ಬಾಬಾಸಾಹೇಬರನ್ನು ಕುರಿತು ಜಿಗ್ನೇಶ್ ಎಂಬ ಹುಡುಗ ಯಾವುದೋ ಸಂಧರ್ಭದಲ್ಲಿ, ಯಾವುದೋ context ನಲ್ಲಿ ಏನನ್ನೋ ಮಾತಾಡಿದ್ದರ ಪರ ಮತ್ತು ವಿರುದ್ಧ ವಾದವಿವಾದಗಳಾಗುತ್ತಿವೆ. ಈ ಬಗ್ಗೆ ಚರ್ಚಿಸುತ್ತಿರುವವರಲ್ಲಿ ಡಾ.ಅಂಬೇಡ್ಕರ್ ರವರ ಮೇಲಿನ ಪ್ರೀತಿ, ಅಭಿಮಾನ, ಭಕ್ತಿ, ಆರಾಧನೆ ಒಂದು ಕಡೆ ವ್ಯಕ್ತವಾದರೆ ಮತ್ತೊಂದು ಕಡೆ ಡಾ.ಅಂಬೇಡ್ಕರ್ ರವರ ಮೇಲೆ‌ ಎಲ್ಲಾ ಪ್ರೀತಿ, ವಿಶ್ವಾಸ, ಅಭಿಮಾನ ಇಟ್ಟುಕೊಂಡೂ ‘ಬಾಬಾಸಾಹೇಬರನ್ನು ವಿಮರ್ಶಾತ್ಮಕವಾಗಿ ಯಾಕೆ ನೋಡಬಾರದು?’ ‘ಅಂಬೇಡ್ಕರ್ ರವರು ಚರ್ಚಾತೀತರಲ್ಲವೇ?, ಎಂಬ ಪ್ರಶ್ನೆಗಳು, ವಾದಗಳು ಇವೆ. ಇವರಿಬ್ಬರೂ ಸಹ ನಿಸ್ಸಂಶಯವಾಗಿ ಅಂಬೇಡ್ಕರ್ ಪ್ರೇಮಿಗಳೇ..
ಇದನ್ನು ಸಂಘಪರಿವಾರ ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದೆಂಬ ಆತಂಕಗಳು, ಕಮುನಿಸ್ಟ್ ನೆಲೆಯಲ್ಲಿ ಅಂಬೇಡ್ಕರ್ ರವರನ್ನು ನೋಡಬೇಕಾದ ಆಲೋಚನೆಗಳು. ಅಂತೆಯೇ ಮಾರ್ಕ್ಸ್, ಲೆನಿನ್, ಮಾವೋ ರವರನ್ನು ವಿಶ್ಲೇಷಣಾತ್ಮಕವಾಗಿ ನೋಡುವುದಾದರೆ, ಅಂಬೇಡ್ಕರ್ ರವರನ್ನು ಕೂಡ ಏಕೆ ಹಾಗೆಯೇ ವಿಶ್ಲೇಷಿಸಬಾರದೆಂಬ ಪ್ರಶ್ನೆಗಳು ಹರಿದಾಡುತ್ತಿವೆ..?
ಬಂಡೆಯ ಮೇಲೆ ಚಿಗುರೊಡೆದು, ಅಪಾರ ಪರಿಶ್ರಮದಿಂದ ಭೂಮಿಯ ಅಗಲಕ್ಕೂ ಪಸರಿಸಿಕೊಂಡ ಅಂಬೇಡ್ಕರ್ ರವರನ್ನು, ಪರಿಸ್ಥಿತಿಯೊಂದರ ಒತ್ತಡದಿಂದ ಉದ್ಭವವಾದ ಹುಡುಗ ಜಿಗ್ನೇಶ್ ಮೆವಾನಿ, ಯಾವುದೋ ಸಂಧರ್ಭದಲ್ಲಿ, ಯಾರೋ ಪ್ರಚೋದಿಸಿದರ ಪರಿಣಾಮವೋ, ಅಥವಾ ಸಕಾರಣವೇ ಇಲ್ಲದೆ ಉದ್ದೇಶರಹಿತವಾಗಿ, ಆಕಸ್ಮಿಕವಾಗಿ, ವಯೋಸಹಜವಾಗಿ, ಮಾತಾಡಿರಬಹುದಾದ ಮಾತುಗಳಿಗಿಂತಲೂ ಈ ಮಾತುಗಳ ಮೇಲೆ ಆಗುತ್ತಿರುವ ಗಂಭೀರ ಜಿಜ್ಞಾಸೆಗಳು, ಪ್ರತಿಕ್ರಿಯೆಗಳು ನನ್ನಂತವರಲ್ಲಿ ಕುತೂಹಲ ಕೆರಳಿಸಿವೆ!
ಅಂಬೇಡ್ಕರ್ ರವರನ್ನು ಪ್ರೀತಿಸುವವರ ಯಾವುದೇ ಪ್ರತಿಕ್ರಿಯೆಗಳ ಬಗ್ಗೆ ನನ್ನ ಯಾವುದೇ ತಕರಾರಿಲ್ಲ, ಆಶ್ಚರ್ಯವೆಂದರೆ ಈವರೆಗೂ ಅಂಬೇಡ್ಕರ್ ರವರ ಬಗ್ಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯಾಗಿಯೋ ಒಮ್ಮೆಯೂ ಕೂಡ ಸಕಾರಾತ್ಮಕವಾಗಿ ಚಕಾರ ಎತ್ತದವರೂ ಕೆಲವರು ಈಗ “ಅಂಬೇಡ್ಕರ್ ರವರು ಪ್ರಶ್ನಾತೀತರೆ..? ವಿಮರ್ಶಾತೀತರೆ..?” ಎಂದೋ ಅಥವಾ ಹಾಗೆಂದವರಿಗೆ ಬೆಂಬಲಿಸಿ “ನನ್ನದೂ ಅದೇ ಅಭಿಪ್ರಾಯ” ಎಂದೋ ಬೀಸು ಹೇಳಿಕೆ ಹೇಳುತ್ತಾ, ತಾವು ಯಾವ ಪೂರ್ವಾಗ್ರಹವೂ ಇಲ್ಲದೆ ವಸ್ತುನಿಷ್ಠವಾಗಿ ಅಲೋಚಿಸುವವರು ಎಂಬಂತೆ ಪ್ರತಿಕ್ರಿಯಿಸುತಿದ್ದಾರೆ!! ಇಂತವರ ಪ್ರತಿಕ್ರಿಯೆಗಳೇ ನಮ್ಮಂತವರನ್ನು ವಿಚಲಿತಗೊಳಿಸಿರುವುದು!?
ಅಂಬೇಡ್ಕರ್ ರವರನ್ನು ನೋಡುವುದೆಂದರೆ ಗಾಂಧೀಜಿಯವರನ್ನೋ, ಮಾರ್ಕ್ಸ್, ಮಾವೋ ಅಥವಾ ಲೋಹಿಯಾರವರನ್ನೋ ನೋಡುವಷ್ಟು ಸುಲಭವಾಗಿ ನೋಡಲಾಗುವುದಿಲ್ಲ!? ಯಾಕೆಂದರೆ ಇವರಾರಿಗೂ ಕೆಳ ಜಾತಿಯವರೆಂಬ ಸಂಕೋಲೆಗಳಿಲ್ಲ, ನೋಡಬೇಕಾದ ತೊಡಕುಗಳೂ ಇಲ್ಲ. ಗೇಲ್ ಆಮ್ವೆಟ್ ರಂತ ಜಾತಿಯ ಸೋಂಕಿಲ್ಲದೆ ಅಂಬೇಡ್ಕರ್ ರವರನ್ನು ಅಪ್ಪಿಕೊಂಡ ವಿದೇಶಿ ಮಹಿಳೆ, ಜಾತೀಯ ಪರಿಸರದಲ್ಲಿ ಹುಟ್ಟಿದ್ದರೂ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಮೀರಿರಬಹುದಾದಂತಹ ಅಮರ್ತ್ಯ ಸೇನ್ ಅಥವಾ ಜಸ್ಟೀಸ್ ಕೃಷ್ಣಯ್ಯರ್ ರಂತವರು ಡಾ.ಅಂಬೇಡ್ಕರ್ ರವರನ್ನು ಆಪ್ತವಾಗಿ ನೋಡಲಿಕ್ಕೂ, ತಮ್ಮದೇ ಹಣೆಪಟ್ಟಿಗಳನ್ನು ಕಟ್ಟಿಕೊಂಡು ಲೋಕಾಭಿರಾಮವಾಗಿ ಅಂಬೇಡ್ಕರ್ ರವರನ್ನು ನೋಡುತ್ತಿರುವಂತಹ ಈಗಿನ ಮನಸ್ಥಿತಿಗಳಿಗೂ ಹೋಲಿಸುವಂತಿಲ್ಲ! ಅಸ್ಪೃಶ್ಯನೊಬ್ಬ ಆಕಾಶದೆತ್ತರಕ್ಕೆ ಬೆಳೆದಾಗ ಆತನನ್ನು ಈ ದೇಶದ ಸುಪ್ತ ಮನಸ್ಸಿನಲ್ಲಿ ಸದಾ ಜಾಗೃತವಾಗಿರುವ ಜಾತಿಗ್ರಸ್ಥ ಪ್ರಜ್ಞೆ ಹೇಗೆ ನೋಡುತ್ತದೆ..? ಮತ್ತು ಹೇಗೆ ನೋಡಬೇಕೆಂಬುದನ್ನೇ ನಮ್ಮ ಪರಿಸರ ನಮಗೆ ಕಲಿಸಿಕೊಟ್ಟಿಲ್ಲ.!
ನಾವು ಬಾಬಾಸಾಹೇಬರ ಬರಹಗಳನ್ನೋ ಹೇಳಿಕೆಗಳನ್ನೋ ನೋಡಬೇಕೆಂದರೆ‌ ಅಥವಾ ಅರ್ಥೈಸಬೇಕೆಂದರೆ ಅವರು ಯಾವುದಕ್ಕೆ ಯಾವ ಚಾರಿತ್ರಿಕ ಸಂರ್ಭದಲ್ಲಿ, ಎಂತಹ ಮನಸ್ಥಿತಿಯಲ್ಲಿ, ಎಂತಹ ಸಂದಿಕ್ತತೆಯಲ್ಲಿ ಪ್ರತಿಕ್ರಿಯಿಸಿರಬಹುದು? ಯಾವ ರೀತಿಯ ಒತ್ತಡದ ಪರಿಸ್ಥಿತಿಯಲ್ಲಿ ಏನನ್ನು ಹೇಳಿರಬಹುದೆಂಬ ಸಾಂದರ್ಭಿಕ ವಿಶ್ಲೇಷಣೆಯೊಂದಿಗೇ ಇಟ್ಟು ನೋಡಬೇಕಾಗುತ್ತದೆ. ಅವನ್ನು ಯಾವ ಕಾರಣಕ್ಕೂ ಕೇವಲ ಹೇಳಿಕೆಗಳನ್ನಾಗಿ, ಹಗುರವಾಗಿ ನೋಡುವಂತಿಲ್ಲ. ಯಾಕೆಂದರೆ ಬಾಬಾಸಾಹೇಬರದು ಒಂದು ಬೃಹತ್ ಜ್ನಾನಜಗತ್ತೇ ಇದೆ. ಇದರ ಒಳನೋಟಗಳರಿಯದೇ ಯಾವುದನ್ನೂ ಮಾತಾಡುವ ದೈರ್ಯ ಮತ್ತು ದಾಷ್ಟ್ಯ ನನ್ನಂತವನಿಗಂತೂ ಇಲ್ಲ.!
ಅಸ್ಪೃಶ್ಯರ ಹೊಟ್ಟೆಯಲ್ಲಿ ಹುಟ್ಟಿ, ಅದೇ ಪರಿಸರದಲ್ಲಿ ಬೆಳೆದು, ಪಾಶ್ಚಾತ್ಯ ಪರಿಸರದಲ್ಲಿ ಉನ್ನತ ಶಿಕ್ಷಣ ಪಡೆದು, ಅದೇ ಮನಸ್ಥಿತಿಯಲ್ಲಿ ಈ ದೇಶವನ್ನು ಅರಿತು, ಈ ದೇಶದ ಆತ್ಮಕ್ಕೆ ಗೊತ್ತಿಲ್ಲದ ಬಾಷೆಯಲ್ಲಿ ತನ್ನ ಗತ ಇತಿಹಾಸ, ರಾಜಕಾರಣ, ಪರಿಸರ, ಪರಿಸ್ಥಿತಿ, ಜಾತಿಮತಗಳ ಪರಿಣಾಮಗಳನ್ನು ಮೊಟ್ಟ ಮೊದಲನೆಯವರಾಗಿ ವಿಶ್ಲೇಷಿಸ ಹೊರಟ, ಜಗತ್ತೇ ಕಂಡರಿಯದ ಭಾರತೀಯ ಜ್ಞಾನಿ, ಅತ್ಯಂತ ಅಪರೂಪದ ಸೂಕ್ಷ್ಮ ಸಂವೇದನಾಶೀಲರು ಬಾಬಾಸಾಹೇಬರು. ಇಂತವರ ಬಗ್ಗೆ ಮಾತಾಡುವಾಗ, ವಿಶ್ಲೇಷಿಸುವಾಗ ಕನಿಷ್ಠ ಜ್ಞಾನ, ಪ್ರಜ್ಞೆ, ಸಿದ್ದತೆ ಇರಬೇಕೆನಿಸುವುದಿಲ್ಲವೆ?
ಡಾ.ಅಂಬೇಡ್ಕರ್ ರವರು ಪ್ರಶ್ನಾತೀತರೂ ಅಲ್ಲ, ವಿಮರ್ಶಾತೀತರೂ ಅಲ್ಲ.. ಆದರೆ‌ ಅವರನ್ನು ಯಾವುದೋ ಸಂಧರ್ಭದಲ್ಲಿಟ್ಟು ವಿಶ್ಲೇಷಿಸುವ ಅಪಾರ ಅರಿವು, ಎಲ್ಲಾ ಪೂರ್ವಾಗ್ರಹಗಳಿಂದ, ಜಾತಿಯುಕ್ತ ಮನಸ್ಥಿತಿಯಿಂದ ಹೊರಬಂದು ಪ್ರಶ್ನಿಸುವಂತಹ ಆರೋಗ್ಯ ನಮಗಿದೆಯೇ..? ಎಂಬುದೇ ಪ್ರಶ್ನೆ..?

ದ್ವಾರಕನಾಥ್ ಚೊಕ್ಕ

Leave a Reply