Representational Image

ನನಗೆ ಸುಮಾರು ವರ್ಷಗಳಿಂದ ಬಿಸಿನೆಸ್ ಇದೆ. ನೋಡಿಕೊಳ್ಳಲು ಸಾಕಷ್ಟು ಜನರಿದ್ದಾರೆ. ನಂಬಿಗಸ್ಥ ಮೆನೇಜರ್ ಇರುವುದರಿಂದ ಬಿಸಿನಸ್ ಹೆಚ್ಚು ತಲೆಬಿಸಿ ಇಲ್ಲದೇ ನಡೆದುಕೊಂಡು ಹೋಗುತ್ತಿದೆ. ಸಂಜೆಯ ಹೊತ್ತು ಸ್ನೇಹಿತರೊಂದಿಗೆ ಪಾರ್ಟಿ ಅಥವಾ ಕ್ಲಬ್ಬುಗಳಲ್ಲಿ ಆರಾಮವಾಗಿ ಕಳೆಯುತ್ತಾ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ.

ಮದುವೆಯಾದರೂ ನನ್ನ ಈ ರೀತಿಯ ಜೀವನಶೈಲಿಗೆ ಯಾವ ದಕ್ಕೆಯೂ ಆಗಿಲ್ಲ. ಹೆಂಡತಿ ತುಂಬಾ ಮುಗ್ದೆ. ನನ್ನ ಯಾವ ಸುಖಕ್ಕೂ ಅಡ್ಡಿ ಬರುವುದಿಲ್ಲ ಅವಳು. ಅವಳಿಗೆ ಈಗ ಹೆರಿಗೆಯಾಗಿ ತವರು ಮನೆಯಲ್ಲಿ ಇದ್ದಾಳೆ. ಅವಳು ಗರ್ಭಿಣಿಯಾಗಿದ್ದಾಗ ತುಂಬಾ ವೀಕ್ ಇದ್ದಳು. ಡಾಕ್ಟರ್ ಬೆಡ್ ರೆಸ್ಟ್‌ಗೆ ಸಲಹೆ ನೀಡಿದ್ದರಿಂದ ಅವಳಿಗೆ ಮೂರು ತಿಂಗಳಾಗಿದ್ದಾಗಿನಿಂದ ಇದೇ ಊರಿಗೆ ಸಮೀಪವಿರುವ ಅವಳ ಅಮ್ಮನ ಮನೆಯಲ್ಲಿಯೇ ಇದ್ದಾಳೆ.

ಲೈಂಗಿಕ ಕ್ರಿಯೆ ಈಗ ಬೇಡವೆಂದು ಡಾಕ್ಟರ್ ಹೇಳಿದ್ದರಿಂದ ನಾನು ಅವಳ ತವರಿಗೆ ಹೋಗಿದ್ದೂ ಕಡಿಮೆ. ಆದರೆ ನನಗೆ ಆ ಸುಖದಿಂದ ಜಾಸ್ತಿ ದಿನ ದೂರ ಇರುವುದು ಸಾಧ್ಯವಾಗಿರಲಿಲ್ಲ. ಅದೇ ಸಮಯದಲ್ಲಿ ನನಗೊಬ್ಬಳು ಪಾರ್ಟಿಯಲ್ಲಿ ಪರಿಚಯವಾಗಿ ಅದು ಸಂಬಂಧವಾಗಿ ಮಾರ್ಪಟ್ಟಿತು. ಅವಳೂ ನನ್ನ ಹಾಗೇ ಸಂಗಾತಿಯಿಲ್ಲದೇ ವಿರಹ ಅನುಭವಿಸುತ್ತಿದ್ದಳು. ಅನೇಕ ಸಲ ಅವಳ ಮನೆಯಲ್ಲಿ ನಾನು ಅವಳ ಸಂಗದಲ್ಲಿ ಕಳೆದಿದ್ದೇನೆ.

ಆದರೆ ಆಕೆಗೆ ಬೇರೆಯವರ ಜೊತೆಯೂ ರಿಲೇಶನ್ನಿಪ್ ಇದೆ ಅಂತ ಕೆಲವು ದಿನಗಳ ಹಿಂದೆಯಷ್ಟೇ ಗೊತ್ತಾಗಿ ಕಂಗಾಲಾಗಿದ್ದೇನೆ. ಈ ನಡುವೆ ನನ್ನ ಗುಪ್ತಾಂಗದಲ್ಲಿ ಏನೋ ಗುಳ್ಳೆ ಕಾಣಿಸಿಕೊಂಡಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಹೆಂಡತಿ ನಮ್ಮ ಮಗನೊಂದಿಗೆ ಮನೆಗೆ ಬರುತ್ತಿದ್ದಾಳೆ. ಈ ಸಂತೋಷದ ಸಮಯದಲ್ಲಿ ನಾನು ಚಿಂತೆ ಪಡುವಂತಾಗಿದೆ. ನನಗೇನಾದರೂ ಏಡ್ಸ್ ಬಂದಿರಬಹುದೇ ಎನ್ನುವ ಭಯವೂ ಕಾಡುತ್ತಿದೆ. ಹೆಂಡತಿಗೆ ಮೋಸ ಮಾಡಿದ್ದಕ್ಕೆ ದೇವರು ನನಗೀ ಶಿಕ್ಷೆ ಕೊಟ್ಟಿರಬಹುದೇ? ಪರೀಕ್ಷೆ ಮಾಡಿಸಿಕೊಳ್ಳಲೂ ಭಯವಾಗುತ್ತಿದೆ.

ಗಂಡ ಹೆಂಡತಿ ಎಂಬುದು ಕೇವಲ ಸಂಬಂಧಗಳು ಮಾತ್ರ ಅಲ್ಲ. ಅದೊಂದು ರೀತಿಯ ಭರವಸೆ ಮತ್ತು ನಂಬಿಕೆಯಾಗಿದೆ. ಅಂದರೆ ನಮ್ಮ ತನು ಮನ ಧನದ ಪರಸ್ಪರ ಸಂಗತಿಗಳು ಆಗಿರುತ್ತವೆ. ಅನೈತಿಕ ಸಂಬಂಧ ನಿಮ್ಮ ಪತ್ನಿ ಇಟ್ಟುಕೊಂಡಿದ್ದರೆ ನೀವು ಸಹಿಸಿಕೊಳ್ಳುತ್ತಿದ್ದೀರಾ? ಯಾಕೆ ಪುರುಷರಿಗೆ ಹಾಗೆ ಯೋಚಿಸಲು ಸಾಧ್ಯವಾಗುತ್ತಿಲ್ಲ.

ಐಷಾರಾಮಿ ಜೀವನವನ್ನು ಸಾಗಿಸುತ್ತಿರುವ ನಿಮಗೆ ನಿಮ್ಮ ಹೆಂಡತಿಯ ಬಗ್ಗೆಯೂ ಅಕ್ಕರೆಯಿಲ್ಲ. ಅದಿದ್ದಿದ್ದರೆ ನಿಮ್ಮ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ಆಕೆ ಕಷ್ಟ ಅನುಭವಿಸುತ್ತಿರವಾಗ ನೀವಿಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾ ಬೇರೆ ಹೆಂಗಸೊಂದಿಗೆ ಮಜಾ ಉಡಾಯಿಸುತ್ತಾ ಕಾಲಕಳೆಯುತ್ತಿರಲಿಲ್ಲ. ಆ ಸಮಯದಲ್ಲಿ ಅವಳು ತವರಿನಲ್ಲಿ ಇದ್ದರೂ ಆಗಾಗ ಅಲ್ಲಿಗೆ ಹೋಗಿ ಅವಳ ಯೋಗಕ್ಷೇಮ ವಿಚಾರಿಸುತ್ತಾ ಅವಳ ಜೊತೆಯೇ ಸಮಯ ಕಳೆಯಬಹುದಿತ್ತಲ್ಲಾ. ಅವಳ ಮುಗ್ಧತನವನ್ನು ನೀವು ಈ ರೀತಿ ದುರುಪಯೋಗ ಪಡಿಸಿಕೊಳ್ಳಬಾರದಿತ್ತು.ನಿಮಗೆ ಹೆಚ್ಐವಿ ಸೋಂಕೇ ತಗಲಿದ್ದರೆ ಅವಳು ನಿಮ್ಮ ಸಹವಾಸ ಮಾಡಿದರೆ ಅದು ಅವಳಿಗೂ ಪಾಸ್ ಆಗುತ್ತದೆ ಅಷ್ಟೇ ಮತ್ತು ಹುಟ್ಟುವ ಮಗುವಿಗೂ ಅದರಿಂದ ತೊಂದರೆ ಆಗಬಹುದು.

ಆದ್ದರಿಂದ ಮೊದಲು ನೀವು ನಿಮ್ಮ ರಕ್ತ ಪರೀಕ್ಷಿಸಿಕೊಳ್ಳಿ. ಸೋಂಕು ತಗಲಿದ್ದರೆ ಅದಕ್ಕೆ ಔಷಧಿ ಮಾಡಿಸಿಕೊಳ್ಳಿ. ಗುಪ್ತಾಂಗದಲ್ಲಿ ಗುಳ್ಳೆಗಳಿಗೆ ಹಲವು ಸೋಂಕುಗಳು ಬ್ಯಾಕ್ಟೀರಿಯಾಗಳು ಕಾರಣ ಆಗಿರುತ್ತದೆ.

ಪರೀಕ್ಷೆ ಮಾಡದೆ ವಿನಾ ಕಾರಣ ಖಿನ್ನತೆಗೊಳಗಾಗದೆ ಇನ್ನು ಮುಂದೆ ಯಾರದೇ ಸಹವಾಸ ಮಾಡದಿರಿ. ತಾತ್ಕಾಲಿಕ ಸುಖಕ್ಕಾಗಿ ಭಯಾನಕ ರೋಗ ಬಂದಿರುವ ಜನರನ್ನು ಸಂಪರ್ಕಿಸಿ ನೋಡಿ. ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಏಡ್ಸ್ ಬಂದರೆ ಸ್ವಂತ ಪತ್ನಿ ಮಕ್ಕಳೂ ಹತ್ತಿರ ಬರಲು ಭಯ ಪಡುತ್ತಾರೆ ಮತ್ತು ನಿಂದ್ಯತೆಗೊಳಗಾಗುತ್ತೀರಿ. ನಿಜವಾಗಿ ಹಾಗೆ ವರ್ತಿಸಬಾರದಾದರೂ ಸಮಾಜ ಹಾಗೆಯೇ ನೋಡಿ ಕೊಳ್ಳುತ್ತದೆ. ನಿಮಗೆ ಏಡ್ಸ್ ಬಾರದೆ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. ಯಾಕೆಂದರೆ ನಿಮ್ಮಿಂದಾಗಿ ನಿಮ್ಮ ಅಮಾಯಕ ಪತ್ನಿ ಮತ್ತು ಮಕ್ಕಳಿಗೆ ಶಿಕ್ಷೆಯಾಗುವುದು ಬೇಡ. ಒಂದು ವೇಳೆ ಇದ್ದರೆ ಯಾವುದೇ ಮುಜುಗರ ಇಲ್ಲದೆ ಚಿಕಿತ್ಸೆ ಮಾಡಿ ನಿಮ್ಮ ಪತ್ನಿ ಮಗುವನ್ನು ಅದರಿಂದ ರಕ್ಷಿಸಿ.

Leave a Reply