ಒಬ್ಬ ಯುವಕ ಜನರನ್ನು ತನ್ನತ್ತ ಕರೆಯುತ್ತಿದ್ದನು. “ಜನರೇ ನೋಡಿರಿ. ನಾನು ಅತಿ ಸುಂದರ ಹೃದಯ ಹೊಂದಿದವನಾಗಿದ್ದೇನೆ.”

ಜನರು ಆತನ ಸುಂದರ ಹೃದಯವನ್ನು ನೋಡಿ ಆಶ್ಚರ್ಯ ಗೊಂಡರು. ಅದು ಸ್ವಲ್ಪವೂ ಬಿರುಕು ಬಿಟ್ಟಿರಲಿಲ್ಲ, ಸರಿಯಾದ ಆಕೃತಿಯಲ್ಲಿಯೇ ಇತ್ತು, ಅದರಲ್ಲಿ ಯಾವುದೇ ಕಲೆಗಳಿರಲಿಲ್ಲ. ಜನರು ಸ್ತಬ್ಧರಾಗಿ ಆತನ ಹೃದಯವನ್ನು ಕಂಡು ತುಂಬಾ ಹೊಗಳಿದರು.
ಆದರೆ ವೃದ್ಧ ವ್ಯಕ್ತಿ ಓರ್ವರು ಆ ಯುವಕನಿಗೆ ಹೀಗೆ ಹೇಳಿದರು, “ಇಲ್ಲ ಯುವಕನೇ. ನನ್ನ ಹೃದ ಯವು ನಿನಗಿಂತ ಸುಂದರವಾಗಿದೆ. ಬೇಕಾದರೆ ನೋಡು” ಎಂದರು.
“ಹಾಗಾದರೆ ತೋರಿಸಿ ನಿಮ್ಮ ಹೃದಯವನ್ನು” ಎಂದು ಯುವಕ ವೃದ್ಧ ವ್ಯಕ್ತಿಯಲ್ಲಿ ವಿನಂತಿಸಿದನು.
ವೃದ್ಧ ವ್ಯಕ್ತಿ ತಮ್ಮ ಹೃದಯ ವನ್ನು ತೋರಿಸಿದರು. ಅದು ತುಂಬಾ ಗಡುಸಾಗಿತ್ತು. ಹೃದಯದ ತುಂಬಾ ವಕ್ರ-ವಕ್ರ ರೇಖೆಗಳಿದ್ದವು. ಹೃದಯದ ಆಕೃತಿಯನ್ನು ಅದು ಹೋಲುತ್ತಲೇ ಇರಲಿಲ್ಲ. ಹಲವಾರು ಬಣ್ಣದ ತುಂಡುಗಳನ್ನು ಅಂಟಿಸಿದ, ಎಲ್ಲೆ ಮೀರಿದ, ಕೆಲವೊಂದು ಭಾಗದಲ್ಲಿ ಅಂಟಿಸಿದ ಮತ್ತು ಹೆಚ್ಚಿನ ಭಾಗವು ಹೃದಯದಿಂದ ಖಾಲಿ ಯಾದ ತುಂಡುಗಳಂತೆ ಗೋಚರಿ
ಸುತ್ತಿತ್ತು. ಆ ವೃದ್ಧ ವ್ಯಕ್ತಿಯ ಹೃದಯ ವನ್ನು ನೋಡಿದಾಗ ಹಲವಾರು ಹೃದಯದ ತುಂಡುಗಳನ್ನು ಅಂಟಿಸಿ ಹೃದಯದ ಆಕೃತಿ ಕೊಟ್ಟಂತಿತ್ತು. ಅದನ್ನು ನೋಡಿದ ಯುವಕ ಜೋರಾಗಿ ನಗ ತೊಡಗಿದ.
“ಓ ವೃದ್ಧರೇ, ನಿಮಗೇನು ಹುಚ್ಚು ಹಿಡಿದಿದೆಯಾ? ನನ್ನ ಹೃದಯ ನೋಡಿ, ಇದರಲ್ಲಿ ನೀವು ಹುಡುಕಾಡಿದರೆ ಒಂದು ಬಿರುಕು ಕಾಣುವುದಿಲ್ಲ. ದೋಷಮುಕ್ತವಾದ ಹೃದಯ ನನ್ನದು. ಅತಿ ಸುಂದರ ವಾದ ಹೃದಯ ನನ್ನದಾಗಿರುವಾಗ ಹೇಗೆ ತಾನೇ ನೀವು ನಿಮ್ಮ ಹೃದಯವೇ ಸುಂದರವೆಂದು ವಾದಿಸುತ್ತೀರಿ? ಅದರಲ್ಲಿ ಹಲವಾರು ಗಾಯಗಳಿವೆ. ಹಲವಾರು ಹೃದ ಯದ ಭಾಗಗಳು ನಿಮ್ಮ ಹೃದಯದ ಮೇಲೆ ಅಂಟಿಕೊಂಡಿವೆ. ಕೆಲ ವೊಂದು ಭಾಗವು ಕೀವು ತುಂಬಿ ಕಪ್ಪಾಗಿದೆ. ಆದರೂ ಹೇಗೆ ನೀವು ನಿಮ್ಮ ಹೃದಯವೇ ಸುಂದರವೆನ್ನು ತ್ತೀರಿ?” ಎಂದು ಯುವಕ ಪ್ರಶ್ನಿಸಿದನು.
“ಓ ಬಾಲಕ! ನನ್ನ ಹೃದಯ ನಿನ್ನ ಹೃದಯದಂತೆ ಸುಂದರ ವಾಗಿದೆ. ನಿನಗೆ ನನ್ನ ಹೃದಯದ ಮೇಲೆ ಗಾಯದ ಗುರುತುಗಳು ಮತ್ತು ಹಲವಾರು ವಕ್ರತೆಗಳು ಕಾಣುತ್ತಿವೆಯಲ್ಲವೇ? ನನ್ನ ಹೃದಯ ದಲ್ಲಿ ಕಾಣುವ ಈ ಇತರ ಬಣ್ಣದ ಹೃದಯದ ಭಾಗಗಳು ನಾನು ಇತರರೊಂದಿಗೆ ಪ್ರೀತಿಯನ್ನು ಹಂಚಿಕೊಂಡ ಗುರುತುಗಳಾಗಿವೆ. ನಾನು ನನ್ನ ಹೃದಯ ಒಂದು ಭಾಗದಿಂದ ಇತರರೊಂದಿಗೆ ಹಂಚಿ ಕೊಂಡಾಗ ಅದಕ್ಕೆ ಪ್ರತಿಫಲವಾಗಿ ಇತರರ ಹೃದಯದ ಭಾಗವು ನನಗೆ ಸಿಗುತಿತ್ತು. ಇತರರಿಂದ ಸಿಕ್ಕ ಆ ಹೃದಯದ ಭಾಗಗಳನ್ನು ನಾನು ಹಂಚಿಕೊಂಡು ಖಾಲಿಯಾ ಗಿದ್ದ ಭಾಗಗಳಲ್ಲಿ ಅಂಟಿಸಿದ್ದೇನೆ” ಎಂದು ವೃದ್ಧ ವ್ಯಕ್ತಿ ಹೇಳಿದರು. ಯುವಕನು ಆಶ್ಚರ್ಯಕ್ಕೊಳಗಾದ.
ವೃದ್ಧ ವ್ಯಕ್ತಿ ತಮ್ಮ ಮಾತನ್ನು ಮುಂದುವರೆಸಿದರು, “ನಾನು ಇತರ ರೊಂದಿಗೆ ಹಂಚಿಕೊಂಡ ಹೃದಯದ ಭಾಗಗಳಿಗೆ ಪ್ರತಿಯಾಗಿ ನನಗೆ ಇತರರಿಂದ ಲಭಿಸಿದ ಹೃದಯದ ಭಾಗಗಳು ಅದೇ ಆಕೃತಿಯಲ್ಲಾಗಲಿ ಅಥವಾ ಅದೇ ಬಣ್ಣದಲ್ಲಾಗಲಿ ಇರ ಲಿಲ್ಲ. ಹಾಗಾಗಿ ನನ್ನ ಹೃದಯಕ್ಕೆ ಆಕೃತಿಯೇ ಇಲ್ಲದಂತೆ. ಹಲವಾರು ತುಂಡುಗಳನ್ನು ಜೋಡಿಸಿದಂತೆ ಗೋಚರಿಸುತ್ತದೆ. ನನ್ನ ಹೃದಯಕ್ಕೆ ಆಕೃತಿಯೇ ಇಲ್ಲವೆಂದೆಯಲ್ಲವೇ? ಹೌದು ಕೆಲವೊಮ್ಮೆ ನಾನು ನನ್ನ ಹೃದಯವನ್ನು ಬೇರೆಯವರಿಗೆ ನೀಡಿದಾಗ ಅದಕ್ಕೆ ಪ್ರತಿಯಾಗಿ ನನಗೆ ಏನೂ ಸಿಗಲಿಲ್ಲ. ಆದರೆ ಆ ಭಾಗಗಳು ಕಪ್ಪಾಗಿ ಕೀವು ತುಂಬಿದಂತೆ ಗೋಚರಿಸುತ್ತಿವೆ” ಎಂದರು.
ಯುವಕನು ಸುಮ್ಮನಿದ್ದ.
“ನಿನ್ನ ಹೃದಯ ಮನೋಹರ ವಾಗಿಯೂ ಯಾವುದೇ ಭಾಗದಲ್ಲಿ ನ್ಯೂನ್ಯತೆಗಳಿಲ್ಲದೇ ತುಂಬಾ ಸುಂದರವಾಗಿದ್ದಂತೆ ಗೋಚರಿಸು ತ್ತದೆ. ನೀನು ಯಾರೊಂದಿಗಾದರೂ ಹೃದಯವನ್ನು ಹಂಚಿಕೊಂಡಿ ದ್ದೀಯಾ? ಪ್ರೀತಿಯನ್ನು ಹಂಚಿ ಕೊಂಡಿದ್ದೀಯಾ?” ಎಂದು ವೃದ್ಧ ವ್ಯಕ್ತಿ ಕೇಳಿದರು. ಯುವಕ ಉತ್ತರಿ ಸದೇ ಮೌನವಾಗಿ ಎದ್ದು ನಿಂತನು. ಅವನ ಕಣ್ಣುಗಳಿಂದ ಕಣ್ಣೀರು ಉದುರುತ್ತಿತ್ತು. ಆತ ವೃದ್ಧನ ಎದುರಿಗೆ ಬಂದು ನಿಂತು. ತನ್ನ ಹೃದಯದ ಒಂದು ಭಾಗವನ್ನು ಹರಿದು ವೃದ್ಧನಿಗೆ ನೀಡಿದನು.
[ಹಲವರು ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಬಾಹ್ಯ ಸೌಂದರ್ಯವು ನಿಜವಾದ ಸೌಂದರ್ಯವಾಗಿರುವುದಿಲ್ಲ.]

(ಇಂಗ್ಲಿಷ್ ಮೂಲದಿಂದ)

Leave a Reply