ಬೆಂಗಳೂರು: ಬ್ಯಾಂಕ್‌, ವಿಮೆ, ದೂರ ಸಂಪರ್ಕ ಸೇವೆ ಸೇರಿ ಬಹುತೇಕ ಎಲ್ಲ ವಲಯಗಳಲ್ಲಿಯೂ ಆಧಾರ್‌ ಮಾಹಿತಿಯನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ. ಅಂದರೆ, ಆಧಾರ್‌ ಬಹುಮುಖ್ಯ ಗುರುತು ದಾಖಲೆಯಾಗಿ ರೂಪುಗೊಂಡಿದೆ. ಆದರೆ, ಕೇವಲ ₹500ಕ್ಕೆ ನಿಮ್ಮ ಆಧಾರ್‌ ಮಾಹಿತಿ ವಾಟ್ಸ್‌ಆ್ಯಪ್‌ನಲ್ಲಿ ಮಾರಾಟವಾಗುತ್ತಿದೆ!

ಆಧಾರ್‌ ಮಾಹಿತಿ ಸಂಪೂರ್ಣ ಸುರಕ್ಷಿತ ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಇತ್ತೀಚೆಗೆ ಭರವಸೆ ನೀಡಿತ್ತು. 12 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯಿಂದ ಬಹಳಷ್ಟು ಕಾರ್ಯ ಸಾಧ್ಯವಿರುವುದರಿಂದ ಆಧಾರ್‌ ಈಗ ಹ್ಯಾಕರ್‌ಗಳ ಪ್ರಮುಖ ಗುರಿಯಾಗಿದೆ. ನೂರು ಕೋಟಿ ಭಾರತೀಯರ ಆಧಾರ್‌ ಮಾಹಿತಿಯನ್ನು ಅನಾಮಿಕರು ವಾಟ್ಸ್‌ಆ್ಯಪ್‌ ಮೂಲಕ ಮಾರಾಟ ಮಾಡುತ್ತಿರುವುದನ್ನು ‘ದಿ ಟ್ರಿಬ್ಯೂನ್‌’ ಪತ್ರಿಕೆ ತನಿಖಾ ವರದಿ ಮೂಲಕ ಬಹಿರಂಗ ಪಡಿಸಿದೆ.

ಕೆಲವೇ ಕ್ಷಣಗಳಲ್ಲಿ ಲಾಗಿನ್‌:
ದಿ ಟ್ರಿಬ್ಯೂನ್‌ನ ತನಿಖಾ ವರದಿಗಾರ ವಾಟ್ಸ್‌ಆ್ಯಪ್‌ ಮೂಲಕ ಅನಾಮಿಕ ಮಾರಾಟಗಾರನಿಂದ ಆಧಾರ್ ಮಾಹಿತಿ ಹೊಂದಿರುವ ಪೋರ್ಟಲ್‌ನ ಲಾಗಿನ್‌ ಐಡಿ ಹಾಗೂ ಪಾಸ್‌ವರ್ಡ್‌ ಪಡೆದಿದ್ದಾರೆ. ಪೇಟಿಎಂ ಮೂಲಕ ₹500 ಪಾವತಿಯಾಗಿ ಕೆಲವೇ ಕ್ಷಣಗಳಲ್ಲಿ ಮಾರಾಟಗಾರ ಆಧಾರ್‌ ಮಾಹಿತಿ ಉಪಯೋಗಿಸಲು ಅಗತ್ಯವಾದ ಲಿಂಕ್‌ ರವಾನಿಸಿದ್ದಾನೆ. ಆ ಪೋರ್ಟಲ್‌ನಲ್ಲಿ ಯಾವುದೇ ಆಧಾರ್‌ ಸಂಖ್ಯೆ ಟೈಪಿಸಿ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಫೋಟೊ ಸೇರಿ ಸಂಪೂರ್ಣ ಮಾಹಿತಿ ಪಡೆಯಬಹುದಾಗಿತ್ತು. ಹೆಚ್ಚುವರಿಯಾಗಿ ₹300 ಪಾವತಿಸಿದ ಬಳಿಕ ಆಧಾರ್‌ ಕಾರ್ಡ್‌ ಪ್ರಿಂಟ್‌ ಪಡೆಯುವ ವ್ಯವಸ್ಥೆಯನ್ನೂ ಒದಗಿಸಿದ್ದರು.

ವರದಿ ನಿರಾಕರಿಸಿದ ಯುಐಡಿಎಐ:
ನಿಯಮ ಉಲ್ಲಂಘಿಸಿ ಆಧಾರ್‌ ಮಾಹಿತಿ ಸಂಗ್ರಹ ನಡೆದಿಲ್ಲ, ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಯುಐಡಿಎಐ ಪ್ರತಿಕ್ರಿಯಿಸಿದೆ. ಯುಐಡಿಎಐನ ಪ್ರಧಾನ ನಿರ್ದೇಶಕರು ಹಾಗೂ ನನ್ನನ್ನು ಹೊರತುಪಡಿಸಿ ಇನ್ನಾರಿಗೂ ಅಧಿಕೃತ ಪೋರ್ಟಲ್‌ಗೆ ಲಾಗಿನ್‌ ಆಗಲು ಸಾಧ್ಯವಿಲ್ಲ ಎಂದು ಯುಐಡಿಎಐ ಪ್ರಾದೇಶಿಕ ಕೇಂದ್ರದ ಹೆಚ್ಚುವರಿ ನಿರ್ದೇಶಕ ಸಂಜಯ್‌ ಜಿಂದಾಲ್‌ ಹೇಳಿರುವುದಾಗಿ ದಿ ಟ್ರಿಬ್ಯೂನ್‌ ವರದಿ ಮಾಡಿದೆ.

ಆರು ತಿಂಗಳ ಹಿಂದೆಯೇ ಈ ಕುರಿತು ತನಿಖೆ ಪ್ರಾರಂಭಿಸಲಾಗಿತ್ತು. ಗ್ರಾಮೀಣ ಭಾಗದ ಉದ್ಯಮಗಳನ್ನು ಗುರಿಯಾಗಿಸಿ ಕೆಲವು ಅನಾಮಧೇಯ ವಾಟ್ಸ್‌ಆ್ಯಪ್‌ ಗುಂಪುಗಳನ್ನು ಅನಾಮಿಕರು ಸೃಷ್ಟಿಸಿದ್ದರು. ಸಕಲ ಸೇವಾ ಕೇಂದ್ರಗಳ ಯೋಜನೆ(ಸಿಎಸ್‌ಸಿಎಸ್‌) ಅಡಿಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಸಂಪರ್ಕ ಹೊಂದಿದ್ದ 3 ಲಕ್ಷ ಗ್ರಾಮೀಣ ಮಟ್ಟದ ಉದ್ಯಮ(ವಿಎಲ್‌ಇ)ಗಳಿಗೆ ಅನಿಯಮಿತ ಆಧಾರ್‌ ಮಾಹಿತಿ ಪಡೆಯುವ ವ್ಯವಸ್ಥೆ ಒದಗಿಸುವುದಾಗಿ ಗಮನ ಸೆಳೆಯಲಾಗಿತ್ತು.

ಪ್ರಾರಂಭದಲ್ಲಿ ಆಧಾರ್‌ ಕಾರ್ಡ್‌ ಮಾಡಲು ಸಿಎಸ್‌ಸಿಎಸ್‌ಗೆ ವಹಿಸಲಾಗಿತ್ತಾದರೂ ಸುರಕ್ಷತಾ ಕಾರಣಗಳಿಂದಾಗಿ ನವೆಂಬರ್‌ನಲ್ಲಿ ಅಂಚೆ ಕಚೇರಿ ಹಾಗೂ ನಿಗದಿತ ಬ್ಯಾಂಕ್‌ಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಅಂದಾಜು 1ಲಕ್ಷ ವಿಎಲ್‌ಇಗಳು ಅನಧಿಕೃತವಾಗಿ ಆಧಾರ್‌ ಮಾಹಿತಿ ಪಡೆಯುತ್ತಿರುವ ಕುರಿತು ಶಂಕಿಸಲಾಗಿದೆ. ಬ್ಯಾಂಕ್‌ ಖಾತೆ, ಸಿಮ್‌ ಕಾರ್ಡ್‌ ಸೇರಿ ಬಹುತೇಕ ಎಲ್ಲ ಸೇವೆಗಳಲ್ಲಿಯೂ ಆಧಾರ್‌ ಮಾಹಿತಿ ಕಡ್ಡಾಯವಾಗಿರುವುದರಿಂದ ಮಾಹಿತಿ ಸೋರಿಕೆಯಿಂದ ದುರುಪಯೋಗ ಸಾಧ್ಯತೆ ಇದೆ.

ಆಧಾರ್‌ ಇತಿಹಾಸ:
ನಿಮ್ಮ ಆಧಾರ್‌ ಬಳಕೆಯ ಇತಿಹಾಸವನ್ನು ತಿಳಿಯಲು ಯುಐಡಿಎಐ ವೆಬ್‌ಸೈಟ್‌ನಲ್ಲಿ ಆಯ್ಕೆ ನೀಡಿದೆ. ಈ ಹಿಂದೆ ಎಲ್ಲೆಲ್ಲಿ ಆಧಾರ್‌ ಬಳಸಲಾಗಿದೆ ಎಂಬುದನ್ನು ನಿಮ್ಮ ಆಧಾರ್‌ ಸಂಖ್ಯೆ ಹಾಗೂ ನೀಡಲಾಗುವ ಕೋಡ್‌ ಟೈಪಿಸಿ ಪಡೆದುಕೊಳ್ಳಬಹುದು.

Leave a Reply