ಅಮೇರಿಕದ ಬೋಸ್ಟನ್‍ನಲ್ಲಿ ಕಳೆದವಾರ ಅಪರೂಪದ ಏಲಂ ಒಂದು ನಡೆದಿದೆ. ಏಲಂಗೆ ಒಳಗಾದವರು ಗಾಂಧೀಜಿ. ಏಲಂ ಮಾಡಿದವರು ಆರ್.ಆರ್. ಏಲಂ ಸಂಸ್ಥೆ. 1976ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಏಲಂ ಹೊಸತಲ್ಲ. ಈಗಾಗಲೇ ಅದು 500ಕ್ಕಿಂತಲೂ ಅಧಿಕ ಅಪರೂಪದ ವಸ್ತುಗಳನ್ನು ಏಲಂ ಮಾಡಿದೆ. ಗಗನಯಾತ್ರಿ ಡೇವ್ ಸ್ಕಾಟ್‍ರಿಂದ ಹಿಡಿದು ಅಮೇರಿಕದ ಅಧ್ಯಕ್ಷ ಕೆನಡಿಯವರೆಗೆ, ಕಾದಂಬರಿಕಾರ ಮಾರಿಯೋ ಪುಝೋರಿಂದ ಹಿಡಿದು ಗಾಂಧೀಜಿಯವರ ವರೆಗೆ ಅದು ಯಾರನ್ನೂ ಏಲಂ ಮಾಡದೇ ಬಿಟ್ಟಿಲ್ಲ. ಜಗತ್ತಿನ ಪ್ರಭಾವಶಾಲಿ ವ್ಯಕ್ತಿಗಳಿಗೆ ಸಂಬಂಧಿಸಿ ಬಟ್ಟೆ, ಪೆನ್ನು, ಡೈರಿ, ಚಪ್ಪಲಿ.. ಇತ್ಯಾದಿ ಅಮೂಲ್ಯವಾದವುಗಳನ್ನು ಏಲಂ ಮಾಡುವುದು ಅದರ ಗುರಿ. ಮಾತ್ರವಲ್ಲ, ಅದು ಹುಟ್ಟಿಕೊಂಡದ್ದೇ ಏಲಂ ಮಾಡುವುದಕ್ಕೆ. ಆದ್ದರಿಂದ ಕಳೆದವಾರ ಬೋಸ್ಟನ್‍ನಲ್ಲಿ ಗಾಂಧೀಜಿಯವರ ಪತ್ರವೊಂದನ್ನು 6,358 ಡಾಲರ್ ಗೆ ಅದು ಏಲಂ ಮಾಡಿರುವುದರಲ್ಲಿ ಅಚ್ಚರಿ ಏನಿಲ್ಲ. ಈ ಪತ್ರದಲ್ಲಿ ಗಾಂಧೀಜಿಯವರು ಚರಕದ ಮಹತ್ವದ ಬಗ್ಗೆ ಹೇಳಿದ್ದರು. ಯಶ್ವಂತ್ ಪ್ರಸಾದ್ ಎಂಬವರನ್ನು ಉದ್ದೇಶಿಸಿ ಬರೆಯಲಾದ ಮತ್ತು ದಿನಾಂಕ ನಮೂದಿಸದ ಆ ಪತ್ರ ಗುಜರಾತಿ ಭಾಷೆಯಲ್ಲಿತ್ತು. ಗಾಂಧೀಜಿಯವರು ಪುಣೆಯ ಯರವಾಡ ಜೈಲಿನಲ್ಲಿದ್ದಾಗ ಚರಕದಿಂದ ನೂಲು ತೆಗೆಯುವ ಶಿಕ್ಷೆಗೆ ಗುರಿಯಾಗಿದ್ದರು. ಜೈಲಿನಿಂದ ಹೊರಗೆ ಬಂದ ಮೇಲೆ ಅದೇ ಚರಕವನ್ನು ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧದ ಪ್ರತಿ ಅಸ್ತ್ರವಾಗಿ ಅವರು ಬಳಸಿಕೊಂಡರು. ಚರಕದಿಂದ ನೂಲು ತೆಗೆಯುವ ಮೂಲಕ ಖಾದಿಯನ್ನು ಉತ್ತೇಜಿಸುವುದು ಅವರ ಉದ್ದೇಶವಾಗಿತ್ತು. ದಿನದಲ್ಲಿ ಸ್ವಲ್ಪ ಸಮಯವನ್ನು ಚರಕಕ್ಕೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡಿ ಎಂದವರು ದೇಶದ ಜನರಿಗೆ ಕರೆಕೊಟ್ಟಿದ್ದರು. ಚರಕವನ್ನು ಅವರು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಪ್ರಸ್ತುತಪಡಿಸಿದ್ದರು. ಇದೇ ಗಾಂಧೀಜಿಯನ್ನು ಈ ದೇಶ ಕಳಕೊಂಡು 7 ದಶಕಗಳಾದ ಬಳಿಕದ ಈಗಿನ ಸ್ಥಿತಿ ಹೇಗಿದೆಯೆಂದರೆ, ಅವರನ್ನು ಕೊಂದವನೇ ಈ ದೇಶದಲ್ಲಿ ಗೌರವಕ್ಕೆ ಅರ್ಹವಾಗುತ್ತಿದ್ದಾನೆ. ಆತನ ಪುತ್ಥಳಿ ಸ್ಥಾಪಿಸಲಾಗುತ್ತಾ ಇದೆ. ಇನ್ನೊಂದೆಡೆ, ವಿದೇಶದಲ್ಲಿ ಆ ಗಾಂಧೀಜಿಯೇ ಮಾರಾಟವಾಗುತ್ತಿದ್ದಾರೆ. ಬಹುಶಃ, ಗಾಂಧೀಜಿಯ ಒಂದೊಂದೇ ಕುರುಹುಗಳು ಮತ್ತು ಅವರು ಈ ದೇಶಕ್ಕೆ ನೀಡಿದ ಕೊಡುಗೆಗಳು ಮಾರಾಟವಾಗುತ್ತಲೋ ಅವಹೇಳನಕ್ಕೆ ಗುರಿಯಾಗುತ್ತಲೋ ಅಂತಿಮವಾಗಿ ನಾಮಾವಶೇಷವಾಗಿ ಬಿಡುತ್ತೇನೋ ಅನ್ನುವ ಸಂದೇಹ ಕಾಡತೊಡಗಿದೆ.

ಸದ್ಯ ಈ ದೇಶವನ್ನು ಆಳುವ ಪ್ರಭುತ್ವದ ಮಾತು-ಕೃತಿಗಳು ಹೇಗಿವೆಯೆಂದರೆ, ನಾಲ್ಕು ವರ್ಷಗಳ ಹಿಂದೆ ಈ ದೇಶ ಬಹುತೇಕ ಶೂನ್ಯವಾಗಿತ್ತು ಎಂಬ ರೀತಿಯಲ್ಲಿದೆ. ಗಾಂಧೀಜಿ ದೇಶ ವಿಭಜಕ, ನೆಹರೂ ಮೋಸಗಾರ, ದೇಶವನ್ನಾಳಿದ ಕಾಂಗ್ರೆಸ್ ಭ್ರಷ್ಟ, ಪಟೇಲ್ ದೇಶಪ್ರೇಮಿ, ಬೋಸ್ ನಿಜ ನಾಯಕ.. ಹೀಗೆ ಕಳೆದುಹೋದ ವ್ಯಕ್ತಿತ್ವವನ್ನು ಪರಸ್ಪರ ಎತ್ತಿ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಗಾಂಧೀಜಿಯ ವಿರುದ್ಧ ಗೋಡ್ಸೆಯನ್ನು ತಂದು ನಿಲ್ಲಿಸುವುದು. ಗಾಂಧೀಜಿಗೆ ಅಂಬೇಡ್ಕರ್ ರನ್ನು ಮುಖಾಮುಖಿಸುವುದು, ಪಟೇಲ್‍ರನ್ನು ವೈಭವೀಕರಿಸಿ ನೆಹರೂರನ್ನು ಹೀಗಳೆಯುವುದು, ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ಮಾದರಿಗಿಂತ ಬೋಸ್‍ರ ಹಿಂಸಾತ್ಮಕ ಹೋರಾಟ ಮಾದರಿಯು ಉತ್ತಮ ಎಂಬ ರೀತಿಯಲ್ಲಿ ವರ್ಣಿಸುವುದು, ಇತಿಹಾಸದಲ್ಲಿ ಆಗಿ ಹೋದ ರಾಜರುಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ವರ್ಗೀಕರಿಸಿ ಮುಸ್ಲಿಮ್ ದೊರೆಗಳೆಲ್ಲ ಹೇಗೆ ಕ್ರೂರಿಗಳು ಮತ್ತು ಹಿಂದೂ ದೊರೆಗಳು ಹೇಗೆ ಸಂತ್ರಸ್ತರು ಎಂಬುದನ್ನು ಭಾವುಕತೆಯಿಂದ ವಿವರಿಸುವುದು.. ಇತ್ಯಾದಿಗಳು ಬಹು ಜೋರಾಗಿ ನಡೆಯುತ್ತಿವೆ. ಇದೊಂದು ಬಗೆಯ ತಂತ್ರ. ಈ ದೇಶದ ಪಠ್ಯಪುಸ್ತಕಗಳು, ಸಾಹಿತ್ಯ ಗ್ರಂಥಗಳು, ಇತಿಹಾಸ ಪುಸ್ತಕಗಳು ಯಾರನ್ನು ಐಕಾನ್‍ಗಳಾಗಿ ಪ್ರಸ್ತುತಪಡಿಸಿದೆಯೋ ಅವರ ವರ್ಚಸ್ಸನ್ನು ತಗ್ಗಿಸಿ ಪ್ರತಿ ವ್ಯಕ್ತಿತ್ವಗಳನ್ನು ಜನರ ಮನಸ್ಸಿನಲ್ಲಿ ನಾಟುವುದು ಇದರ ಹಿಂದಿರುವ ಉದ್ದೇಶ. ಹಾಗಂತ, ದೀರ್ಘ ಸಮಯದಿಂದ ಜನರು ಗೌರವಿಸಿಕೊಂಡು ಬಂದಿರುವ ವ್ಯಕ್ತಿತ್ವಗಳನ್ನು ಮತ್ತು ಒಪ್ಪಿಕೊಂಡು ಬಂದಿರುವ ಇತಿಹಾಸವನ್ನು ಸುಲಭದಲ್ಲಿ ಬದಲಿಸಿ ಬಿಡಲು ಸಾಧ್ಯವಿಲ್ಲ ಎಂಬುದು ಈ ಜನರಿಗೆ ಗೊತ್ತು. ಆದ್ದರಿಂದಲೇ, ಆ ವ್ಯಕ್ತಿತ್ವಗಳ ಬಗ್ಗೆ ಗೊಂದಲಕಾರಿ ವಿವರಗಳನ್ನು ಹರಿಯಬಿಡಲಾಗುತ್ತಿದೆ. ವ್ಯಂಗ್ಯ, ತಮಾಷೆ, ಕುಚೋದ್ಯಗಳ ಹೇಳಿಕೆಗಳನ್ನು ಅವರ ಬಗ್ಗೆ ನೀಡಲಾಗುತ್ತಿದೆ. ತಮಾಷೆ ಏನೆಂದರೆ,

ಗಾಂಧೀಜಿಯವರು ಚರಕ ಮತ್ತು ಉಪ್ಪನ್ನು ಸ್ವಾಭಿಮಾನದ ಸಂಕೇತವಾಗಿ ಬಳಸಿಕೊಂಡಿದ್ದರು. ಬ್ರಿಟಿಷರ ದೊಡ್ಡಣ್ಣ ನೀತಿಯನ್ನು ಪ್ರತಿರೋಧಿಸಿ ಚಾಲ್ತಿಗೆ ತಂದ ಎರಡು ಪ್ರತಿ ಏಟುಗಳು ಇವಾಗಿದ್ದುವು. ‘ನಿಮ್ಮ ಉಡುಪು ನಮಗೆ ಬೇಡ’ ಎಂದರು. ‘ನಮ್ಮ ಉಡುಪಿನ ಆಯ್ಕೆ ನಮ್ಮದು’ ಅಂದರು. ‘ಭಾರತೀಯರು ಏನನ್ನು ಉಡಬೇಕು ಮತ್ತು ಏನನ್ನು ಉಣ್ಣಬೇಕು ಎಂಬುದು ಬ್ರಿಟಿಷರ ಮರ್ಜಿಯನ್ನು ಅವಲಂಬಿಸಿಕೊಂಡಿಲ್ಲ’ ಎಂದು ಸಾರಿದರು. ನಿಜವಾಗಿ, ಇದೊಂದು ಕೆಚ್ಚೆದೆಯ ನಡೆ. ಇನ್ನೂ ಸ್ವತಂತ್ರವಾಗಿಲ್ಲದ, ಭಾರತೀಯರ ಸರಕಾರವೂ ಇಲ್ಲದ ಮತ್ತು ಬ್ರಿಟಿಷರ ಅಣತಿಯಂತೆ ಬದುಕಬೇಕಾದಂತಹ ಸನ್ನಿವೇಶದಲ್ಲೂ ಓರ್ವ ಸಣಕಲು ವ್ಯಕ್ತಿ ತೋರಿದ ಧೈರ್ಯಶಾಲಿ ಪ್ರತಿರೋಧ ಇದು. ಇವತ್ತು ಭಾರತ ಸಾರ್ವಭೌಮ ರಾಷ್ಟ್ರ. ಮೌಂಟ್ ಬ್ಯಾಟನ್‍ನ ಕೈಯಲ್ಲಿ ಈ ದೇಶ ಇಲ್ಲ. ನಮಗೊಂದು ಗಡಿಯಿದೆ. ನಮ್ಮದೇ ಆದ ಸಂವಿಧಾನವಿದೆ. ಭಾರತೀಯರೇ ಆರಿಸಿದ ಸರಕಾರವೂ ಇದೆ. ಆದರೂ, ಈಗಿನ ಸರಕಾರದ ದೈನೇಸಿ ಸ್ಥಿತಿ ಹೇಗಿದೆಯೆಂದರೆ, ಸ್ವಾಭಿಮಾನವನ್ನೆಲ್ಲ ಅಡವಿಟ್ಟುಕೊಂಡು ತಲೆ ತಗ್ಗಿಸಿ ನಿಂತಿದೆ. ಭಾರತ ಇವತ್ತು ಯಾರಿಂದ ಪೆಟ್ರೋಲ್ ಖರೀದಿಸಬೇಕು ಎಂಬುದನ್ನು ತೀರ್ಮಾನಿಸುವುದು ಅಮೇರಿಕ. ರಶ್ಯದಿಂದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವುದಕ್ಕೆ ಅನುಮತಿ ಕೊಡಬೇಕೆಂದು ಅಮೇರಿಕದೊಂದಿಗೆ ಇವತ್ತಿನ ಸರಕಾರ ಮನವಿ ಮಾಡಿಕೊಳ್ಳುತ್ತಿದೆ. ಇಲ್ಲಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಅಮೇರಿಕ ಹೆಚ್ಚುವರಿ ಸುಂಕ ಹಾಕಿದಾಗ ನಮ್ಮ ಪ್ರಭುತ್ವ ತೋರಿದ ಪ್ರತಿಕ್ರಿಯೆ ತೀರಾ ಮೃದುವಾದುದು.

ಅಮೇರಿಕದ ಉತ್ಪನ್ನಗಳಿಗೆ ಭಾರೀ ಮಟ್ಟದಲ್ಲಿ ಸುಂಕ ವಿಧಿಸುವ ಚೀನಾದ ಧೈರ್ಯವನ್ನು ಇಲ್ಲಿನ ಪ್ರಭುತ್ವ ಪ್ರದರ್ಶಿಸುತ್ತಿಲ್ಲ. ಒಂದುಕಡೆ, ಚರಕ ಮತ್ತು ಉಪ್ಪಿನ ಮೂಲಕ ಬಹುದೊಡ್ಡ ಸಾಮ್ರಾಜ್ಯವೊಂದನ್ನೇ ಎದುರು ಹಾಕಿಕೊಂಡು ಸ್ವಾಭಿಮಾನ ಪ್ರದರ್ಶಿಸಿದ್ದ ಗಾಂಧೀಜಿ ಇದ್ದರೆ ಇನ್ನೊಂದು ಕಡೆ, ಸ್ವಾಭಿಮಾನಿ ಭಾರತದ ಬಗ್ಗೆ ಮಾರುದ್ಧ ಭಾಷಣಗಳನ್ನು ಬಿಗಿಯುತ್ತಲೇ ಅಮೇರಿಕದ ಮುಂದೆ ಸ್ವಾಭಿಮಾನವನ್ನು ಕಳಚಿಟ್ಟು ದೈನೇಸಿಯಾಗಿ ನಿಂತಿರುವ ಈಗಿನ ಪ್ರಭುತ್ವ ಇದೆ. ‘ಅಮೇರಿಕ ಬಗ್ಗಲು ಹೇಳಿದರೆ ತೆವಳಲೂ ಸಿದ್ಧ’ ಎಂಬ ಸಂದೇಶ ಸಾರುವ ಆಡಳಿತ ನೀತಿ ಈಗಿನದು. ದುರಂತ ಏನೆಂದರೆ, ಇದೇ ಪ್ರಭುತ್ವವೇ ಗಾಂಧೀಜಿಯನ್ನು ಮತ್ತು ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ತಮಾಷೆ ಮಾಡುತ್ತಿದೆ. ಈ ಪ್ರಭುತ್ವದ ಜೊತೆ ಗುರುತಿಸಿಕೊಂಡವರು ಸ್ವಾಭಿಮಾನಿ ಭಾರತದ ನಿರ್ಮಾಣದ ಬಗ್ಗೆ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಅಮೇರಿಕಕ್ಕೆ ಕನಿಷ್ಠಪಕ್ಷ ಟರ್ಕಿ ತೋರಿದ ಪ್ರತಿರೋಧವನ್ನು ತೋರಲೂ ಈ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ. ಅಮೇರಿಕ ಒಡ್ಡುವ ಷರತ್ತುಗಳನ್ನೆಲ್ಲ ಒಪ್ಪಿಕೊಂಡು ತಲೆ ತಗ್ಗಿಸಿ ನಡೆಯುವುದೇ ಸ್ವಾಭಿಮಾನ ಎಂದು ಈ ಸರಕಾರ ಭಾವಿಸಿರುವಂತಿದೆ. ನಿಜವಾಗಿ,

ಅಮೇರಿಕದಲ್ಲಿ ಮಾರಾಟವಾದದ್ದು ಗಾಂಧೀಜಿಯ ಪತ್ರವಲ್ಲ, ಈ ದೇಶದ ಸ್ವಾಭಿಮಾನ. ಆದರೆ ದೈನೇಸಿತನವನ್ನೇ ಸ್ವಾಭಿಮಾನ ಅಂದುಕೊಂಡಿರುವ ಈ ಸರಕಾರಕ್ಕೆ ಅದು ಅರ್ಥವಾಗಿಲ್ಲ, ಅಷ್ಟೇ.

ಲೇಖಕರು ; ಏ.ಕೆ ಕುಕ್ಕಿಲ

Leave a Reply