ಬರವಣಿಗೆಯನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಿ: ಡಾ. ಹಸೀನಾ ಖಾದ್ರಿ

0
63

ಮಂಗಳೂರು: ಬೆವರು ಮತ್ತು ಬದುಕು ಎಂಬುವುದು ಜೀವನದ ಬಹುಮುಖ್ಯ ಭಾಗವಾಗಿದೆ. ಗಲ್ಫ್ ನಲ್ಲಿ ದುಡಿಯುವವರ ಹಣ ಮಾತ್ರ ನಮಗೆ ಕಾಣಿಸುತ್ತದೆ. ಆದರೆ ನಮಗೆ ಅವರ ದುಡಿಮೆಯ ಕಷ್ಟ ಗೊತ್ತಾಗುವುದಿಲ್ಲ. ಅವರ ಜೀವನದ ತಳಮಳ, ಏರುಪೇರು, ಸುಖ-ದುಃಖಗಳನ್ನು ಬಹಳ ಮನಮುಟ್ಟುವಂತೆ `ಬೆವರು’ ಕಾದಂಬರಿಯಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ಸಂಶೋಧಕಿ ಡಾ. ಹಸೀನಾ ಖಾದ್ರಿ ತಿಳಿಸಿದರು.

ಅವರು ನಗರದ ಕಂಕನಾಡಿಯಲ್ಲಿರುವ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸಭಾಂಗಣದಲ್ಲಿ ನಡೆದ `ಬಿಳಿಚುಕ್ಕೆ ಪ್ರಕಾಶನ’ ಪ್ರಕಟಿಸಿದ 5ನೇ ಕೃತಿ, ಯುವ ಬರಹಗಾರ ಸಲಾಂ ಸಮ್ಮಿಯವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ವಿಮರ್ಶಿಸಿ, ಮಾತನಾಡುತ್ತಿದ್ದರು.

ಮುಂದುವರಿಯುತ್ತಾ ‘ಓದು-ಬರಹ ಅನ್ನೋದು ಯಾವುದೇ ಜಾತಿ ಧರ್ಮದ ಅಥವಾ ಯಾರ ಸೊತ್ತಲ್ಲ. ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಆ್ಯಪ್ ನಲ್ಲಿ ಯುವಕರು ಬರವಣಿಗೆಯನ್ನು ನೆಚ್ಚಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಬರವಣಿಗೆಯನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಬೇಕು’ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಟ್ಯಾಲೆಂಟ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಮಾತನಾಡುತ್ತಾ, ಯುವಕರ ಒಳ್ಳೆಯತನ, ಪ್ರತಿಭೆಯು ಸಮಾಜಕ್ಕೆ ಪರಿಚಯಿಸುವ ಮನಸ್ಸನ್ನು ಎಲ್ಲರೂ ಬೆಳೆಸಬೇಕು. ಬರಹದ ಮೂಲಕ ಎಲ್ಲರ ಭಾವನೆಗಳು ಪರಿಣಾಮಕಾರಿಯಾಗಿ ಹೊರ ಬರುತ್ತದೆ. ಬೆವರು ಕಾದಂಬರಿಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಯುವ ಪ್ರತಿಭೆ ಸಲಾಂ ಸಮ್ಮಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಲೇಖಕ ಸಲಾಂ ಸಮ್ಮಿ ತಮ್ಮ ಗಲ್ಫ್ ಜೀವನದ ಅನುಭವಗಳನ್ನು ಹಂಚಿಕೊಂಡು, ತನ್ನ ಈ ಕಾರ್ಯಕ್ಕೆ ಸಹಕಾರ-ಬೆಂಬಲವನ್ನು ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾರ್ಗ ವಾರಪತ್ರಿಕೆ ಸಂಪಾದಕ ಏ.ಕೆ.ಕುಕ್ಕಿಲ, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಚ ಉಮರ್ ಯು,ಎಚ್ ಉಪಸ್ಥಿತರಿದ್ದರು. ಬಿಳಿಚುಕ್ಕೆ ಪ್ರಕಾಶನದ ಅಧ್ಯಕ್ಷರಾದ ಎಸ್.ಎಂ. ಮುತ್ತಲಿಬ್ ಅಧ್ಯಕ್ಷತೆ ವಹಿಸಿದ್ದರು.

ಬಳಿಕ ನಡೆದ ಕವಿಗೋಷ್ಠಿಯಲ್ಲಿ ಹಿರಿಯ ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರ್, ಜಲೀಲ್ ಮುಕ್ರಿ, ಆಯಿಷಾ ಯು.ಕೆ., ಏ.ಕೆ. ಕುಕ್ಕಿಲ, ಮತ್ತು ಶಬೀನಾ ಬಾನು ವೈ,ಕೆ, ಕವನ ವಾಚಿಸಿದರು.

ಬಿಳಿಚುಕ್ಕೆ ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲೀಂ ಬೋಳಂಗಡಿ ನಿರೂಪಣೆಗೈದರು.

Leave a Reply