ಮಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀಮಾನ್ ತಾಹೀರ್ ಹುಸೇನ್ ರವರು, ಆಗಸ್ಟ್ 3ರ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಆಗಸ್ಟ್ 4ರಂದು ಮಂಗಳೂರಿಗೆ ಆಗಮಿಸಿದ್ದಾರೆ. ಪಕ್ಷದ ಜಿಲ್ಲಾ ನಾಯಕರುಗಳೊಂದಿಗೆ ಸಭೆ ನಡೆಸುವ ಮುನ್ನ ಮಾಧ್ಯಮದೊಂದಿಗೆ ಸುದ್ಧಿಗೋಷ್ಠಿ ಮಾಡಿ

“2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಯಾವ ಪಕ್ಷಕ್ಕೂ ಸಂಪೂರ್ಣ ಬಹುಮತ ನೀಡದೆ, ಹೊಂದಾಣಿಕೆಯ ಸರಕಾರ ಮಾಡಲು ಜನಾದೇಶವನ್ನು ನೀಡಿದ್ದರು.

ಅಡ್ವೋಕೇಟ್ ಶ್ರೀಮಾನ್ ತಾಹೀರ್ ಹುಸೇನ್

ಈ ಸಮಯದಲ್ಲಿ ಬಿಜೆಪಿಯ ನಾಯಕರಾಗಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ತರಾತುರಿಯಲ್ಲಿ ಪ್ರಮಾಣ ವಚನ ಮಾಡಿ ಅಧಿಕಾರ ಹಿಡಿದು, ವಿಧಾನಸಭೆಯಲ್ಲಿ ಬಹುಮತವನ್ನು ತೋರಿಸಲಾಗದೆ, ಅವಮಾನಗೊಂಡು ಹೊರ ನಡೆದದ್ದು ನಾಟಕೀಯ ಬೆಳವಣಿಗೆಯಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಬೆಂಬಲ ನೀಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾದಾಗ ರಾಜ್ಯದ ಜನತೆ ತಕ್ಕಮಟ್ಟಿಗೆ ನಿರಾಳರಾಗಿದ್ದರು.

ಇದೀಗ ಸಮ್ಮಿಶ್ರ ಸರಕಾರದ 14 ತಿಂಗಳು ಆಗುವಾಗಲೇ ಬಿಜೆಪಿ ಪಕ್ಷ ತನ್ನ ಆಪರೇಶನ್ ಕಮಲದ ಮೂಲಕ ಮತ್ತೆ ಆಡಳಿತ ಪಕ್ಷದ ಶಾಸಕರನ್ನು ಖರೀದಿಸಿ, ರೆಸಾರ್ಟಿನಲ್ಲಿಟ್ಟು, ಬಳಿಕ ಶತಾಯಗತಾಯ ಪ್ರಯತ್ನಿಸಿ ರಾಜೀನಾಮೆ ಕೊಡಿಸುವ ಮೂಲಕ ಸರಕಾರ ಉರುಳಿಸಿದ್ದು, ಸ್ವತಃ ಯಡಿಯೂರಪ್ಪರ ಬಾಯಿಯಿಂದಲೇ ಉದುರಿದೆ. ಈ ವೀಡಿಯೋ ಕ್ಲಿಪ್ ಮಾಧ್ಯಮದಲ್ಲೆಲ್ಲಾ ವೈರಲ್ ಆಗಿದೆ ಕೂಡಾ. ಪ್ರಧಾನಿ ಮೋದಿಯವರು, ಸಂವಿಧಾನ ಪಾಲಿಸಬೇಕಾದವರು ತಮಗೇನೂ ಸಂಬಂಧವೇ ಇಲ್ಲದಂತೆ ವರ್ತಿಸುವ ಮೂಲಕ ಇದಕ್ಕೆಲ್ಲಾ ಪರೋಕ್ಷವಾಗಿ ಸಮ್ಮತಿಯನ್ನು ಸೂಚಿಸುತ್ತಿದ್ದಾರೆ.

ತಾವು ಜಾತ್ಯಾತೀತ ಅಭ್ಯರ್ಥಿಗಳು ಎಂದು ಮತ ಗಳಿಸಿ, ಈಗ ಕೋಮುವಾದಿ ಪಕ್ಷ ಅಧಿಕಾರ ಹಿಡಿಯಲು ಕಾರಣರಾಗಿರುವ, ರಾಜೀನಾಮೆ ನೀಡಿದ ಶಾಸಕರು ಅವರಿದ್ದ ಪಕ್ಷಕ್ಕೆ ಮಾತ್ರವಲ್ಲ, ಸಾಲು ನಿಂತು ಮತ ಹಾಕಿದ ಮತದಾರರಿಗೂ, ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರಿಗೂ ಬಹುದೊಡ್ಡ ಅನ್ಯಾಯ ಮಾಡಿದ್ದಾರೆ. ಜನತೆ ಇವರನ್ನು ಕ್ಷಮಿಸಲಾರರು. ಪುನಃ ಇವರಿಗೆ ಅವಕಾಶ ಸಿಕ್ಕಿ ಚುನಾವಣೆಗೆ ನಿಂತರೆ ಅವರನ್ನು ಹೀನಾಯವಾಗಿ ಸೋಲಿಸಬೇಕು.

ಜನಾದೇಶದ ವಿರುದ್ಧ ಹೊಲಸು ರಾಜಕೀಯ ಮಾಡುತ್ತಿರುವ ಬಿಜೆಪಿಯ ಇಂದಿನ ಸರಕಾರವು ಹೆಚ್ಚು ದಿನ ಉಳಿಯಲಾರದು. ತಮ್ಮೊಳಗಿನ ಒಳ ಜಗಳದಿಂದಲೇ ಪಕ್ಷವು ಅಧಿಕಾರ ಕಳೆದುಕೊಳ್ಳಲಿದೆ.

ಅದೇ ರೀತಿ ಈಗ ಅಧಿಕಾರಕ್ಕೆ ಬಂದ ಸರಕಾರ, ರೈತರು- ಜನರು ಅನುಭವಿಸುವ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಬದಲು ತರಾತುರಿಯಲ್ಲಿ ಟಿಪ್ಪು ಸುಲ್ತಾನ್ ದಿನಾಚರಣೆಯನ್ನು ರದ್ದು ಗೊಳಿಸಿದೆ. ಟಿಪ್ಪು ಸುಲ್ತಾನ್ ಒಂದು ಸಮುದಾಯದ ಪ್ರತನಿಧಿಯಂತೆ ಚಿತ್ರಿಸಿ ರಾಜಕೀಯ ಮಾಡುತ್ತಿದೆ. ಅವರು ಅಖಂಡ ಭಾರತವನ್ನು ಬ್ರಿಟಿಷರಿಂದ ರಕ್ಷಿಸಲು ಹೋರಾಡಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಆದ್ದರಿಂದ, ಬಿಜೆಪಿಯ ಕೋಮು ಆಧಾರಿತವಾದ ಈ ತೀರ್ಮಾನವನ್ನು ನಾವು ವಿರೋಧಿಸುತ್ತೇವೆ.

ಸೇವಾಕಾರ್ಯದಲ್ಲಿ ತೊಡಗಿರುವ ವೆಲ್ಫೇರ್ ಪಕ್ಷದ ಕಾರ್ಯಕರ್ತರು

ಅದರ ಬದಲು ರಾಜ್ಯ ಸರಕಾರ ಟಿಪ್ಪುವಿನ ಹೆಸರಲ್ಲಿ ರಾಕೆಟ್ ಸಾಯನ್ಸನ್ನು ಅಭಿವೃದ್ಧಿ ಪಡಿಸಲಿ. ಸ್ಕಾಲರ್‍ಶಿಪ್‍ಗಳನ್ನು, ಸರಕಾರೀ ಯೋಜನೆಗಳನ್ನು ತರಲಿ.

ಇಂತಹ ಘಟನೆಗಳನ್ನೆಲ್ಲಾ ದೇಶದ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಸೋಲಿಸಲಿದ್ದಾರೆ. ಕೇವಲ ಬಿಜೆಪಿಯಷ್ಟೇ ಅಲ್ಲ, ಬರದ ಪರಿಸ್ಥಿತಿ ಇರುವಾಗಲೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜಕೀಯ ಮಾಡುತ್ತಾ ಕಾಲಹರಣ ಮಾಡಿದ್ದು, ಇಂತಹ ಭ್ರಷ್ಟ ರಾಜಕೀಯ ಪಕ್ಷಗಳನ್ನು ಮತದಾರರು ಮೂಲೆ ಗುಂಪಾಗಿಸಲಿದ್ದಾರೆ.

ಈ ಪರಿಸ್ಥಿತಿಯಲ್ಲಿ ಮೌಲ್ಯಾಧಾರಿತ ರಾಜಕೀಯವೇ ಇದಕ್ಕೆಲ್ಲಾ ಪರ್ಯಾಯವಾಗಿದ್ದು, ಜನತೆ ಇದರ ನಿರೀಕ್ಷೆಯಲ್ಲಿದ್ದಾರೆ. ಇದನ್ನೇ ತನ್ನ ಉಸಿರಾಗಿಸಿರುವ ವೆಲ್ಫೇರ್ ಪಾರ್ಟಿಯ ಸಿದ್ಧಾಂತವನ್ನು  ಮತದಾರರು ಮನಗಂಡು, ಪುರಸಭೆ, ನಗರಸಭೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆರಿಸುವ ಮೂಲಕ, ಮೌಲ್ಯಾಧಾರಿತ ರಾಜಕೀಯಕ್ಕೆ ಬೆಂಬಲ ನೀಡಿ, ಕಲ್ಯಾಣ ರಾಷ್ಟ್ರ ನಿರ್ಮಿಸಲು ತಮ್ಮ ಅಮೂಲ್ಯವಾದ ಸಹಕಾರವನ್ನು ನೀಡಬೇಕು” ಎಂದು ಮಾಧ್ಯಮದೊಂದಿಗೆ ಮಾತನಾಡಿದರು.

ಬಳಿಕ ರಾಜ್ಯ ಉಪಾಧ್ಯಕ್ಷ ಶ್ರೀ ಶ್ರೀಕಾಂತ್ ಸಾಲಿಯಾನ್ ರವರಯ “ಮೌಲ್ಯಾಧಾರಿತ ರಾಜಕೀಯಕ್ಕಾಗಿ ಯುವಕರು ಮುಂದೆ ಬರಬೇಕಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಮಾನ್ ಹಬೀಬುಲ್ಲಾ ಖಾನ್, ಕೋಶಾಧಿಕಾರಿ ರಿಯಾಜ್ ಅಹಮದ್ ಪಾಷಾ, ಕಾರ್ಯದರ್ಶಿ ಮೊಯಿನುದ್ದೀನ್ ಖಮರ್, ಜಿಲ್ಲಾದ್ಯಕ್ಷ ಸುಲೈಮಾನ್ ಕಲ್ಲರ್ಪೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಜ್ ಸೈಕಲ್ ಮಾಲಕ S.M. ಮುತ್ತಲಿಬರನ್ನು ಮಂಗಳೂರು ವಲಯ ಅಧ್ಯಕ್ಷರಾಗಿಯೂ, ಅನಿವಾಸಿ ಉದ್ಯಮಿ‌ ಮುಹಮ್ಮದ್ ಇಕ್ಬಾಲರನ್ನು ಉಪಾಧ್ಯಕ್ಷರಾಗಿಯೂ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here