ಪಾಟ್ನಾ: ಬಿಹಾರದಲ್ಲಿ 74 ಕ್ಷೇತ್ರಗಳಿಗೆ ಮೊದಲ ಹಂತದದಲ್ಲಿ ಚುನಾವಣೆ ವೇದಿಕೆ ಸಜ್ಜಾಗಿದ್ದು, ಒಟ್ಟು 1065 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 153 ಜನ ಕೋಟ್ಯಧಿಪತಿಗಳು ಎನ್ನುವುದು ಗಮನಾರ್ಹ ಸಂಗತಿ. ಬಡ ರಾಜ್ಯ ಎನ್ನಿಸಿಕೊಳ್ಳುವ ಈ ರಾಜ್ಯದ ಚುನಾವಣಾ ಕಣದಲ್ಲಿ ಕೋಟ್ಯಧಿಪತಿಗಳದೇ ಸದ್ದು. ಮೊದಲನೇ ಹಂತದ ಚುನಾವಣೆ ಅ.28ರಂದು, 2 ಮತ್ತು 3ನೇ ಹಂತದ ಚುನಾವಣೆ ನ.3 ಮತ್ತು ನ.8ರಂದು ನಡೆಯಲಿವೆ. ಮೊದಲ ಹಂತದ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣದಲ್ಲಿ ಮಹಾಘಟಬಂಧನದ (ಆರ್‌ಜೆಡಿ-ಕಾಂಗ್ರೆಸ್) ಶೇ.50ರಷ್ಟು ಹಾಗೂ ಎನ್‌ಡಿಎ ಮೈತ್ರಿಕೂಟದ ಶೇ.60ರಷ್ಟು ಅಭ್ಯರ್ಥಿಗಳು ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದಾರೆ. ಜೆಡಿಯುನ ಮನೋರಮಾ ದೇವಿ ಅತಿ ಹೆಚ್ಚು ಶ್ರೀಮಂತ ಅಭ್ಯರ್ಥಿಯಾಗಿದ್ದು, ಅವರ ಆಸ್ತಿಮೌಲ್ಯ 53 ಕೋಟಿ ರೂ.

ಆರೋಪಿಗಳೇ ಅಭ್ಯರ್ಥಿಗಳು ಮೊದಲ ಹಂತದ 1065 ಅಭ್ಯರ್ಥಿಗಳ ಪೈಕಿ ಶೇ.30ರಷ್ಟು ಅಭ್ಯರ್ಥಿಗಳು (320) ಕೊಲೆ, ಸುಲಿಗೆ, ಅತ್ಯಾಚಾರ ಮುಂತಾದ ಆರೋಪಗಳನ್ನು ಹೊತ್ತಿದ್ದಾರೆ. ಮುಖ್ಯವಾಹಿನಿಯಲ್ಲಿರುವ ಪಕ್ಷಗಳೇ ಮುಖ್ಯವಾಗಿ ಇಂಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಹೀಗಾಗಿ ಘೋರ ಅಪರಾಧದ ಆರೋಪವನ್ನು ಹೊತ್ತಿರುವ ಅಭ್ಯರ್ಥಿಗಳಿಗೆ ಮತ ಹಾಕಬೇಕೇ? ಅಥವಾ ಇರುವುದರಲ್ಲಿ ಕಡಿಮೆ ಘೋರ ಆರೋಪಿತ ಅಭ್ಯರ್ಥಿಗಳನ್ನು ಆರಿಸಬೇಕೆ ಎನ್ನುವ ಗೊಂದಲ ಮತದಾರರ ಮುಂದಿದೆ.

Leave a Reply