ಹೌದು, ಗಣೇಶ್ ಕಾಮತ್ ಅವರ ಕೃತಕ ಕೈಗಳ ಕೈಚಳಕದಲ್ಲಿ ಮೂವತ್ತು ಸಾವಿರದಿಂದ ಐವತ್ತು ಸಾವಿರ ಜನರು ನೆರೆಯುವ ಹೆಚ್ಚಿನ ಸಮಾರಂಭಗಳಲ್ಲಿ ಝಘಮಗಿಸುವ ಲೈಟಿಂಗ್ಸ್ ಗಳು,ಸೌಂಡ್ ಸಿಸ್ಟಮ್ ಹಾಗೂ ಇತರೆ ಸೌಕರ್ಯಗಳು ಲೀಲಾಜಾಲವಾಗಿ ಹೊಳೆಯುತ್ತಿರುವುದು ಮೂಡುಬಿದಿರೆ- ಕಾರ್ಕಳ ವ್ಯಾಪ್ತಿಯಲ್ಲಿ ಇದೀಗ ಹೆಸರು ವಾಸಿಯಾಗಿದೆ.

2001 ರಲ್ಲಿ ವಿದ್ಯುತ್ ಆಘಾತವೊಂದರಲ್ಲಿ ಗಣೇಶ್ ಕಾಮತ್ ರವರು ತಮ್ಮ ಎರಡು ಕೈಗಳನ್ನು ಕಳೆದುಕೊಂಡಾಗ ಹೆಚ್ಚಿನವರು ಭಿಕ್ಷೆ ಬೇಡುವುದಲ್ಲದೇ ಆತನಿಗೆ ಇನ್ನಾವ ಕೆಲಸವು ಒಲಿಯಲಾರದೆಂದು ವ್ಯಂಗ್ಯವಾಡಿದ್ದರು. ಇದರಿಂದ ನೊಂದ ಗಣೇಶ್ ಕಾಮತ್ ಖಿನ್ನತೆಗೊಳಗಾಗಿದ್ದರಲ್ಲದೇ ಆತ್ಮಹತ್ಯೆಗೂ ಯತ್ನಿಸಿದ್ದರು.

ಆದರೆ ತದನಂತರ ಧೈರ್ಯ ತುಂಬಿದ ಸಂಬಂಧಿಗಳು ಅವರ ಆಘಾತದ ಪರಿಹಾರ ನಿಧಿಯನ್ನು ಪಡೆಯಲು ಹೋರಾಡುವಲ್ಲಿ ಸಫಲತೆಯನ್ನು ನೀಡಿತು. ತದನಂತರ ತಮ್ಮದೇ ಆದ ಜಿಕೆ ಡೇಕೊರೇಟರ್ಸ್ ಎಂಬ ಲೈಟಿಂಗ್ ,ಸೌಂಡ್ಸ್ ವ್ಯವಸ್ಥೆಯನ್ನು ಪೂರೈಸುವ ಕೆಲಸವನ್ನು ಒಲಿಸಿಕೊಂಡರು. ಅದೃಷ್ಟ ಅವರ ಕೈ ಹಿಡಿಯಿತು. ಜೊತೆಗೆ ಗಣೇಶ್ ಕಾಮತ್ ರವರ ಧರ್ಮಪತ್ನಿಯಾಗಿ ಲತಾ ಅವರ ಕೈಹಿಡಿದರು. ಮದುವೆ ಸಮಾರಂಭಗಳಿಗೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಲೈಟಿಂಗ್ಸ್ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಕ್ಯಾಟರಿಂಗ್ ವ್ಯವಸ್ಥೆಯನ್ನು ಆರಂಭಿಸಿದರು
ಆರಂಭದಲ್ಲಿ ಸಾವಿರಾರು ರುಪಾಯಿಗಳ ಮಾಸಿಕ ವ್ಯವಹಾರಗಳು ನಡೆಯುತ್ತಿದ್ದವಾದರೇ ಮಾಸಿಕ ಲಕ್ಷ ರೂಪಾಯಿವರೆಗೆ ಆದಾಯವು ದಾಟಿತು. ಇದರ ಜೊತೆಗೆ 40 ಜನರಿಗೆ ಉದ್ಯೋಗದಾತರಾದ ಗಣೇಶ್ ಕಾಮತ್ ಇದೀಗ ನಲವತ್ತು ಪರಿವಾರಗಳಿಗೆ ಅನ್ನದಾತರಾಗಿದ್ದಾರೆ.
ಅಂಗ ಊನರಾದರೆಂಬ ಕಾರಣಕ್ಕೆ ಅವರನ್ನು ಹೀಯಾಳಿಸಿ ನಿಂದಿಸಿ ಭಿಕ್ಷಾಟನೆಗೆ ಪ್ರೋತ್ಸಾಹಿಸುವ ಬದಲು ಧೈರ್ಯ ತುಂಬಲು ಮುಂದಾಗಿರೆಂದು ಗಣೇಶ್ ಕಾಮತ್ ಹೇಳುತ್ತಾರೆ. ನನಗೆ ನನ್ನ ಸ್ವಂತ ಕೈಗಳಿಂದ ತಿನ್ನಲು ಸಾಧ್ಯವಾಗದಿರಬಹುದು‌. ಆದರೆ ಈ ಕೈಗಳು ನಲವತ್ತು ಪರಿವಾರಗಳ ಹಸಿವನ್ನು ತಣಿಸಬಲ್ಲೆವೆಂಬ ಸಂತೃಪ್ತಿ ಇದೆ .ಎಂದು ಗಣೇಶ್ ಕಾಮತ್ ನುಡಿಯುತ್ತಾರೆ.

Leave a Reply