ಎಂ.ಫ್ರೆಂಡ್ಸ್ ಎಂಬ ಉತ್ಸಾಹಿ ಸಂಘವು ಕಳೆದ ಐದು ವರ್ಷಗಳಿಂದ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಎಲ್ಲೆಡೆ ಮಾಡುತ್ತಾ ಇದೆ.

ಆಸ್ಪತ್ರೆ ಬಿಲ್ ಕಟ್ಟಲು ಅಸಹಾಯಕರಾದ ಬಡಕುಟುಂಬದ ನೆರವು, ಕೆಲ ಜಮಾಅತ್ ಮನೆಗಳ ಸಮೀಕ್ಷೆ ಹಾಗೂ ಸಮಸ್ಯೆಗೆ ಪರಿಹಾರ ನೀಡಿದೆ. ಸಾವಿರಾರು ಜನರಿಗೆ ಸಾಂತ್ವಾನ ಹೇಳಿದೆ. ಐದು ವರ್ಷಗಳಲ್ಲಿ ಐವತ್ತು ಲಕ್ಷ ರೂ.ಗಳ ಸೇವಾ ಚಟುವಟಿಕೆಯನ್ನು ಮಾಡಿ ಜನರಿಗೆ ಸ್ಪಂದಿಸಿದೆ.

ಈಗ ಹೊಸತೊಂದು ಸೃಜನಶೀಲ ಯೋಜನೆ ರೂಪಿಸಿದ್ದಾರೆ. ಈ ಯೋಜನೆಗೆ ಎಲ್ಲೆಡೆಯಿಂದ ಪ್ರಶಂಸೆ ಸಹಕಾರ ಸಿಗುತ್ತಿದೆ.

ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯ ರೋಗಿಗಳು ದಾಖಲಾಗುತ್ತಾರೆ. ಇಲ್ಲಿ ಒಂದು ಸಾವಿರ ಹಾಸಿಗೆಗಳಿವೆ. ರೋಗಿಗಳಿಗೆ ಸರಕಾರ ಊಟೋಪಚಾರ ಮಾಡುತ್ತದೆ. ಆದರೆ ರೋಗಿಗಳ ಜೊತೆಗಾರರಿಗೆ ಯಾವುದೇ ವ್ಯವಸ್ಥೆ ಇಲ್ಲ. ರೋಗಿ ಮತ್ತು ಜತೆಗಾರ ಊಟ ಪಾಲು ಮಾಡಿ ತಿನ್ನಬೇಕು, ಇಲ್ಲವೇ ಹಸಿದಿರಬೇಕು.
ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವ ಬಹುತೇಕ ಮಂದಿ ಕಡು ಬಡವರು.
ಇಂತಹವರ(ರೋಗಿಯ ಜೊತೆಗಾರರ) ನೋವಿಗೆ ಸ್ಪಂದಿಸಲು ಎಂ.ಫ್ರೆಂಡ್ಸ್ “ಕಾರುಣ್ಯ” ಯೋಜನೆಯನ್ನು ಪ್ರಾರಂಭಿಸಿದೆ.

ರೋಗಿಗಳ ಜೊತೆಗಾರರಿಗೆ ದಿನನಿತ್ಯ ರಾತ್ರಿಯ ಭೋಜನದ ವ್ಯವಸ್ಥೆ ಮಾಡಲು ಪ್ರಾರಂಭಿಸಿದೆ. ಪ್ರತಿಯೊಬ್ಬರಿಗೆ ಮೂರು ಚಪಾತಿ, ತರಕಾರಿ ಪದಾರ್ಥ ನೀಡಲಾಗುತ್ತದೆ.ಇದಕ್ಕಾಗಿ ದಿನನಿತ್ಯ ಹತ್ತು ಸಾವಿರ ರೂ. ವ್ಯಯಿಸುತ್ತದೆ.

ಪ್ರತಿದಿನ ಸಂಜೆ 6.30 ರಿಂದ 7.00 ರ ತನಕ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗ ಹಾಗೂ ಬರ್ನ್ಸ್ ಸೆಂಟರ್ ನಲ್ಲಿ ನಾವು ರಾತ್ರಿಯ ಭೋಜನವನ್ನು ಉಚಿತವಾಗಿ ವಿವರಿಸಲಾಗುತ್ತಿದೆ.

ಈ ಯೋಜನೆ ಕುರಿತು ಎಂ. ಫ್ರೆಂಡ್ಸ್ ಅಧ್ಯಕ್ಷರಾದ ಜಿ. ಮುಹಮ್ಮದ್ ಹನೀಫ್, ಗೋಲ್ತಮಜಲು ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ,

ಕಾರುಣ್ಯ ಯೋಜನೆಗೆ ಪ್ರೇರಣೆ ಏನು?

ನಾವು ಹಲವು ವರ್ಷಗಳಿಂದ ವೆನ್ಲಾಕ್ ಆಸ್ಪತ್ರೆಗೆ ವಿವಿಧ ಸೇವಾ ಕಾರ್ಯಗಳನ್ನು ಮಾಡಲು ಭೇಟಿ ಕೊಡುತ್ತಿದ್ದೆವು. ರೋಗಿಗಳಿಗೆ ಸರಕಾರ ಊಟೋಪಚಾರ ಮಾಡುತ್ತದೆ. ಆದರೆ ರೋಗಿಗಳ ಜೊತೆಗಾರರಿಗೆ ಯಾವುದೇ ವ್ಯವಸ್ಥೆ ಇಲ್ಲ. ಇದನ್ನು ಕಂಡು ನಮ್ಮ ಸಂಘಕ್ಕೆ ಬಹಳ ಬೇಸರ ಆಯಿತು. ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ಸ್ನೇಹಾಲಯದ ಜೋಸೆಫ್ ಮಾಡುತ್ತಾ ಇದ್ದಾರೆ. ನಾವು ನಮ್ಮ ಮೀಟಿಂಗ್ ನಲ್ಲಿ ಈ ಪ್ರಸ್ತಾಪ ಇಟ್ಟಾಗ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಇದಕ್ಕೆ ಬೆಂಬಲ ನೀಡಿದರು. ಮಾತ್ರವಲ್ಲ, ಮೂರು ತಿಂಗಳಿಗೆ ಬೇಕಾದ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ನಾವು ವೆನ್ಲಾಕ್ ಆಸ್ಪತ್ರೆಯ ಸಂಬಂಧ ಪಟ್ಟ ರಾಜೇಶ್ವರಿ ದೇವಿಯವರನ್ನು ಸಂಪರ್ಕಿಸಿ ಎರಡು ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತೇವೆ ಎಂದಾಗ ಅವರು “ಅನ್ನದಾನ ಮಹಾದಾನ” ಎಂದು ನಮ್ಮ ಬೆನ್ನು ತಟ್ಟಿದರು. ಹೀಗೆ ಯೋಜನೆ ಚಾಲನೆಗೆ ಬಂತು.

ರೋಗಿಗಳ ಜೊತೆಗಾರರ ಪ್ರತಿಕ್ರಿಯೆ ಹೇಗಿದೆ?

ಇದನ್ನು ತಾವು ಅಥವಾ ಯಾರೇ ಆಗಲಿ ಅಲ್ಲಿ ಬಂದು ನೋಡಿದರೆ ಮನವರಿಕೆ ಆಗಬಹುದು. ಅದನ್ನು ಶಬ್ದಗಳಿಂದ ವರ್ಣಿಸಲು ಆಗುತ್ತಿಲ್ಲ. ನಾವು ರಾತ್ರಿ 7 ಗಂಟೆಗೆ ಆಹಾರ ಕೊಂಡು ಹೋಗುವ ಮೊದಲೇ ಅವರು ಅದಕ್ಕಾಗಿ ಕಾಯುತ್ತಾ ಇರುತ್ತಾರೆ. ಇಲ್ಲದಿದ್ದರೆ ಎಲ್ಲೆಲ್ಲಾ ಹೊರಗೆ ಹೋಗಬೇಕು, ಇಲ್ಲವೇ ಹಸಿವಿನಿಂದ ಇರಬೇಕು. ಅವರ ಸಂತೃಪ್ತಿ ಅವರ ಕಣ್ಣುಗಳಲ್ಲಿ ಕಾಣುತ್ತದೆ. ಅವರ ಕಣ್ಣುಗಳಲ್ಲಿ ಕಾಣದಿದ್ದರೂ ಪರವಾಗಿಲ್ಲ, ಅವರ ಹೊಟ್ಟೆ ಮತ್ತು ಮನಸ್ಸಿಗೆ ಸಂತೃಪ್ತಿಯಾಗಬೇಕು ಎಂಬುದೇ ನಮ್ಮ ಬಯಕೆ.

ಜನರ ಪ್ರತಿಕ್ರಿಯೆ ಹೇಗಿದೆ? ದಿನಕ್ಕೆ ಸಾವಿರಾರು ರೂಪಾಯಿ ಫಂಡ್ ಎಲ್ಲಿಂದ?

ದಿನಕ್ಕೆ ಸರಿಸುಮಾರು 7 ರಿಂದ 10 ಸಾವಿರ ವರೆಗೆ ಖರ್ಚು ಇದೆ‌. ಈಗ ನಾವು ಕೆಲವು ಸದಸ್ಯರು ಒಂದೊಂದು ದಿನದ ಆಹಾರದ ಮೊತ್ತವನ್ನು ಹಾಕುತ್ತಿದ್ದೇವೆ. ಆದರೆ ಅದು ಸಾಕಾಗದು. ಆದರೆ ನಮ್ಮ ಯೋಜನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವಾರು ಹಿಂದೂ ಮುಸ್ಲಿಂ ಕ್ರೈಸ್ತ ಸಹೋದರರು ಕರೆ ಮಾಡಿ ಸಹಕಾರ ಮಾಡುವ ಭರವಸೆ ನೀಡಿದ್ದಾರೆ‌. ಕೆಲವರು ಈಗಾಗಲೇ ಸಹಾಯ ಮಾಡಿದ್ದಾರೆ. ಮುಂದೆ ವೆಬ್ಸೈಟ್ ಮೂಲಕ ಹಣ ಸಂಗ್ರಹದ ವ್ಯವಸ್ಥೆ ಮಾಡಲಿದ್ದೇವೆ. ನೀವೂ ಇದಕ್ಕೆ ಸಹಭಾಗಿ ಆಗಬಹುದು.
ಡಾಕ್ಟರ್ ಅಶ್ವತ್, ಶಫೀಯುಲ್ಲಾ, ನಾಗರಾಜ್ ಮುಂತಾದವರು ಬಹಳ ಸಹಕಾರ ಕೊಟ್ಟಿದ್ದಾರೆ. ಸಹೃದಯರು ತಾವು ಕೂಡಾ ಇದರಲ್ಲಿ ಭಾಗವಹಿಸಿ ತಮ್ಮ ಕೈಯ್ಯಾರೆ ಬಡಿಸಿ ಕೃತಾರ್ಥರಾಗಬಹುದು

ಒಂದಷ್ಟು ಸಮಯ ಬಡವರ ಜೊತೆ ಹಾಗೂ ನಮ್ಮೊಂದಿಗೆ ಕಳೆಯುವುದಾದರೆ 9980880860
9741993313
9448500874
ನಂಬರ್ ಅನ್ನು ಸಂಪರ್ಕಿಸಬಹುದು.

Leave a Reply