ರಾಜ್ಯದಲ್ಲಿ ಶಾಲೆಗಳು ಹಾಗೂ ಆಸ್ಪತ್ರೆಗಳ ಬಳಿ ಇನ್ನು ಮುಂದೆ ಮೊಬೈಲ್ಟವರ್ ಸೇರಿದಂತೆ ಯಾವುದೇ ಮಾದರಿಯ ಟವರ್‌ಗಳ ನಿರ್ಮಾಣಕ್ಕೆ ಸರ್ಕಾರ ಅಂಕುಶ ಹಾಕುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಸುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದಂತೆ ದೂರ ಸಂಪರ್ಕ ಕಂಪನಿಗಳು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಹಾದಿ ಬೀದಿಗೊಂದು ಟವರ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇಂತಹ ಕಾರ್ಯದಿಂದ ಈಗಾಗಲೇ ಪಕ್ಷಿ ಸಂಕುಲ ವಿನಾಶದ ಅಂಚಿಗೆ ಬಂದಿದ್ದು ಈಗ ಮನುಷ್ಯರ ಜೀವಕ್ಕೂ ಹಾನಿಕಾರಕ ಎಂಬ ಅಂಶ ಗೊತ್ತಾಗಿರುವುದರಿಂದ ಶಾಲೆಗಳು ಹಾಗೂ ಆಸ್ಪತ್ರೆಗಳಿರುವ ಸ್ಥಳದಲ್ಲಿ ಯಾವುದೇ ಟವರ್ ಗಳನ್ನು ನಿರ್ಮಾಣ ಮಾಡಬಾರದು ಎಂದು ಆದೇಶ ಹೊರಡಿಸಿದೆ. ಶಾಲೆಗಳು ಹಾಗೂ ಆಸ್ಪತ್ರೆಗಳಿಂದ ಕನಿಷ್ಠ 50 ಮೀಟರ್‌ವರೆಗೆ ಮೊಬೈಲ್ ಟವರ್ ಗಳನ್ನು ನಿರ್ಮಾಣ ಮಾಡುವಂತಿಲ್ಲ. ಈಗಾಗಲೇ ಅಳವಡಿಸಿದ್ದರೆ ಅವುಗಳನ್ನು ನಿಗದಿತ ದೂರಕ್ಕೆ ಸ್ಥಳಾಂತರ ಮಾಡಬೇಕು. ಹಾಗೆಯೇ ನದಿ ದಡ, ಕೆರೆಗಳ ಬಳಿ ಅಳವಡಿಸುವಂತಿಲ್ಲ, ನೀರಿನ ಸಂಗ್ರಹದ ಟ್ಯಾಂಕರ್ ಗಳ ಬಳಿಯು ಅಳವಡಿಕೆ ಮಾಡುವಂತಿಲ್ಲ, ಹೊಸ ನಿಯಮದ ಪ್ರಕಾರ ನದಿ ದಡದಿಂದ ಆರು ಮೀಟರ್ ದೂರ, ಕೆರೆ ಪ್ರದೇಶದಿಂದ 5 ಮೀಟರ್ ದೂರದಲ್ಲಿ ಟವರ ಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಲಾಗಿದೆ.

ಹೊಸ ಆದೇಶದ ಪ್ರಕಾರ ಇನ್ನು ಮೂರು ತಿಂಗಳ ಒಳಗೆ ಶಾಲೆಗಳ ಬಳಿ ಇರುವ ಹಾಗೂ ಆಸ್ಪತ್ರೆಗಳ ಬಳಿ ಇರುವ ಟವರ್‌ಗಳನ್ನು ಸ್ಥಳಾಂತರ ಮಾಡಬೇಕು ಇಲ್ಲವಾದಲ್ಲಿ ದಂಡ ಹಾಕುವುದಲ್ಲದೆ, ಹಾಲಿ ಇರುವ ಟವರ್‌ಗಳನ್ನು ತೆರವು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಟವರ್‌ಗಳನ್ನು ಖಾಲಿ ಪ್ರದೇಶದಲ್ಲಿ ಅಥವಾ ನಿರ್ಜನ ಪ್ರದೇಶಗಳಲ್ಲಿ ನಿರ್ಮಾಣ ಮಾಡಬೇಕು. ಒಂದು ವೇಳೆ ನಿರ್ಜನ ಪ್ರದೇಶದಲ್ಲಿ ಸ್ಥಳಾವಕಾಶ ಸಿಗದೇ ಇದ್ದಲ್ಲಿ ಕಟ್ಟಡಗಳ ಮೇಲೆ ಮೂರು ಮೀಟರ್ ಎತ್ತರದಲ್ಲಿ ನಿರ್ಮಾಣ ಮಾಡಬೇಕು. ನಿರ್ಮಾಣ ಮಾಡಿದ ಟವರ್‌ನಿಂದ ಸ್ಥಳೀಯ ಜನರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.

Leave a Reply