ಇತ್ತೀಚಿಗೆ ನಾನು ಮಡಿಕೇರಿಯಿಂದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಂಗಳೂರು ಕಡೆಗೆ ಹಿಂದಿರುಗುತ್ತಿದ್ದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಹತ್ತಿರ ಇರುವ ನಗರಕ್ಕೆ ಬಂದು ತಲುಪಿದಾಗ ಐವತ್ತು ಪ್ರಾಯವಿರುವ ಮಹಿಳೆಯೊಬ್ಬರಿಗೆ ರಸ್ತೆ ದಾಟುವ ವೇಳೆ ಬುಲ್ಲೆಟ್‌ವೊಂದು ಡಿಕ್ಕಿ ಹೊಡೆಯಿತು. ಪರಿಣಾಮ ಮಹಿಳೆ ನೆಲ್ಲಕಪ್ಪಲಿಸಿ ಬಿದ್ದು ಬಿಟ್ಟಿದ್ದರು. ನಿನ್ನೆ (18/12/2017) ತೊಕ್ಕೋಟಿನಿಂದ ದೆರಳಕಟ್ಟೆಗೆ ಹೋಗುತ್ತಿರುವ ವೇಳೆ ಪಂಡಿತ್ ಹೌಸ್ ಬಳಿ ಸರಿಸುಮಾರು 55 ಪ್ರಾಯವಿರುವ ವ್ಯಕ್ತಿಯೊಬ್ಬರಿಗೆ ಬೈಕ್‌ ದ್ವಿಚಕ್ರ ವಾಹನ ಹೊಡೆದು ಅದೇ ಮಾದರಿಯಲ್ಲಿ ನೆಲಕ್ಕೆ ಬಿದ್ದು ಬಿಟ್ಟರು..

ಈ ಎರಡು ದಿನದಲ್ಲಿ ಎರಡು ಪ್ರತ್ಯೇಕ ಘಟನೆಗಳು ನನ್ನ ಕಣ್ಣೆದುರಲ್ಲೇ ನಡೆದಿದೆ. ಮೊದಲನೆಯ ಘಟನೆ ನಡೆಯುವಾಗ ನಾನು ತುಸು ದೂರವಿದ್ದೆ. ರಸ್ತೆ ದಾಟಲು ಯತ್ನಿಸುತ್ತಿದ್ದ ಮಹಿಳೆ ಸರಿಯಾಗಿ ಎರಡು ಕಡೆಯಲ್ಲಿ ವಾಹನ ಬರುವುದನ್ನು ಗಮನಿಸಿದೆ ರಸ್ತೆ ದಾಟುವ ಯತ್ನವನ್ನು ಮಾಡುತ್ತಾರೆ. ಅಷ್ಟರಲ್ಲಿ ಮಧ್ಯಮ ವೇಗವಾಗಿ ಬಂದ ಬುಲ್ಲೆಟ್ ಅವರಿಗೆ ಡಿಕ್ಕಿ ಹೊಡೆಯಿತು. ಹೊಡೆದ ಅಬ್ಬರಕ್ಕೆ ಎರಡು ಮೀಟರಿನಷ್ಟು ಮೇಲಕ್ಕೆ ಹಾರಿದ‌ ಮಹಿಳೆ ರಸ್ತೆಯ ಮೇಲೆ ಬಿದ್ದರು. ಬುಲ್ಲೆಟ್ ಅಲ್ಲೆ ಮಗುಚಿ ಬಿತ್ತು. ಸವಾರನಿಗೂ ಗಾಯವಾಯಿತು. ಇಬ್ಬರನ್ನು ಆಟೋ ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ದರು.
ಎರಡನೆಯ ಘಟನೆ ನಾನು ಅಂದುಕೊಂಡತೆ ನಡೆಯಿತು. ಆ ವ್ಯಕ್ತಿ ಕೈಯಲ್ಲೊಂದು ಚೀಲ ಹಿಡಿದು ಯಾವುದೋ ಲೋಕದಲ್ಲಿ ತೇಲುತ್ತಿರುವಂತೆ ಬ್ಯುಸಿ ರಸ್ತೆಯನ್ನು ಕ್ಯಾರೇ ಮಾಡದೆ ರಸ್ತೆ ದಾಟುತ್ತಿದ್ದರು. ಒಂದೆರಡು ಸೆಕೆಂಡುಗಳು ಹೆಚ್ಚು ಕಡಿಮೆ ಆಗಿದಿದ್ದರೆ ನನ್ನ ದ್ವಿಚಕ್ರ ವಾಹನ‌ದ ಮೇಲೆ ಬೀಳುತ್ತಿದ್ದರು. ಆದರೆ ನಾನು ಅದನ್ನು ತಪ್ಪಿಸಿ ಅವರತ್ತ ನೋಟವಿಟ್ಟಾಗ ಆ ವ್ಯಕ್ತಿಗೆ ಇನ್ನೊಬ್ಬ ಬೈಕ್ ಸವಾರ ಡಿಕ್ಕಿ ಹೊಡೆದಾಗಿತ್ತು. ಇದರಲ್ಲಿ ಚಾಲಕನ ಯಾವುದೇ ತಪ್ಪಿರಲಿಲ್ಲ. ಅವರು ನಿಧಾನಗತಿಯಲ್ಲೇ ಬರುತ್ತಿದ್ದರು.. ರಸ್ತೆ ದಾಟುವ ವ್ಯಕ್ತಿಯ ಗಮನ ಎಲ್ಲೋ ಇತ್ತು.
ಇಲ್ಲಿಗೆ ಈ ಕತೆ ಮುಗಿಯೋದಿಲ್ಲ.‌ ನಾನು ಈ ಸಲ ಊರಿನಲ್ಲಿ ದ್ವಿಚಕ್ರ ವಾಹನದಲ್ಲೇ ಹೆಚ್ಚು ಪ್ರಯಾಣ ಬೇಳೆಸಿದ್ದು. ಈ ವೇಳೆ ಬಹಳಷ್ಟು ಅನುಭವವನ್ನು ಕಣ್ಣಾರೆ ಕಾಣಲು ಸಾಧ್ಯವಾಯಿತು.

೧. ಮಹಿಳೆಯರು, ವೃದ್ಧರು ರಸ್ತೆ ದಾಟುವಾಗ ಎರಡು ಮನಸ್ಸಿನಿಂದ ದಾಟುವುದು. ಅಂದರೆ ಹೆದರಿಕೆಯಿಂದಲೇ ದಾಟಲೋ.., ಬೇಡ್ವೋ ಎಂಬಂತೆ. ‌ಇಂತಹ ನಡವಳಿಕೆಗಳು ಕೆಲವೊಮ್ಮೆ ಬಹುದೊಡ್ಡ ಅಪಾಯವನ್ನು ತರಬಲ್ಲದು. ವಾಹನ ಚಾಲಕರು ಇದರಿಂದ ಗೊಂದಲಕ್ಕೆ ಒಳಗಾಗಿ ಬ್ರೇಕ್ ಹಾಕುವಾಗ ವಾಹನಗಳು ಪಲ್ಟಿ ಹೊಡೆಯುವ ಸಾಧ್ಯತೆ ಹೆಚ್ಚು.
೨. ನಾಲ್ಕು ಚಕ್ರ ವಾಹನ ಚಾಲಕರು ಅಥವಾ ಪ್ರಯಾಣಿಕರು ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಬಾಗಿಲುಗಳನ್ನು ತೆರೆದಿಡುವುದು. ಆದರೆ ಇದು ಸಾವಿಗೆ ಆಹ್ವಾನ ಅಂತ ಇವರು ಯಾರು ಯೋಚಿಸೋದೆ ಇಲ್ಲ.‌ ಓವರ್ ಟೇಕ್ ಮಾಡುವ ವಾಹನಗಳು ಒಂದು ಸಣ್ಣ ಎಡವಟ್ಟು ಮಾಡಿದರೂ ವಾಹನ ಚಾಲಕನ ಜೊತೆಗೆ ಬಾಗಿಲು ತೆರೆದಿಟ್ಟ ವ್ಯಕ್ತಿಯೂ ದೇವನ ಪಾದ ಸೇರುವುದರಲ್ಲಿ ಸಂಶಯವಿಲ್ಲ.
೩. ರಸ್ತೆ ದಾಟುವಾಗ ಮೊಬೈಲಿನಲ್ಲಿ ಮಾತನಾಡುತ್ತಾ ದಾಟುವಂಥದ್ದು. ಯಾವುದೋ ಲೋಕದಲ್ಲಿರುವವರಿಗೆ ಅದೆಷ್ಟೇ ಹಾರ್ನ್ ಹೊಡೆದರು ನಾಟುವುದಿಲ್ಲ. ಇವರು ಸಾವನ್ನು ಪ್ರೀತಿಯಿಂದ ಸ್ವಾಗತಿಸಲು ಸಜ್ಜಾಗಿರುವವರಂತೆ ವರ್ತಿಸುತ್ತಾರೆ.
೪. ಕಾಲುದಾರಿ ಇದ್ದರು ಡಾಂಬರ್ ರಸ್ತೆಯ ಮೇಲೆ‌ ನಡೆದಾಡುವ ಪಾದಚಾರಿಗಳು. ಕೆಲವು ಸಂದರ್ಭದಲ್ಲಿ ವೇಗದಿಂದ ಬರುವ ಬಸ್ಸುಗಳು, ಲಾರಿಗಳು ಓವರ್ ಟೇಕ್ ಮಾಡಬೇಕಾದರೆ ಸಂಪೂರ್ಣವಾಗಿ ರಸ್ತೆಯನ್ನು ಉಪಾಯೊಗಿಸುತ್ತದೆ. ದ್ವಿಚಕ್ರ ವಾಹನ ಸವಾರರಿಗೆ ಈ ಕಡೆ ರಸ್ತೆಯೂ ಇರಲ್ಲ ಈ ಕಡೆ ಬದಿಯಲ್ಲಿ ನಿಲ್ಲಿಸುವಂತೆಯೂ ಇಲ್ಲ. ಇದು ಕೂಡ ಸಾವಿಗೆ ಸ್ವಾಗತ ಕೋರುವಂತಿದೆ..

ಮನುಷ್ಯನ ಜೀವನವು ಅಮೂಲ್ಯವಾದುದು. ಪ್ರತಿಯೊಬ್ಬ ಮನುಷ್ಯನನ್ನು ನಂಬಿಕೊಂಡು ಬದುಕುವ ಪರಿವಾರಗಳು ಇರುತ್ತವೆ. ಆಯಸ್ಸು ಇರುವಷ್ಟು ದಿನ ನಾವು ಬದುಕಿ ಬಾಳಬೇಕಾದವರು ಸಣ್ಣಪುಟ್ಟ ಎಡವಟ್ಟುಗಳನ್ನು ಮಾಡುವ ಮೂಲಕ ಸಾವನ್ನು ಕರೆದುಕೊಂಡರು ಬರುವುದೆಂದರೆ ಏನರ್ಥ? ರಸ್ತೆಯ ದಾಟುವಾಗ ಆಗಿರಲಿ, ವಾಹನ, ಚಲಾಯಿಸುವವರಾಗಿರಲಿ ಅಥವಾ ಪಾದಚಾರಿಗಳಾಗಿರಲಿ ಬದುಕಿನ ಮೌಲ್ಯವನ್ನು ತಿಳಿದುಕೊಳ್ಳಬೇಕು.‌ ಸಾಧ್ಯವಾದಷ್ಟು ಸೂಕ್ಷ್ಮತೆಯಿಂದ ಬದುಕುವುದನ್ನು ನಾವು ಕಲಿತುಕೊಳ್ಳಬೇಕು. ಸ್ವಲ್ಪ ಯಾಮಾರಿದರೂ ಸಾವು ಖಚಿತ ಎನ್ನುವಂತ ಸತ್ಯವನ್ನು ಅರಿತುಕೊಳ್ಳಬೇಕು..

ಲೇಖಕರು: ಸಲಾಂ ಸಮ್ಮಿ

Leave a Reply