1.ಸುಲೈಮಾನ್ 2. ಪರಮೇಶ್ವರ 3. ಜಾಕೀರ್ 4. ಅಬ್ದುಲ್ ರೌಫ್ 5. ಉದಯ ಪೂಜಾರಿ 6. ತಂಜೀಮ್ 7. ದೀಪಕ್

ಇದು ಕಾಟಿಪಳ್ಳ ಗ್ರಾಮದಲ್ಲಿ ಎರಡು ದಶಕದ ಅವಧಿಯಲ್ಲಿ, ಮತೀಯ ದ್ವೇಷದಲ್ಲಿ ಕೊಲೆಯಾದವರ ಪಟ್ಟಿ. ಪ್ರತಿ ಕೊಲೆಯಾದಾಗಲೂ ಊರು ತತ್ತರಿಸಿದೆ. ಘರ್ಷಣೆಗಳು ನಡೆದಿವೆ. ಹಲವರು ಹಲ್ಲೆಗೊಳಗಾಗಿದ್ದಾರೆ. ಆಸ್ತಿ ಪಾಸ್ತಿ ನಷ್ಟಗೊಂಡಿದೆ. ಸಾವಿರಾರು ಜನರ ಮೆರವಣಿಗೆಯಲ್ಲಿ ಅಂತಿಮ ಯಾತ್ರೆ ನಡೆದಿದೆ. ಕೊಲೆಗಡುಕರು ಮಾತ್ರ ಅಲ್ಲ, “ಆಕ್ರೋಶ”ದಿಂದ ಕಲ್ಲು ತೂರಿದ ನೂರಾರು ಜನ ಜೈಲು ಸೇರಿದ್ದಾರೆ. ಕೋರ್ಟು, ಕಚೇರಿ ಅಲೆದಿದ್ದಾರೆ. ಅಂದು ಕೊಲೆಯಾದವ ” ನಮ್ಮವ, ಹುತಾತ್ಮ” ಎಂದು ವೀರಾವೇಷದ ಭಾಷಣ ಮಾಡಿದವರಾರು ನಂತರ ಆ ಕೊಲೆಯಾದವರ ಬಡಪಾಯಿ ಕುಟುಂಬಗಳನ್ನು ತಿರುಗಿ ನೋಡಿದ್ದಿಲ್ಲ. ಸತ್ತವರ ಮನೆಯಲ್ಲಿ ಈಗ ಒಲೆ ಉರಿಯುತ್ತದಾ ? ಮನೆ ಬಾಡಿಗೆ ಕಟ್ಟುತ್ತಿದ್ದಾರ ? ಮಕ್ಕಳ, ತಮ್ಮಂದಿರ ಶಿಕ್ಷಣ, ಅಕ್ಕಂದಿರ ಮದುವೆ ನಡೆಯಿತಾ ? ಎಂದು ಕೇಳುವವರಿಲ್ಲ. ಶವಯಾತ್ರೆಯಲ್ಲಿ ಭಾಗಿಯಾದವರಿಗೂ ಇವರ ಕುಟುಂಬ ಪರಿಸ್ಥಿತಿಯ ಮಾಹಿತಿ ಇಲ್ಲ. ಕೊನೆಗೆ ನೋವು ಶಾಶ್ವತವಾದದ್ದು ಕುಟುಂಬಗಳಿಗೆ ಮಾತ್ರ.

ಧರ್ಮ ಕಾರಣದ ಆಯುಧಗಳಾಗಿ ಕೊಲೆಯನ್ನು ಮಾಡಿದವರು ಆ ಕ್ಷಣಕ್ಕಷ್ಟೆ “ತಮ್ಮವರಿಗೆ ಹೀರೋಗಳು” ನಂತರ ಅವರೂ ಬಳಸಿ ಬಿಸಾಕಿದ ಗುಜರಿಗಳಾಗಿದ್ದಾರೆ. ಒಂದಿಬ್ಬರು ಪ್ರತೀಕಾರದ ಕೊಲೆಗೆ ಬಲಿಯಾಗಿದ್ದಾರೆ. ಕಲ್ಲು ತೂರಿ ಜೈಲು ಸೇರಿದವರು ಪೊಲೀಸ್ ಠಾಣೆಯ ಕ್ರಿಮಿನಲ್ ಪಟ್ಟಿಯಿಂದ ಹೊರಬರಲಾರದೆ ತಮ್ಮ ಅಮೂಲ್ಯ ಯೌವ್ವನವನ್ನು ಕಳೆದು ಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲು “ಧರ್ಮಕ್ಕಾಗಿ” ಕೊಲೆ ಮಾಡುವವರು, ಕೊಲೆಯ ಬೆನ್ನಿಗೆ ಕಲ್ಲು ತೂರುವವರು ಹುಟ್ಟುತ್ತಲೇ ಇದ್ದಾರೆ. ಹೆಣವನ್ನು ಮುಂದಿಟ್ಟು, ವಾಹನದ ಮೇಲೇರಿ ಭಾಷಣ ಮಾಡುವವರು ಭಾಷಣ ಮಾಡುತ್ತಲೇ ನಾಯಕರಾಗುತ್ತಿದ್ದಾರೆ. ಅಧಿಕಾರದತ್ತ ಚಲಿಸುತ್ತಿದ್ದಾರೆ.
ಒಂದೊಂದು ಕೊಲೆಗಳು ಒಂದು ಕುಟುಂಬವನ್ನು ಅನಾಥವಾಗಿಸುತ್ತಲೇ ರಾಜಕೀಯ ಪಕ್ಷಗಳ ಚುನಾವಣಾ ಸಿದ್ದತೆಗೆ ಇಂಧನವಾಗುತ್ತದೆ. ಇನ್ನು ಕೆಲವು ದಿನ, ದೀಪಕ್ ಕುಟುಂಬವೂ ಮರೆತು ಹೋಗುತ್ತದೆ. ಮತ್ತೊಂದು ಹೆಣ ಬೀಳುತ್ತದೆ, ಮತ್ತೆ ಶವ ಮೆರವಣಿಗೆ, ಭಾಷಣ, ರಾಜಕಾರಣ, ಜೀವ ಕೈಯ್ಯಲ್ಲಿ ಹಿಡಿದು ಬದುಕುವ ಜನ. ಕಾಟಿಪಳ್ಳದಲ್ಲಿ ಬದುಕು ಹೀಗೆ ಮುಂದುವರಿಯುತ್ತದೆ.

ಮುನೀರ್ ಕಾಟಿಪಳ್ಳ

Leave a Reply