ನವದೆಹಲಿ: ನಾವು ಬಂದಿರುವುದೇ ಸಂವಿಧಾನವನ್ನು ಬದಲಿಸಲು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಗುರುವಾರ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಅವರ ಹೇಳಿಕೆಯು ದೇಶದಾದ್ಯಂತ ವಿವಾದವನ್ನು ಹುಟ್ಟುಹಾಕಿತ್ತು.

ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ಗದ್ದಲ, ವಿರೋಧ ಎಬ್ಬಿಸಿದ್ದು ಆಗ ಎದ್ದು ನಿಂತು ಸಚಿವ ಅನಂತ್ ಕುಮಾರ್, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು.

ನಾನು ಸಂವಿಧಾನವನ್ನು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ನನಗೆ ಸಂವಿಧಾನವೇ ಶ್ರೇಷ್ಠ. ಅದರಲ್ಲಿ ಯಾವುದೇ ಪ್ರಶ್ನೆ ಮತ್ತು ಸಂದೇಹವಿಲ್ಲ. ಈ ದೇಶದ ನಾಗರಿಕನಾಗಿ ನಾನು ಸಂವಿಧಾನದ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಅನಂತ್ ಕುಮಾರ್ ಹೇಳಿದರು.
ಸಂವಿಧಾನವನ್ನು ಅಗೌರವಿಸುವ ಉದ್ದೇಶ ನನಗೆ ಇಲ್ಲ. ಸಂವಿಧಾನ ಮತ್ತು ಸಂಸತ್ತು ನನಗೆ ಶ್ರೇಷ್ಠವಾಗಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆಯವರು ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಎರಡು ಬಾರಿ ಅವರು ಕ್ಷಮೆ ಕೇಳಿದರು.

Leave a Reply