ಯಾಕೋ ಏನನ್ನೂ ಪೋಸ್ಟ್ ಮಾಡಲು ಮನಸ್ಸು ಬರುತ್ತಿಲ್ಲ.
“ಐ ಲವ್ ಮುಸ್ಲಿಮ್ಸ್” ಎನ್ನುವ ಒಂದು ಹುಡುಗಿಯ ಮೇಲೆ ಇದೇ ಸೋಷಿಯಲ್ ಮೀಡಿಯಾದಲ್ಲಿ ನಮ್ಮಂತೆಯೆ ಮನುಷ್ಯರಾಗಿ ಹುಟ್ಟಿದ ಮಂದಿ ತಾವು ಮನುಷ್ಯರೆಂಬುದೇ ಮರೆತು ದಾಳಿಗೆ ಇಳಿಯುತ್ತಾರೆ. ಎಲ್ಲೆಲ್ಲಿಂದಲೋ ಅವಳ ಮೊಬೈಲ್‌ಗೆ, ಅವಳ ಮನೆಗೆ, ತಂದೆಗೆ, ತಾಯಿಗೆ ಬೆದರಿಕೆ ಕರೆಗಳು ಬರುತ್ತವೆ. ಅಷ್ಟು ಸಾಕಾಗದೆ ಅವಳ ಮನಗೆ ತೆರಳುತ್ತಾರೆ. ಮತ್ತೆ ಆಕೆಗೆ ಬೆದರಿಕೆ ಒಡ್ಡುತ್ತಾರೆ. ಅಷ್ಟಕ್ಕೂ ಆಕೆಗೆ ಮುಸ್ಲಿಮ್ ಸ್ನೇಹಿತರಿದ್ದಾರೆ ಬಿಟ್ಟರೆ ಅದನ್ನು ಮೀರಿದ ಯಾವ ಸಂಬಂಧವೂ ಇಲ್ಲ. ಇದ್ದಿದ್ದರೂ ತಪ್ಪಲ್ಲ.

ಗಟ್ಟಿಗಿತ್ತಿಯಾದ ಒಬ್ಬಳು ಹಿಂದೂ ಹುಡುಗಿ ಧನ್ಯಶ್ರೀ ಈ ಸಂಘಪರಿವಾರದ ಬೆದರಿಕೆಗೆ, ಇವರ ಪರಿವಾರ ಹಾಳು ಮಾಡಿದ ಕಿಡಿಗೇಡಿ ಹುಡುಗರ ಸೋಷಿಯಲ್ ಮೀಡಿಯಾ ದಾಳಿಗೆ ಬೇಸತ್ತು ಮನಸ್ಸಿಲ್ಲದ ಮನಸ್ಸಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಾವೆಲ್ಲ ಅಸಹಾಯಕರಾಗಿ ಕೂತಿದ್ದೇವೆ. ಈಗ ವಿರೇಂದ್ರ ಹೆಗ್ಗಡೆಯೂ ಮಾತನಾಡುವುದಿಲ್ಲ. ಪೇಜಾವರ ಸ್ವಾಮಿಗಳೂ ಮಾತನಾಡುವುದಿಲ್ಲ. ನಿಟ್ಟೆಯ ವಿನಯ್ ಹೆಗ್ಡೆ, ಬಸ್ರೂರು ಅಪ್ಪಣ್ಣ ಹೆಗ್ಡೆ, ವಿವೇಕ ರೈ, ವೈದೇಹಿ, ಶೋಭಾ ಕರಂದ್ಲಾಜೆ ಯಾರೂ ಬಾಯಿ ಬಿಡುವುದಿಲ್ಲ. ತನ್ನದೇ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷನೊಬ್ಬ ಆ ಹುಡುಗಿಯ ಆತ್ಮಹತ್ಯೆಗೆ ಕಾರಣನಾಗಿದ್ದರೂ ಬಿಜೆಪಿ ಯುವಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ತಮ್ಮ ಮೋರ್ಚಾ ಯುವತಿಯರ ರಕ್ಷಣೆಗಾಗಿ ಇದೆ ಎಂದು ಬೊಗಳೆ ಬಿಡುತ್ತಾಳೆ. ಇನೊಂದೆಡೆ ದಾನಮ್ಮನ ಸಾವಿಗೆ ಬ್ಯಾಯ ಒದಗಿಸಿ ಎಂದರೆ ನಮ್ಮ ಸಂಗಾತಿಗಳನ್ನೇ ಹದ್ದುಬಸ್ತಿನಲ್ಲಿಡುವ ಪ್ರಯತ್ನವಾಗುತ್ತದೆ.

ಹೇಳಿ ಇಂತಹ ದರಿದ್ರ ಸ್ಥಿತಿಯಲ್ಲಿ ನಾವಿರುವಾಗ ಏನನ್ನು ಪೋಸ್ಟ್ ಮಾಡಬೇಕು? ಯಾವುದರ ಬಗ್ಗೆ ಬರೆಯಬೇಕು. ನಿನ್ನೆಯಿಂದಲೂ ಧನ್ಯಾಳ ಫೋಟೊ, ಆಕೆ ಮುಸ್ಲಿಮರ ಬಗ್ಗೆ ಇಟ್ಟಿದ್ದ ಸದಭಿಪ್ರಾಯ, ಅವರ ಜೊತೆಗಿನ ಸ್ನೇಹ, ಅದನ್ನು ಸಮರ್ಥಿಸಿಕೊಂಡಿದ್ದು ಎಲ್ಲವೂ ಕಣ್ಮುಂದೆ ಬರುತ್ತಿದೆ. ಎಂತಹ ಹೂ ಮನಸ್ಸಿನ ಜೀವ ಪ್ರೀತಿಯ ಹೆಣ್ಣು ಆಕೆ. ಸೋಷಿಯಲ್ ಮೀಡಿಯಾದಲ್ಲಿ ಧನ್ಯಾ ಸಾವಿನ ನಂತರವೂ ಆಕೆಯ ಬಗ್ಗೆ ಎಷ್ಟೊಂದು ಕೀಳು ಕಮೆಂಟ್‌ಗಳು, ಸತ್ತದ್ದು ಒಳ್ಳೆಯದಾಯಿತು, ಇನ್ನು ಹುಟ್ಟಿಬರಬೇಡ, ಇದಕ್ಕಿಂತ ಇನ್ನೂ ಅಸಹ್ಯ ಕಮೆಂಟ್‍ಗಳು. ಒಂದು ಅಮಾಯಕ ಹುಡುಗಿಯ ಸಾವಿಗೆ ಒಂದು ಹನಿ ಕಂಬನಿಯೂ ಇಲ್ಲದ ಸಮಾಜದಲ್ಲಿ ನಾವಿದ್ದೆವೆಯೆ?

ಆಕೆ ಹೇಳಿದ್ದೇನು? “ಐ ಲವ್ ಮುಸ್ಲಿಮ್ಸ್”. ಏನು ಮಹಾಪರಾಧವಾಯಿತು? “ಲವ್” ಎಂದರೇನು ಎಂದು ಅರ್ಥವಾದರೂ ಈ ಸಂಘಪರಿವಾರದ ಜನರಿಗೆ ಗೊತ್ತಿದೆಯೆ?
ಪಿಯುಸಿಯ ಅಶ್ಫಾಕ್, ಅಸ್ಮತುಲ್ಲಾ, ಗಂಗೊಳ್ಳಿ ಎಂಬುಲೆನ್ಸ್‌ನ ಇಬ್ರಾಹಿಂ, ಕಂಡರೆ ಗೌರವ ಉಕ್ಕುವ ರಹಮತ್ ತರೀಕೆರೆ ಸರ್, ಪ್ರಿತಿಯ ಮಹಾಪೂರ ಹರಿಸುವ ಅವರ ಸಹೋದರ ಕಲೀಂ ಸರ್, ಮಂಗಳೂರಿನ ಉಮರ್ ಭಾಯ್, ಅಲ್ ಆರೀಫ್‌ನ ಆಸಿರ್, ಬಾಲ್ಯದ ಮೊಯಿದ್ದಿನ್, ನಮ್ಮಲ್ಲೇ ಬಾಡಿಗೆಗಿದ್ದಅಂಗಡಿ ಝುಬೇರ್ ಸಾಹೇಬರು, ಕರುಳು ತಲುಪುವ ಕವಿತೆ ಬರೆಯುವ ಶಾಫಿ, ಅಕ್ಕರೆಯ ಪೀರ್ ಬಾಷಾ, ವಾರ್ತಾಭಾರತಿಯ ಬಶೀರ್, ಚಿಕ್ಕಮಗಳೂರಿನ ಹಸನಬ್ಬ, ಸೋಷಿಯಲ್ ಮೀಡಿಯಾದಲ್ಲೇ ಪರಿಚಯವಾಗಿ ಪ್ರೀತಿ ನೀಡುತ್ತಾ ಮನೆಗೆ ಬನ್ನಿ, ಮದುವೆಗೆ ಬನ್ನಿ ಎನ್ನುವ ನೂರಾರು ಮುಸ್ಲಿಮ್ ಸ್ನೇಹಿತರು, ಕೋಮು ಸೌಹಾರ್ದವೇದಿಕೆಯಲ್ಲಿ ಪರಿಚಯವಾದ ಅಸಂಖ್ಯಾತ ಮುಸ್ಲಿಮ್ ಗೆಳೆಯರು, ನೀರಿನ ನಝೀರ್ ಸಾಬರು, ಸೂಫಿ ಸಂತರು, ಕವಿಗಳು, ಹಾಡುಗಾರರು.ಲೇಖಕರು, ಪತ್ರಕರ್ತರು ಜೀವನದಲ್ಲಿ ಪ್ರಭಾವ ಬೀರಿದ, ಪ್ರೀತಿ ವಾತ್ಸಲ್ಯದ ಮಳೆಗೆರೆದ ಮುಸ್ಲಿಮರು ಒಬ್ಬರೆ ಇಬ್ಬರೆ. ಇವರನ್ನೆಲ್ಲ ” ಐ ಲವ್ ಯೂ” ಅನ್ನದೆ ಮತ್ತೇನನ್ನಲಿ? ಹೌದು “ಐ ಲವ್ ಮುಸ್ಲಿಮ್ಸ್”. ಧನ್ಯಶ್ರೀ ಹೇಳಿದ್ದು ಸಹ ಇದನ್ನೆ ಮತ್ತು ಇಷ್ಟನ್ನೆ. ಇಷ್ಟಕ್ಕೆ ನೇಣಿಗೇರಿಸಿದರಲ್ಲ.

ಎಂತಹ ಸಮಾಜದಲ್ಲಿದ್ದೇವೆ ಗೆಳೆಯರೆ? ಯೋಚಿಸಿದರೆ ಮೈ ನಡುಗುತ್ತದೆ.
-ಶಶಿಧರ ಹೆಮ್ಮಾಡಿ

Leave a Reply