ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಕ್ಷೇಪಣಾ ಚಿತ್ರವನ್ನು ಪೋಸ್ಟ್ ಮಾಡಿದ್ದ ಆರೋಪಕ್ಕೆ ಬಂಧಿತರಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂಕೋರ್ಟ್ ಷರತ್ತಿನ ಜಾಮೀನು ನೀಡಿದ್ದು, ಪ್ರಿಯಾಂಕಾ ಶರ್ಮಾ ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ರಜಾಪೀಠ ಫೇಸ್‌ಬುಕ್‌ನಲ್ಲಿ ಆಕ್ಷೇಪಣಾ ಚಿತ್ರವನ್ನು ಪೋಸ್ಟ್ ಮಾಡಿದ ವಿಚಾರವಾಗಿ ಈಗ ಅವರು ಲಿಖಿತವಾಗಿ ಕ್ಷಮೆಯನ್ನು ಕೋರಬೇಕು, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿದೆ. ಇದೇ ವೇಳೆ ಪ್ರಿಯಾಂಕಾ ಶರ್ಮಾರನ್ನು ವಶಕ್ಕೆ ತೆಗೆದುಕೊಂಡಿದ್ದ ಪಶ್ಚಿಮ ಬಂಗಾಳದ ಪೋಲಿಸರಿಗೂ ನೋಟಿಸ್ ಜಾರಿ ಮಾಡಿದೆ.

ತುರ್ತು ವಿಚಾರಣೆ ನಡೆಸಬೇಕೆಂಬ ಕೋರಿಕೆಗೆ ಮನ್ನಣೆ ನೀಡಿ ಸುಪ್ರೀಂಕೋರ್ಟ್ ಮಂಗಳವಾರದಂದು ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿತ್ತು. ಅರ್ಜಿದಾರರ ಪರವಾಗಿ ನೀರಜ್ ಕಿಶನ್ ಕೌಲ್ ಹಾಜರಾಗಿದ್ದರು.
ಹೌರಾದ ಬಿಜೆಪಿ ಯುವ ಮೋರ್ಚಾದ ಸಂಚಾಲಕಿಯಾಗಿರುವ ಪ್ರಿಯಾಂಕಾ ಶರ್ಮಾ ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಅವರು ನ್ಯೂಯಾರ್ಕ್ ಮೆಟ್ರೋಪಾಲಿಟನ್ ಭಾಗವಹಿಸಿದ್ದ ಚಿತ್ರವನ್ನು ತಿದ್ದಿ ಅದರಲ್ಲಿ ಮಮತಾ ಬ್ಯಾನರ್ಜಿಯವರ ಫೋಟೋವೊಂದನ್ನು ಸೇರಿಸಿ ಸಾಮಾಜಿಕ ಮಾಧ್ಯಮವೊಂದರಲ್ಲಿ ಪೋಸ್ಟ್ ಮಾಡಿದ್ದರು.

Leave a Reply