುವ ದೇಶ. ಇದೇ ಸಂದರ್ಭದಲ್ಲಿ ವಿದೇಶದಿಂದ ಬಂದು ಹಸುವಿನ ಮೇಲೆ ಕಾಳಜಿ ವಹಿಸಿದ ಓರ್ವ ಮಹಿಳೆಯ ಸ್ಟೋರಿ ನಿಮ್ಮ ಮುಂದೆ ತರುತ್ತಿದ್ದೇವೆ.

ಫ್ರೀಡೆರಿಕ್ ಐರಿನಾ (59) ಎಂಬ ಹೆಸರಿನ ಜರ್ಮನ್ ಮಹಿಳೆ, 1978 ರಲ್ಲಿ ಬರ್ಲಿನ್‌ನಿಂದ ಪ್ರವಾಸಿಗರಾಗಿ ಭಾರತಕ್ಕೆ ಬಂದರು. ಬದುಕಿನಲ್ಲಿ ಓರ್ವ ಗುರು ಮಾರ್ಗದರ್ಶಕರು ಬೇಕು ಎಂದು ಅವರು ಮಥುರಾದ ರಾಧಾ ಕುಂಡ್ ತೆರಳಿದರು. ಅಲ್ಲಿನ ಗ್ರಾಮಸ್ಥರು ಅವರಲ್ಲಿ ಹಸುವನ್ನು ಖರೀದಿಸಲು ಹೇಳಿದ ಬಳಿಕ ಅವರ ಜೀವನ ಬದಲಾಯಿತು. ಅವರು ಹಸುಗಳ ಬಗ್ಗೆ ಅಧ್ಯಯನ ನಡೆಸಲು ಪುಸ್ತಕ ಖರೀದಿಸಲು ತೊಡಗಿದರು. ಹಿಂದಿ ಕಲಿತರು. ಜನರು ಹಸು ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕ ಹಸುಗಳನ್ನು ತ್ಯಜಿಸುತ್ತಿದ್ದುದನ್ನು ಅವರು ನೋಡಿ ತುಂಬಾ ಮರುಕ ಪಡಲು ತೊಡಗಿದರು. ದಿನಾ ಈ ದೃಶ್ಯಗಳನ್ನು ಕಾಣುತ್ತಿದ್ದ ಅವರು ಈ ಬಗ್ಗೆ ಏನಾದರೊಂದು ಮಾಡಲೇ ಬೇಕೆಂಬ ದೃಢ ನಿರ್ಧಾರಕ್ಕೆ ಬಂದರು.

Friederike Irina Bruning. Source: Facebook

ಹೀಗೆ ಅವರು ಸುರಭಿ ಗೌಸೇವಾ ನಿಕೇತನ್ ಎಂಬ ಗೋಶಾಲೆಯನ್ನು ಪ್ರಾರಂಭಿಸಿದರು. ಇದರಿಂದಾಗಿ ಅವರನ್ನು ಜನರು ಸುದೇವಿ ಮಾತಾಜಿ ಎಂದು ಕರೆಯಲು ತೊಡಗಿದರು. ಈ ಗೋಸೇವಾ ನಿಕೇತನ್ 1,200 ಹಸುಗಳನ್ನು ಆರೈಕೆ ಮಾಡಿದೆ. ಅವುಗಳಲ್ಲಿ ಹೆಚ್ಚಿನವು ಅನಾರೋಗ್ಯ, ಗಾಯಗೊಂಡ ಮತ್ತು ತ್ಯಜಿಸಲ್ಪಟ್ಟ ಹಸುಗಳಾಗಿವೆ. ಒಂದು ಹಸು ಆ ಆಶ್ರಮಕ್ಕೆ ಹೋದರೆ ಬಳಿಕ ಸಂಪೂರ್ಣ ಅದನ್ನು ತನ್ನ ಮಕ್ಕಳಂತೆ ಅವರು ಸಾಕುತ್ತಾರೆ. ಅದಕ್ಕೆ ಔಷಧಿ ನೀಡಿ ಚಿಕಿತ್ಸೆ ಕೊಡುತ್ತಾರೆ.

“ಇಂದು ನನ್ನ ಬಳಿ 1,200 ಹಸುಗಳು ಮತ್ತು ಕರುಗಳಿವೆ. ನನಗೀಗ ಸ್ಥಳ ಸಾಕಾಗುತ್ತಿಲ್ಲ. ಆದರೂ ನಾನು ನನ್ನ ಕೆಲಸ ಮಾಡಿಯೇ ತೀರುತ್ತೇನೆ. ಯಾರಾದರೂ ಗಾಯಗೊಂಡ ಅನಾರೋಗ್ಯ ಹಸುಗಳನ್ನು ಆಶ್ರಮದ ಹೊರಗೆ ಬಿಟ್ಟು ಹೋದರೆ ಅದನ್ನು ನೋಡಿ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ ಎಂದು ಅವರು ಪಿಟಿಐಗೆ ತಿಳಿಸಿದರು.

ಈ ಗೋಶಾಲೆಯಲ್ಲಿ ಸುಮಾರು 60 ಕಾರ್ಮಿಕರಿದ್ದು, 22 ಲಕ್ಷದಷ್ಟು ಸಂಬಳ, ಆಹಾರ ಧಾನ್ಯ ಮತ್ತು ಔಷಧಿಗಳಿಗಾಗಿ ಪ್ರತಿ ತಿಂಗಳು ಖರ್ಚು ಆಗುತ್ತದೆ. ಈ ಮೊತ್ತವನ್ನು ವ್ಯವಸ್ಥೆ ಮಾಡುವುದು ಅಷ್ಟು ಸುಲಭವಲ್ಲ. “ನನಗೆ ಬರ್ಲಿನ್‌ನಲ್ಲಿ ಸ್ವಲ್ಪ ಆಸ್ತಿ ಇದೆ. ಅದರಿಂದ ನಾನು ಬಾಡಿಗೆ ಪಡೆಯುತ್ತೇನೆ. ಆರಂಭದಲ್ಲಿ, ನನ್ನ ತಂದೆ ಸ್ವಲ್ಪ ಹಣವನ್ನು ಕಳುಹಿಸುತ್ತಿದ್ದರು, ಆದರೆ ಈಗ ಅವರು ಹಿರಿಯ ನಾಗರಿಕರಾಗಿದ್ದಾರೆ. ಪ್ರತಿ ವರ್ಷ ಅವರನ್ನು ನೋಡಲು ಬರ್ಲಿನ್‌ಗೆ ಹೋಗುತ್ತೇನೆ.ಅವರ ಆರೋಗ್ಯ ಚೆನ್ನಾಗಿಲ್ಲ. ಆದರೂ ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಈ ಗೌಶಲಾದಲ್ಲಿ ನಾನು ಹಾಕಿದ್ದು ನನ್ನ ಹೆತ್ತವರ ಹಣ” ಎಂದು ಐರಿನಾ ಹೇಳುತ್ತಾರೆ. ಭಾರತ ಸರ್ಕಾರವು ಇನ್ನೂ  ದೀರ್ಘಾವಧಿಯ ವೀಸಾವನ್ನು ನೀಡಿಲ್ಲ. ಅವರು ಪ್ರತಿವರ್ಷ ತನ್ನ ವೀಸಾವನ್ನು ನವೀಕರಿಸಬೇಕಾಗುತ್ತದೆ.

Leave a Reply