ಗುಡ್‍ಗಾವ್: ಅಂತರ್ಜಾತಿ ಮದುವೆಯಾಗಿರುವ ಪುತ್ರಿಯನ್ನು ಕೊಲೆ ಮಾಡಿದ ರೈಲ್ವೆ ಎಸ್ಸೈ ಮತ್ತು ಸಹೋದರನನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ. ಎಸ್ಸೈಯ 25 ವರ್ಷದ ಮಗಳು ಕೋಮಲ್ ಅನ್ಯಜಾತೀಯ ಹುಡುಗನನ್ನು ಪ್ರೀತಿಸಿದ್ದಳು. ನಂತರ ಅವರಿಬ್ಬರೂ ಮದುವೆಯಾಗಿದ್ದರು. ಗುರುವಾರ ಆಕೆಯ ಪತಿ ಸಾಗರ್ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಎಸ್ಸೈ ತನ್ನ ಮಗಳನ್ನು ಸಹೋದರನೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಹೊರ ಜಗತ್ತಿನ ಅರಿವಿಗೆ ಬಂದಿದೆ.

ಖಾಸಗಿ ಕಂಪೆನಿಯಲ್ಲಿ ಸಾಗರ್ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು, ಸಾಗರ್ ಮತ್ತು ಕೋಮಲ್ ಬೇರೆ ಬೇರೆ ಜಾತಿಯವರು. ಮನೆಯವರು ಅವರ ಮದುವೆಗೆ ವಿರೋಧ ವ್ಯಕ್ತಪಡಿಸಿದ ಬೆನ್ನಿಗೆ ಫೆಬ್ರುವರಿ ಎಂಟರಂದು ಓಡಿ ಹೋಗಿ ಮದುವೆಯಾಗಿದ್ದಾರೆ. ಕೋಮಲ್‍ಗೆ ಮನೆಯವರಿಂದ ಬೆದರಿಕೆ ಇತ್ತು. ನಂತರ ಕೋಮಲ್ ಕುಟುಂಬ ಕೋಮಲ್ ಮತ್ತು ಸಾಗರ್‌ರನ್ನು ಭೇಟಿಯಾಗಿ ನಿಮ್ಮ ಮದುವೆಯನ್ನು ಒಪ್ಪಿದ್ದೇವೆ ಎಂದು ಹೇಳಿದ್ದಾರೆ. ನಂತರ ಫೆಬ್ರುವರಿ 19ಕ್ಕೆ ಹೊಸದಾಗಿ ಮದುವೆ ನಿಶ್ಚಯಿಸಿ ಕೋಮಲ್‍ಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು.

ಆದರೆ, ಗುರುವಾರ ಸಾಗರ್‌ಗೆ ಕೋಮಲ್ ಮೃತಪಟ್ಟಿದ್ದಾಳೆ ಎಂದು ಕೋಮಲ್‍ಳ ಗೆಳತಿ ಫೋನ್ ಮಾಡಿ ತಿಳಿಸಿದ್ದಾಳೆ. ಅವಳ ಮೃತದೇಹವನ್ನು ಕುಟುಂಬ ಅಂತ್ಯ ಸಂಸ್ಕಾರ ನಡೆಸಿದೆ ಎಂದು ತಿಳಿಸಿದ್ದಾಳೆ. ಸಾಗರ್ ಕುಟುಂಬ ಕೋಮಲ್‍ಳ ಮನೆಗೆ ಬಂದಾಗ ಹೀಗೆಯೇ ಹೇಳಿದ್ದಾರೆ. ನಂತರ ಸಾಗರ್ ಮತ್ತು ಕುಟುಂಬ ಪೊಲೀಸರಿಗೆ ದೂರು ನೀಡಿದಾಗ ಕೋಮಲ್ ಕೊಲೆಯಾದ ಘಟನೆಯ ಸುರುಳಿ ಬಿಚ್ಚಿಕೊಂಡಿದೆ. ಕೋಮಲ್‍ಳ ತಂದೆ ಸೋಹನ್ ಪಾಲ್ ಮತ್ತು ಸಂಬಂಧಿ ಶಿವಕುಮಾರ್‌ರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Leave a Reply