ಇದು ನಮ್ಮ ಊರು: ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದೂ ಕೂಡ ಇಂದು ಪ್ರಪಂಚದಲ್ಲಿ ಲಕ್ಷಾಂತರ ಜನರು ಇದನ್ನು ಸೇದುತ್ತಾರೆ. ಇಂತಹ ಸಿಗರೇಟ್ ಪ್ರಿಯರು ಸೇದಿ ಎಸೆದ ತ್ಯಾಜ್ಯದಿಂದ ಇಲ್ಲೊಬ್ಬ ಯುವಕ ಬದುಕು ಕಟ್ಟಿಕೊಂಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ನಿವಾಸಿ 27 ವರ್ಷದ ನಮನ್ ಸಿಗರೇಟ್ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಕೆಲಸ ಮಾಡುತ್ತಾರೆ. ಅವರ ಕಂಪನಿಯು ದೇಶದ ವಿವಿಧ ರಾಜ್ಯಗಳಿಂದ ಸಿಗರೇಟ್ ತುಂಡುಗಳನ್ನು ಸಂಗ್ರಹಿಸಿ ನಂತರ ಅದನ್ನು ಮರುಬಳಕೆ ಮಾಡುವ ಮೂಲಕ ವಸ್ತುಗಳನ್ನು ತಯಾರಿಸುತ್ತದೆ. ನಮನ್ ಅವರ ಕಂಪೆನಿ ತಯಾರಿಸುವ ವಸ್ತುಗಳಲ್ಲಿ ಸೊಳ್ಳೆ ನಿವಾರಕ, ತಲೆ ದಿಂಬು, ಕುಶನ್, ಟೆಡ್ಡಿ ಬೇರ್, ಕೀ ಚೈನ್ ಮುಂತಾದ ಉತ್ಪನ್ನಗಳು ಒಳಗೊಂಡಿವೆ. ಈಗಾಗಲೇ ನಮನ್ ಅವರ ಕಂಪೆನಿ 300 ದಶಲಕ್ಷಕ್ಕೂ ಹೆಚ್ಚು ಸಿಗರೇಟ್ ತುಂಡುಗಳನ್ನು ಮರುಬಳಕೆ ಮಾಡಿದೆ ಎನ್ನಲಾಗಿದೆ.

”ನಾನು ಪಿಜಿಯಲ್ಲಿದ್ದಾಗ ಜನರು ಹೇಗೆ ಧೂಮಪಾನ ಮಾಡುತ್ತಿದ್ದಾರೆಂದು ನೋಡಿದೆ. ಅವರು ಅದನ್ನು ಸೇದಿ ಎಲ್ಲಿಯಾದರೂ ಎಸೆಯುತ್ತಿದ್ದರು. ಈ ಬಗ್ಗೆ ನಾನು ಸಂಶೋಧನೆ ನಡೆಸಿದಾಗ ಈ ಸಿಗರೇಟ್ ತುಂಡುಗಳು ಭೂಮಿಯಲ್ಲಿ ಡಿ-ಕಂಪೋಸ್ (ಜೀರ್ಣವಾಗಲು) 10 ವರ್ಷಗಳು ಬೇಕಾಗುತ್ತದೆ ಎಂದು ತಿಳಿದುಕೊಂಡೆ. ಸಿಗರೇಟ್ ಬಟ್ಸ್ ನ ಕೆಳಭಾಗದಲ್ಲಿ ಪಾಲಿಮರ್ ಅಥವಾ ಫೈಬರ್ ನಿಮ್ದ ತಯಾರಿಸಲಾದ ವಸ್ತು ಇದೆ ಎಂದು ಜನರು ಹೇಳುವುದು ಕೇಳಿದ್ದೆ, ಈ ಕುರಿತು 4 ತಿಂಗಳು ಸಂಶೋಧನೆ ನಡೆಸಿದ ನಂತರ ಅವುಗಳನ್ನು ಮರುಬಳಕೆ ಮಾಡುವ ಮೂಲಕ ಉತ್ಪನ್ನಗಳನ್ನಾಗಿ ಪರಿವರ್ತನೆ ಮಾಡಬಹುದು ಎಂದು ತಿಳಿದುಬಂದಿತು. ಆ ನಂತರ ಇದಕ್ಕಾಗಿ ಒಂದು ಕಂಪೆನಿ ಸ್ಥಾಪಿಸಿ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದೆ” ಎನ್ನುತ್ತಾರೆ ನಮನ್.

ಇದರಿಂದ ತಯಾರಿಸಲಾಗುವ ಎಲ್ಲಾ ಉತ್ಪನ್ನಗಳನ್ನು ನಮನ್ ಅವರ ಕಂಪೆನಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಾಗೂ ವಿತರಕರು ಮತ್ತು ಮಾರಾಟಗಾರರ ಮೂಲಕ ಮಾರಾಟ ಮಾಡುತ್ತಾರೆ.ನಮನ್ ಅವರ ಕಂಪೆನಿಯಲ್ಲಿ ಈ ಕೆಲಸಕ್ಕೆ ಸುಮಾರು 1000 ಜನರನ್ನು ನೇಮಿಸಿದ್ದಾರೆ. ಕಸದಿಂದ ರಸ ತಯಾರಿಸುವುದು ಮಾತ್ರವಲ್ಲದೆ ಭೂಮಿಗೆ ತೊಂದರೆಯಾಗುವಂತಹ ಹಾನಿಕರ ವಸ್ತುಗಳನ್ನು ವಿಲೇವಾರಿ ಮಾಡುತ್ತಿರುವ ನಮನ್ ಅವರಿಗೊಂದು ಸೆಲ್ಯೂಟ್.

LEAVE A REPLY

Please enter your comment!
Please enter your name here