ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸೀಟು ನೀಡದಿರುವುದೇ ಸಾವಿಗೆ ಕಾರಣವಾದ ಘಟನೆ ನಡೆದಿದ್ದು 8 ತಿಂಗಳು ಗರ್ಭಿಣಿ ಮಹಿಳೆಯ ಸಾವು ಇಡೀ ಕೇರಳವನ್ನೇ ತಲೆ ತಗ್ಗಿಸುವಂತೆ ಮಾಡಿದೆ.

ಸಾಮಾನ್ಯವಾಗಿ ಬಸ್ಸುಗಳಲ್ಲಿ ಹಾಗೂ ಇತರ ವಾಹನಗಳಲ್ಲಿ ಪ್ರಯಾಣಿಸುವಾಗ ಗರ್ಭಿಣಿ ಮಹಿಳೆಯರು ಮತ್ತು ಎಳೆಯ ಕೂಸನ್ನು ಹಿಡಿದು ನಿಲ್ಲುವ ತಾಯಂದಿರನ್ನು ಕಂಡರೇ ಕೆಲವರಾದರೂ ಇಂದು ಸೀಟು ಬಿಟ್ಟುಕೊಟ್ಟು ಅವರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಡುತ್ತಾರೆ. ಆದರೆ ಕೇರಳದ ಕೊಟ್ಟಾಯಂ ಜಿಲ್ಲೆಯ ಅಪಥಿಯ ಖಾಸಗಿ ಬಸ್ಸನ್ನೇರಿದ ಎಂಟು ತಿಂಗಳು ಗರ್ಭಿಣಿ ಯಾದ 34 ರ ಹರೆಯದ ನಾದೀಶಾರವರಿಗೆ ಕಳೆದ ಶುಕ್ರವಾರ ಸೀಟು ಬಿಟ್ಟು ಕೊಡಲು ಯಾರೂ ಮುಂದಾಗಲಿಲ್ಲ. ಸೀಟು ಸಿಗದೇ ಬಾಗಿಲ ಬಳಿಯ ಕಂಬಿ ಹಿಡಿದು ನಿಂತಿದ್ದ ನಾದೀಶಾ ಬಸ್ಸು ತಿರುವಿನಲ್ಲಿ ವೇಗವಾಗಿ ಚಲಿಸಿದ್ದರಿಂದ ಆಯ ತಪ್ಪಿ ರಸ್ತೆಗುರುಳಿದರು. ಎಲ್ಲ ಬಸ್ಸುಗಳಿಗೂ ಚಲಿಸುವಾಗ ಬಾಗಿಲುಗಳನ್ನು ಮುಚ್ಚಬೇಕೆಂಬ ನಿಯಮವಿದ್ದರೂ ಖಾಸಗಿ ಬಸ್ಸಿನಲ್ಲಿ ಅಂದು ಬಾಗಿಲು ಹಾಕದಿರುವುದೇ ನಾದೀಶಾ ರಸ್ತೆಗುರುಳಿ ಬೀಳಲು ಮುಳುವಾಯ್ತು. ಬಿದ್ದ ರಭಸದಲ್ಲಿ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು ಕೂಡಲೇ ರೀಮ್ಸ್ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಯ್ತು. ನಾದೀಶಾರ ಮಗುವನ್ನು ಕಾಪಾಡುವಲ್ಲಿ ವೈದ್ಯರ ತಂಡವು ಸಫಲವಾಯಿತು. ಆದರೆ ನಾದೀಶಾ ಚೇತರಿಸಿಕೊಳ್ಳಲಾಗದೇ ಬುಧವಾರದಂದು ಅಸುನೀಗಿದರು.

ಅಕ್ಷಯಾ ಸೆಂಟರ್ ನಿಂದ ಮನೆಗೆ ಧಾವಿಸುತ್ತಿದ್ದ ನಾದೀಶಾ ಬಹುಶಃ ತನಗೆ ಯಾರಾದರೂ ಸೀಟು ಬಿಟ್ಟುಕೊಡುವರೆಂಬ ಭರವಸೆಯಲ್ಲಿದ್ದರೆನ್ನಿಸುತ್ತದೆ. ಆದರೆ ಓರ್ವ ಗರ್ಭಿಣಿ ಮಹಿಳೆಯನ್ನು ಬಸ್ಸಿನಲ್ಲಿ ನಿಲ್ಲಿಸಿ ಪ್ರಯಾಣ ಮಾಡುವಂತೆ ಮಾಡಿದ ಖಾಸಗಿ ಬಸ್ಸು ಸಾರಿಗೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವುದು ಸಾಬೀತಾಗಿದೆ.

ಕಳೆದ ವರ್ಷ ಮೋಟರ್ ವೆಹಿಕಲ್ ಕಾಯ್ದೆಯ ತಿದ್ದುಪಡಿಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಶಿಫಾರಸ್ಸಿನ ಮೇರೆಗೆ ಎಲ್ಲಾ ಕೆಎಸ್ಆರ್ ಟಿಸಿ ಹಾಗೂ ಖಾಸಗಿ ಬಸ್ಸುಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಒಂದಾದರೂ ಸೀಟನ್ನು ಮೀಸಲಿಡಬೇಕೆಂಬ ಆದೇಶವಿದೆ. ಹಾಗೂ ಪ್ರಯಾಣದ ವೇಳೆ ಬಾಗಿಲುಗಳನ್ನು ಪ್ರತಿ ಬಾರಿ ಭದ್ರಪಡಿಸಬೇಕೆಂಬ ನಿಯಮವಿದೆ.
ಪೋಲಿಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ಸನ್ನು ತಡೆ ಹಿಡಿದಿದ್ದು ಹಾರ್ಶ್ ಡ್ರೈವಿಂಗ್ ಮತ್ತು ಚಾಲಕನ ನಿರ್ಲಕ್ಷ್ಯತನವು ಸಾವಿಗೆ ಕಾರಣವಾಗಿರುವುದರಿಂದ ಸೆಕ್ಷನ್ 279 ಮತ್ತು 304 ರ ಅನ್ವಯ ದೂರು ದಾಖಲಿಸಿ ಚಾಲಕನನ್ನು ಬಂಧಿಸಿದ್ದಾರೆ.

Leave a Reply