Image courtesy : shutterstock

ರಾಜ್ಯದಾದ್ಯಂತ ಎಚ್1ಎನ್1 ಕಾಯಿಲೆ ಉಲ್ಬಣಿಸುತ್ತಿದ್ದು ಸೋಂಕು ತಗುಲಿ ಚಿಕಿತ್ಸೆ ಫಲಿಸದೆಯೇ ಈವರೆಗೂ 39 ಜನ ಮೃತಪಟ್ಟಿದ್ದು 1428 ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಎನ್1ಎನ್ 1 ಲಕ್ಷಣಗಳು ಕಂಡುಬಂದಿರುವ 5,473 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 1428 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಎಚ್1 ಎನ್1 ರೋಗ ಪತ್ತೆ ಮಾಡುವಲ್ಲಿ ಆಗುತ್ತಿರುವ ವಿಳಂಬ ಹಾಗೂ ಜನರಿಗೆ ಅರಿವು ಇಲ್ಲದಿರುವುದು ಸೇರಿದಂತೆ ಹಲವಾರು ಕಾರಣಗಳು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ರಾಜ್ಯದಲ್ಲಿ ಎಚ್1ಎನ್1 ಸೋಂಕು ತಗುಲಿರುವ ಬಗ್ಗೆ ನಿರ್ದಿಷ್ಟಪಡಿಸಿದ ಪ್ರಯೋಗಾಲಯದಲ್ಲೇ ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಆದರೆ, ರಾಜ್ಯದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಪ್ರಯೋಗಾಲಯ ಇಲ್ಲದೇ ಇರುವುದೂ ಸಮಸ್ಯೆಯಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಕಳೆದ ಹತ್ತು ದಿನಗಳಲ್ಲಿ 23 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಎಚ್1ಎನ್1 ಸೋಂಕು ತಗುಲಿದವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ಶ್ವಾಸಕೋಶದಲ್ಲಿ ಸೋಂಕು ಜೊತೆಗೆ ನೆಗಡಿ, ಕೆಮ್ಮು, ಜ್ವರ, ಮೈ-ಕೈ ನೋವು, ತೀವ್ರವಾದ ಉಸಿರಾಟ ತೊಂದರೆಗಳು ಹೆಚ್ಚಾಗಿ ಕಾಡುತ್ತವೆ. ಲಕ್ಷಣ ಕಂಡು ಬಂದವರನ್ನು ಪ್ರತ್ಯೇಕವಾಗಿರಿಸಿ ಆರೈಕೆ ಮಾಡುವುದೇ ಬೇರೆಯವರಿಗೆ ಸೋಂಕು ಹರಡದಂತೆ ಕೈಗೊಳ್ಳುವ ಕ್ರಮ. ಸೋಂಕು ತಗುಲಿದ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಸೀನುವುದು, ಕಫ ಉಗುಳುವುದರಿಂದ ಮತ್ತೋರ್ವರಿಗೆ ಸೋಂಕು ಹರಡುವುದು ಹೆಚ್ಚಾಗುತ್ತದೆ. ಇಂತಹವುಗಳಿಂದ ಎಚ್ಚರಿಕೆ ವಹಿಸಬೇಕು ಎಂಬುದು ತಜ್ಞ ವೈದ್ಯರ ಸಲಹೆ.

Leave a Reply