Representational Image

ನನ್ನ ತಮ್ಮ ಅವನ ಪತ್ನಿಯನ್ನು ತುಂಬಾ ಇಷ್ಟ ಪಡುತ್ತಾನೆ. ಆದರೆ ಆಕೆ ಅವನಿಗೆ ಮೋಸ ಮಾಡುತ್ತಿದ್ದಾಳೆಯೇ ಎಂಬ ಆತಂಕ ನನಗೆ ಮೂಡಿದೆ. ಇಡೀ ದಿನ ಮೊಬೈಲ್ ನಲ್ಲಿ ಮಾತಾಡುತ್ತಿರುತ್ತಾಳೆ, ಡಾಕ್ಟರ್ ಹತ್ರ, ಮಾರ್ಕೆಟ್ ಗೆ ಹೊರಗೆ ಹೋಗುವಾಗ ಒಬ್ಬಳೇ ಹೋಗುತ್ತಾಳೆ, ಏನೋ ಮುಚ್ಚಿಡುವಂತೆ ಮಾಡುತ್ತಾಳೆ, ಇತ್ತೀಚಿಗೆ ಯಾರೋ ಪುರುಷನೊಂದಿಗೆ ಸಿನೆಮಾಕ್ಕೂ ಹೋಗಿದ್ದಾಳೆ ಎಂದು ಒಬ್ಬರು ಹೇಳಿದರು, ನನ್ನ ತಮ್ಮ ತುಂಬಾ ಸಾಧು ಸ್ವಭಾವದವನು… ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು.

ಯಾರದೇ ಪರ್ಸನಲ್ ವಿಷಯವನ್ನು ದುರ್ಬಿನ್ ಹಿಡಿದು ನೋಡುವ ಅವಶ್ಯಕತೆ ಇರುವುದಿಲ್ಲ. ಕಣ್ಣಿನಿಂದ ಕಂಡರೂ ಪರಾಂಬರಿಸಿ ನೋಡಬೇಕು ಎನ್ನುವ ಗಾದೆಯೇ ಇದೆ. ಒಂದು ವೇಳೆ ನೀವು ಹೇಳುವುದು ನಿಜವೇ ಆಗಿದ್ದರೆ ಒಂದಲ್ಲ ಒಂದು ದಿನ ಅವರು ಸಿಕ್ಕಿ ಬೀಳುತ್ತಾರೆ.

ಮೊದಲು ಅವಳು ಯಾರ ಜೊತೆ ಅಷ್ಟೊಂದು ಸಲುಗೆಯಿಂದ ಇದ್ದಾಳೆ ಅಂತ ಪತ್ತೆ ಮಾಡಬೇಕು. ಅವಳು ಮನೆಯಿಂದ ಪ್ರತೀದಿನ ಹೊರಗೆ ಹೋಗುವುದು ನಿಮ್ಮ ತಮ್ಮನಿಗೆ ಗೊತ್ತಿದೆಯಾ? ಮಾತಿನ ಸಂದರ್ಭದಲ್ಲಿ ಆ ವಿಷಯ ಅವನ ಗಮನಕ್ಕೆ ತನ್ನಿ. ಅವಳ ನಡೆಯ ಬಗ್ಗೆ ಸಂಶಯವೆನಿಸಿದರೆ ನಿಮ್ಮ ತಮ್ಮನಿಗೆ ಯುಕ್ತಿಯುತವಾಗಿ ವಿಷಯ ತಿಳಿಸುವುದೇ ಒಳ್ಳೆಯದು.

ನೀವು ಹೇಳುವುದರಿಂದ ಹಾಗೇನೂ ಇಲ್ಲದಿದ್ದರೆ ಸುಮ್ಮನೆ ಅವರ ಸಂಸಾರಕ್ಕೆ ವಿಷ ಹಾಕಿದಂತೆ ಆಗಬಹುದು. ಸಿನೆಮಾಕ್ಕೆ ಹೋಗಿರುವುದನ್ನು ನೀವು ಕಣ್ಣಾರೆ ಕಂಡಿಲ್ಲ. ಯಾರೋ ಏನೋ ಹೇಳಿದ್ದನ್ನು ನಾವು ಆಧರಿಸಿ ಒಬ್ಬರ ಶೀಲದ ಬಗ್ಗೆ ನಿಖರವಾಗಿ ನಿರ್ಧರಿಸುವುದು ತಪ್ಪು. ಆಕೆಯ ಚಲನವಲನದ ಬಗ್ಗೆ ಅಸ್ವಾಭಾವಿಕವಾಗಿ ಏನಾದರೂ ಕಂಡರೆ ಮನೆಯ ಹಿರಿಯರು ಸ್ವಲ್ಪ ಕಠಿಣತೆ ತೋರಬೇಕು. ಆಗ ನಿಯಂತ್ರಣಕ್ಕೆ ಬರಬಹುದು ಅಥವಾ ಹೆದರಿ ಸರಿಯಾಗಲೂ ಬಹುದು.

ಯಾವುದಕ್ಕೂ ತಪ್ಪು ಕೆಲಸ ಮಾಡುವವರು ಒಂದಲ್ಲ ಒಂದಿನ ಸಿಕ್ಕಿ ಬೀಳುತ್ತಾರೆ. ಗಂಡನಿಗೆ ಮೋಸ ಮಾಡುವ ಮತ್ತು ಹೆಂಡತಿಗೆ ಮೋಸ ಮಾಡುವ ಗಂಡ ತಮ್ಮ ಭವಿಷ್ಯದ ಮಕ್ಕಳ ಬಗ್ಗೆ ಚಿಂತಿಸಬೇಕು. ನಮ್ಮ ಮಕ್ಕಳು ನಮ್ಮ ಪಡಿಯಚ್ಚು ಆಗಿರುತ್ತಾರೆ, ನಾವು ಯಾವುದನ್ನೂ ಸ್ವಭಾವದಲ್ಲಿ ಮೈಗೂಡಿಸಿಕೊಳ್ಳುತ್ತೇವೆ ಅದು ಅವರ ಸ್ವಭಾವದಲ್ಲಿ ಪರೋಕ್ಷವಾಗಿ ಪ್ರಭಾವ ಬೀರುತ್ತದೆ.

Leave a Reply