ಅಮೇರಿಕನ್ ಜರ್ನಲಿಝಮ್‍ನ ಶ್ರೇಷ್ಠ ಕೃತಿಗಳಲ್ಲೊಂದಾದ, ‘ಫಾದರ್ ಫರ್ಗೆಟ್ಸ್’ನಲ್ಲಿ ಲೇಖಕ ಡಬ್ಲ್ಯೂ. ಲಿವಿಂಗ್ ಸ್ಟನ್ ಲಾನ್ರ್ಡ್ ಒಂದೆಡೆ ಹೀಗೆ ಬರೆಯುತ್ತಾರೆ.

“ಕೇಳು ಕಂದಾ, ನೀನು ಗಾಢ ನಿದ್ರೆಯಲ್ಲಿರುವಾಗ, ನಾನು ಇದನ್ನೆಲ್ಲಾ ಹೇಳುತ್ತಿರುವೆ. ನಿನ್ನ ಪುಟ್ಟ ಮುಂಗೈ ನಿನ್ನ ನುಣುಪು ಕೆನ್ನೆಯಡಿ ಅದು ಹೇಗೆ ಮುದುಡಿ ಮಲಗಿದೆ! ಆ ಸುಂದರ ಗುಂಗುರು ಕೂದಲು ನಿನ್ನ ಆದ್ರ್ರ ಹಣೆಯಲ್ಲಿ ಅದೆಷ್ಟು ಒದ್ದೆಯಾಗಿ ಅಂಟಿಕೊಂಡಿದೆ! ನಿದ್ದೆಯಲ್ಲಿರುವಾಗ, ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದಿಯಾ ನೀನು! ನಾನು ಒಬ್ಬಂಟಿಯಾಗಿ, ಸದ್ದಿಲ್ಲದೆ ನಿನ್ನ ರೂಮಿಗೆ ಪ್ರವೇಶಿಸಿದೆ. ಏಕೆಂದರೆ, ಕೆಲವೇ ಕೆಲವು ನಿಮಿಷಗಳ ಮೊದಲು, ಲೈಬ್ರರಿಯಲ್ಲಿ ಪೇಪರ್ ಓದುತ್ತಾ ಕುಳಿತಿದ್ದಾಗ, ಒಂದು ತೀಕ್ಷ್ಣ ಪರಿತಾಪದ ಅಲೆ ನನ್ನ ಮನದಲ್ಲಿ ಹಾದು ಹೋಗಿತ್ತು. ಯಾವುದೇ ತಪ್ಪಿತಸ್ಥ ಭಾವನೆಯಿಂದ ನಿನ್ನ ಬಳಿ ಬಂದಿರುವೆ ನಾನು.
ಕಂದಾ, ನಾನಾಗ ವೃಥಾ ನಿನ್ನ ಮೇಲೆ ರೇಗಾಡಿ ಬಿಟ್ಟೆ. ನೀನು ಸ್ಕೂಲಿಗೆ ಹೊರಡಲು ಡ್ರೆಸ್ ಮಾಡಿಕೊಳ್ಳುತ್ತಿದ್ದಾಗ ಯಾಕೋ ಬೈದು ಬಿಟ್ಟೆ. ನಿನ್ನ ಮುಖವನ್ನು ನೀನು ಟವೆಲ್‍ನಿಂದ ಹೊಡೆದುಕೊಳ್ಳುವುದನ್ನು ನೋಡಿ ರೇಗಿ ಬಿಟ್ಟೆ ಕಣೋ. ನಿನ್ನ ಶೂಗಳನ್ನು ಕ್ಲೀನ್ ಮಾಡದ್ದಕ್ಕೂ ಬೈದು ಬಿಟ್ಟೆ. ನಿನ್ನ ಯಾವುದೇ ಆಟಿಕೆಯನ್ನು ಬಿಸಾಕಿದ್ದಕ್ಕಾಗಿ ಎಷ್ಟೊಂದು ಆರ್ಭಟಿಸಿದೆ ನಾನು!
ತಿಂಡಿ ತಿನ್ನುವಾಗ ಕೂಡ ನಾನು ನಿನ್ನನ್ನು ಬಿಡಲಿಲ್ಲ. ಸುಮ್ಮನೇ ತಪ್ಪು ಹುಡುಕಿದೆ. ನೀನು ಅದೇನನ್ನೋ ಚೆಲ್ಲಿ ಬಿಟ್ಟಿದ್ದೆ. ತಿಂಡಿಯನ್ನು ಲಗುಬಗನೆ ತಿಂದಿದ್ದೆ. ಮೇಜಿನ ಮೇಲೆ ಕೈಯೂರಿ ಕುಳಿತಿದ್ದೆ. ಬ್ರೆಡ್ ಮೇಲೆ ಬೆಣ್ಣೆಯನ್ನು ಅತಿಯಾಗಿ ಸುರುವಿದ್ದೆ. ಇವೆಲ್ಲದಕ್ಕೂ ನಾನು ರೇಗಾಡಿ ಬಿಟ್ಟೆ.
ನೀನು ಆಟಕ್ಕೆ ಹೊರಡುತ್ತಿದ್ದಂತೆ, ನಾನು ಟ್ರೈನಿಗೆ ಹೊರಡುತ್ತಿದ್ದೆ. ನೀನು ನನ್ನತ್ತ ತಿರುಗಿ ಕೈ ಬೀಸಿದೆ. ಮುದ್ದಾಗಿ, ‘ಗುಡ್ ಬೈ ಡ್ಯಾಡಿ’ ಅಂದೆ. ಪ್ರತಿಯಾಗಿ ನಾನೇನು ಮಾಡಿದೆ? ‘ಸುಮ್ಮನೆ ನಡಿಯಾಚೆ’ ಎಂದಿದ್ದೆ ಒರಟಾಗಿ.
ಸಂಜೆ ಕೂಡಾ ಹಾಗೇ ಆಯ್ತು. ನಾನು ಮನೆಗೆ ಬರುತ್ತಿದ್ದಂತೆ, ನೀನು ಮಂಡಿಯೂರಿ ಗೋಲಿ ಆಡುತ್ತಿದ್ದುದ್ದನ್ನು ಕಂಡೆ. ನಿನ್ನ ಕಾಲ್ಚೀಲ ತೂತಾಗಿ ಬಿಟ್ಟಿತ್ತು. ನಾನು ನಿನ್ನ ಸ್ನೇಹಿತರ ಎದುರಲ್ಲೇ ನಿನ್ನನ್ನು ಮನೆಗಟ್ಟಿದೆ. ನಿನನ್ನು ಅಪಮಾನಿಸಿಬಿಟ್ಟೆ. ಆ ಕಾಲ್ಚೀಲ ಬಹು ದುಬಾರಿ ಕಣೋ! ಒಬ್ಬ ತಂದೆ ಹೇಳುವುದನ್ನು ಕೊಂಚ ಕೇಳು ಮಗನೇ!
ನೆನಪಿದೆಯಾ ನಿನಗೆ. ಅನಂತರ ನಾನು ಲೈಬ್ರರಿಯಲ್ಲಿ ಏನನ್ನೋ ಓದುತ್ತಾ ಕುಳಿತಿದ್ದಾಗ, ನೀನು ಹೇಗೆ ಹೆದರಿ ಹೆದರಿ ಒಳ ಬಂದೆ ಎಂದು? ನಿನ್ನ ಪುಟ್ಟ ಕಂಗಳಲ್ಲಿ ಅದೇನೋ ನೋವಿನ ಛಾಯೆ ಇತ್ತಲ್ಲವೇ? ನಾನು ಅಸಹನೆಯಿಂದ ನಿನ್ನತ್ತ ದೃಷ್ಟಿ ಹಾಯಿಸಿದಾಗ, ನೀನೇನು ಮಾಡಿದೆ? ಬಾಗಿಲ ಮರೆಯಲ್ಲಿ ಅಂಜಿ ನಿಂತೆ ಅಲ್ಲವೇ? ಆಗಲೂ ನಾನು ಮಾಡಿದ್ದೇನು? “ಏನು ಬೇಕು ನಿನಗೆ?” ಎಂದು ಹರಿಹಾಯ್ದಿದ್ದೆ. ಅಲ್ಲವೇ?
ನೀನು ಏನೂ ಹೇಳಲಿಲ್ಲ. ಆದರೆ, ಓಡಿ ಬಂದು ಬಿಟ್ಟೆ ನೋಡು! ನಿನ್ನ ಮುದ್ದಾದ ಮೃದು ಕೈಗಳನ್ನು ನನ್ನ ಕತ್ತಿನ ಸುತ್ತ ಬಳಸಿ ನನ್ನನ್ನು ಹೇಗೆ ಮುದ್ದಿಸಿ ಬಿಟ್ಟೆ ನೋಡು! ನಿನ್ನ ಪುಟ್ಟ ಹೃದಯದಲ್ಲಿ ಅದೆಂತಹ ಪ್ರೀತಿ ಅಡಗಿತ್ತು! ನಾನು ನಿನ್ನ ಬೈದರೂ ಕೂಡ ಅದೆಂತಹ ನಿರ್ಮಲ ಪ್ರೀತಿ ತೋರಿಸಿ ಬಿಟ್ಟೆ ನನಗೆ!
ನೀನು ತಟುಪುಟು ಸದ್ದು ಮಾಡುತ್ತಾ ನನ್ನ ರೂಮಿನಿಂದ ಹೊರಟು ಹೋದೆ. ಮಗನೇ ಅದಾದ ತುಸು ಹೊತ್ತಿನಲ್ಲೇ ನೋಡು ನನ್ನ ಪೇಪರ್ ನನ್ನ ಕೈಯಿಂದ ಜಾರಿ ಬಿದ್ದಿತ್ತು! ಯಾವುದೋ ವ್ಯಥೆ ನನ್ನನ್ನು ಆವರಿಸಿ ಬಿಟ್ಟಿತ್ತು! ನನ್ನ ದುರಭ್ಯಾಸಗಳು, ತಪ್ಪು ಹುಡುಕುವ ನನ್ನ ಆ ದುರಭ್ಯಾಸ…. ಗದರಿಸುವ ನನ್ನ ಆ ಕೆಟ್ಟ ಚಟ….. ನನ್ನಿಂದ ಏನು ಮಾಡಿಸುತ್ತಿದೆ! ನನ್ನ ಮಗುವಾಗಿ ಹುಟ್ಟಿದ್ದಕ್ಕೆ ಇವೇ ಏನು ನಾನು ನೀಡೋ ಪ್ರತಿಫಲ?
ಇವೆಲ್ಲದರ ಅರ್ಥ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದಲ್ಲ ಕಂದಾ! ಬಹುಶಃ ನಾನು ನಿನ್ನಿಂದ ಬಹಳಷ್ಟು ನಿರೀಕ್ಷಿಸುತ್ತಿದ್ದೇನೆ ಅಂತ ಕಾಣುತ್ತೆ! ಬಹುಶಃ ನನ್ನ ವಯಸ್ಸಿನ ಮಾನದಂಡದಿಂದಲೇ ನಾನು ನಿನ್ನನ್ನು ಅಳೆಯುತ್ತಿದ್ದೇನೆ ಅನಿಸುತ್ತೆ. ನನ್ನ ವಯಸ್ಸೆಲ್ಲಿ? ನಿನ್ನ ವಯಸ್ಸೆಲ್ಲಿ? ನಾನು ಮಾಡೋದನ್ನು ನೀನು ಮಾಡಲು ಸಾಧ್ಯವೇ?
ನಿನ್ನ ವ್ಯಕ್ತಿತ್ವದಲ್ಲಿ ಅದೆಷ್ಟು ಉತ್ತಮ ಅಂಶಗಳಿಲ್ಲ? ನಿನ್ನ ಪುಟ್ಟ ಹೃದಯ ಅದೆಷ್ಟು ವಿಶಾಲ! ಓಡಿ ಬಂದು ನನ್ನನ್ನು ಮುದ್ದಿಸಿದ ಆ ನಿನ್ನ ನಡುವಳಿಕೆಯೇ ಸಾಕ್ಷಿಯಲ್ಲವೇ ಅದಕ್ಕೆ?
ಈ ರಾತ್ರಿ ಬೇರೇನೂ ನೆನಪಾಗುತ್ತಿಲ್ಲ ಮಗನೇ? ನಿನ್ನ ಬಳಿ ಸಾರಿ ನಾಚಿಕೆಯಿಂದ ಮಂಡಿಯೂರಿ ಕುಳಿತಿರುವೆ ನೋಡು.
ಇದೊಂದು ಪುಟ್ಟ ಪ್ರಾಯಶ್ಚಿತ್ತ ಅಷ್ಟೇ. ನೀನು ಎಚ್ಚರದಿಂದಿರುವಾಗ, ನಾನು ಇದನ್ನೆಲ್ಲಾ ಹೇಳಿದರೆ, ನೀನು ಖಂಡಿತ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಲಾರೆ. ಅದು ನನಗೆ ಗೊತ್ತು! ಆದರೆ ನಾಳೆ… ನಾಳೆ…. ನಾನು ಖಂಡಿತ ನಿಜವಾದ ಡ್ಯಾಡಿ ಆಗುವೆ. ನಿನ್ನ ಆಪ್ತಮಿತ್ರನಾಗಿ ಬಿಡುವೆ. ನೀನು ನೋವುಂಡರೆ ನಾನು ನೋವುಣ್ಣುವೆ. ನೀನು ನಕ್ಕಾಗ ನಾನೂ ನಗುವೆ. ಸಹನೆ ಮೀರಿದ ಮಾತುಗಳು ಹೊರ ಬಂದರೆ ತುಟಿಗಳನ್ನು ಕಚ್ಚಿ ಹಿಡಿಯುವೆ. “ಅವನು ಬೇರಾರೂ ಅಲ್ಲ…. ಒಬ್ಬ ಹುಡುಗ… ಒಬ್ಬ ಪುಟ್ಟ ಹುಡುಗ…” ಎಂದು ನನ್ನಷ್ಟಕ್ಕೇ ಹೇಳಿಕೊಳ್ಳುವೆ….. ಹೇಳಿಕೊಳ್ಳುತ್ತಲೇ ಇರುವೆ. ಮಂತ್ರವನ್ನು ಜಪಿಸಿದಂತೆ.
ನಾನು ನಿನ್ನನ್ನು ದೊಡ್ಡವನಂತೆ ಕಂಡೆನೇನೋ ಎಂಬ ಶಂಕೆ ಕಾಡುತ್ತಿದೆ. ನನ್ನ ಮನದಲ್ಲಿ ನಿನ್ನನ್ನು ನೋಡಿದರೆ, ನೀನು ಇನ್ನೂ ಪುಟ್ಟ ಶಿಶುವಿನಂತೆಯೇ ಕಾಣುತ್ತಿರುವೆ. ನಿನ್ನೆ ತಾನೇ ನಿನ್ನ ಅಮ್ಮನ ತೋಳ ಆಸರೆಯಲ್ಲಿ ಲಾಲಿ ಹಾಡು ಕೇಳುತ್ತಾ ಮಲಗಿದ್ದವನು ನೀನು! ನಿನ್ನಂತಹ ಪುಟ್ಟ ಕಂದನಿಂದ ಅತಿಯಾಗಿ ಅಪೇಕ್ಷಿಸಿ ಬಿಟ್ಟೆ!…. ಅತಿಯಾಗಿ ನಿರೀಕ್ಷಿಸಿ ಬಿಟ್ಟೆ….”

Leave a Reply