ಹೈದರಾಬಾದ್: ಹೈದರಾಬಾದಿನ ನಿಝಾಮರ ಮ್ಯೂಸಿಯಂನಿಂದ ಕದ್ದು ಹೋಗಿದ್ದ ನಾಲ್ಕು ಕಿಲೊ ಭಾರದ ಚಿನ್ನದ ಟಿಫಿನ್ ಬಾಕ್ಸ್ ನ್ನು ಹೈದರಾಬಾದ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮ್ಯೂಸಿಯಂನಿಂದ ಚಿನ್ನದ ವಸ್ತುಗಳನ್ನು ಕದ್ದ ಕಳ್ಳರಲ್ಲಿ ಒಬ್ಬನು ವಜ್ರ, ವೈಢೂರ್ಯ ಮುತ್ತು ರತ್ನ ಖಚಿತ ಟಿಫಿನ್ ಬಾಕ್ಸಿನಲ್ಲಿ ದಿನಾಲೂ ಆಹಾರ ಸೇವಿಸುತ್ತಿದ್ದ.

ಹೈದರಾಬಾದಿನ ಪುರಾನಿ ಹವೇಲಿ ಮ್ಯೂಸಿಯಂನ ವೆಂಟಿಲೇಶನ್ ಬಾಗಿಲ ಮೂಲಕ ಕಳ್ಳರು ಒಳ ನುಗ್ಗಿದ್ದರು. ನಿಝಾಮರ ಚಿನ್ನದ ಬುತ್ತಿ, ಒಂದು ಚಿನ್ನದ ಕಪ್, ಒಂದು ಸಾಸರ್ ಒಂದು ಸ್ಪೂನ್ ಮತ್ತು ಟ್ರೇ ಯನ್ನು ಕಳ್ಳರು ಒಯ್ದಿದ್ದರು. ಆದರೆ ಕಳಕೊಂಡ ವಸ್ತುಗಳನ್ನೆಲ್ಲ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳ್ಳತನವಾದ ಎಲ್ಲ ವಸ್ತುಗಳಲ್ಲಿ ಈಗಿನ ಮಾರುಕಟ್ಟೆ ದರ ಒಂದು ಕೋಟಿ ರೂಪಾಯಿಗಿಂತಲೂ ಅಧಿಕವಿದೆ ಎಂದು ಪೊಲೀಸರು ಹೇಳಿದ್ದಾರೆ.

“ಕಳ್ಳರು ಚಿನ್ನದ ಆವರಣದ ಪವಿತ್ರ ಕುರ್‍ಆನ್‍ನ್ನು ಒಯ್ಯಲು ಯತ್ನಿಸಿದ್ದಾರೆ. ಆಗ ಮಸೀದಿಯಿಂದ ಬೆಳಗ್ಗಿನ ಆದಾನ್ ಕರೆ ಮೊಳಗಿತು. ಭಕ್ತಿಯಿಂದಲೋ ಅಥವಾ ಹೆದರಿಯೋ ಪವಿತ್ರ ಕುರ್‍ಆನನ್ನು ಬಿಟ್ಟು ಹೋಗಿದ್ದಾರೆ ಎಂದು ಹೈದರಾಬಾದಿನ ಪೊಲೀಸ್ ಕಮಿಶನರ್ ಅಂಜನಿ ಕುಮಾರ್ ಎನ್‍ಡಿಟಿವಿಗೆ ತಿಳಿಸಿದ್ದಾರೆ.

ಕಳ್ಳತನ ಆದ ರಾತ್ರೆ ಸಮೀಪದ ಸಿಸಿಟಿವಿ ಕ್ಯಾಮರಾಗಳನ್ನು ಕಳ್ಳರು ಆಫ್ ಮಾಡಿದ್ದರು. ಇಬ್ಬರು ಕಳ್ಳರು ಬೈಕಿನಲ್ಲಿ ಹೋಗುತ್ತಿರುವ ದೃಶ್ಯವಷ್ಟೇ ಪೊಲೀಸರಿಗೆ ಸಿಕ್ಕಿದ್ದು. ನಿಝಾಮರ ಬುತ್ತಿ ಪತ್ತೆಗೆ ಪೊಲೀಸರು 22 ಮಂದಿಯ ತಂಡವನ್ನು ರಚಿಸಿದ್ದರು. ಕಳ್ಳರು ಮುಂಬೈಗೆ ಹೋಗಿದ್ದು ಮತ್ತು ಅಲ್ಲಿ ಒಂದು ಫೈವ್‍ಸ್ಟಾರ್ ಹೊಟೇಲಿನಲ್ಲಿ ಇದ್ದಾರೆಂಬುದು ಪೊಲೀಸರು ಪತ್ತೆ ಹಚ್ಚಿದರು. ನಂತರ ಮುಂಬೈಯಲ್ಲಿ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply